ಲೋಕಸಭಾ ಸ್ಪೀಕರ್ ಹುದ್ದೆ: ಬಿಜೆಪಿಗೆ ಜೆಡಿಯು ಬೆಂಬಲ

ಲೋಕಸಭಾ ಸ್ಪೀಕರ್ ಹುದ್ದೆ: ಬಿಜೆಪಿಗೆ ಜೆಡಿಯು ಬೆಂಬಲ

ನವದೆಹಲಿ, ಜೂ. 14: ತಮ್ಮ ಪಕ್ಷ ಮತ್ತು ತೆಲುಗು ದೇಶಂ ಪಕ್ಷ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ ಭಾಗವಾಗಿದ್ದು, ಲೋಕಸಭಾ ಸ್ಪೀಕರ್ ಹುದ್ದೆಗೆ ಬಿಜೆಪಿ ಸೂಚಿಸುವ ಅಭ್ಯರ್ಥಿಯನ್ನು ಬೆಂಬಲಿಸುವುದಾಗಿ ಜೆಡಿಯು ನಾಯಕ ಕೆ.ಸಿ. ತ್ಯಾಗಿ ಹೇಳಿದ್ದಾರೆ. ಹೊಸ ಲೋಕಸಭಾ ಸ್ಪೀಕರ್ ಹುದ್ದೆ ಟಿಡಿಪಿ ಅಥವಾ ಜೆಡಿಯು ಪಕ್ಷಕ್ಕೆ ಸಿಗಬಹುದು ಎಂಬ ಕೆಲವು ವಿರೋಧ ಪಕ್ಷದ ನಾಯಕರ ಟೀಕೆಗಳ ಬಗ್ಗೆ ಉತ್ತರಿಸಿದ ಅವರು, ಕೇಂದ್ರ ಸರ್ಕಾರದಲ್ಲಿ ಬಿಜೆಪಿ ತನ್ನ ಮಿತ್ರಪಕ್ಷಗಳೊಂದಿಗೆ ಸಮ್ಮಿಶ್ರ ಸರ್ಕಾರವನ್ನು ಮುನ್ನಡೆಸುತ್ತಿದೆ. ನಾವು ಬಿಜೆಪಿ ನಾಮನಿರ್ದೇಶನ ಮಾಡುವ ಅಭ್ಯರ್ಥಿಗೆ ಬೆಂಬಲ ನೀಡುತ್ತೇವೆ ಎಂದಿದ್ದಾರೆ.

ಕೆ.ಸಿ. ತ್ಯಾಗಿ ಅವರ ಹೇಳಿಕೆಗಳು ಬಿಜೆಪಿಯೇ ಸ್ಪೀಕರ್ ಸ್ಥಾನಕ್ಕೆ ತನ್ನ ನಾಮನಿರ್ದೇಶನವನ್ನು ಮಾಡುವ ಸಾಧ್ಯತೆಯಿದೆ ಮತ್ತು ಅಭ್ಯರ್ಥಿಯು ಪಕ್ಷದ ಮಿತ್ರಪಕ್ಷಗಳ ನಡುವೆ ಇಲ್ಲದಿರಬಹುದು ಎಂಬುದರ ಸೂಚನೆಯಾಗಿದೆ. 18ನೇ ಲೋಕಸಭೆಯ ಮೊದಲ ಅಧಿವೇಶನದಲ್ಲಿ ಜೂನ್ 26ರಂದು ಲೋಕಸಭಾ ಸ್ಪೀಕರ್ ಹುದ್ದೆಗೆ ಚುನಾವಣೆ ನಿಗದಿಯಾಗಿದೆ. ಲೋಕಸಭೆಯು ತನ್ನ ಹೊಸ ಸ್ಪೀಕರ್ ಅನ್ನು ಜೂನ್ 26ರಂದು ಆಯ್ಕೆ ಮಾಡಲಿದ್ದು, ಅಭ್ಯರ್ಥಿಗಳನ್ನು ಬೆಂಬಲಿಸುವ ಪ್ರಸ್ತಾವನೆಗಳ ಸೂಚನೆಗಳನ್ನು ಸದಸ್ಯರು ಒಂದು ದಿನ ಮುಂಚಿತವಾಗಿ ಮಧ್ಯಾಹ್ನ 12 ಗಂಟೆಯೊಳಗೆ ಸಲ್ಲಿಸಬಹುದು.

ಸ್ಪೀಕರ್ ಯಾವಾಗಲೂ ಆಡಳಿತ ಪಕ್ಷದವರಾಗಿರುತ್ತಾರೆ. ಏಕೆಂದರೆ ಮೈತ್ರಿಕೂಟಗಳಲ್ಲಿ ಬಿಜೆಪಿ ಸದಸ್ಯರ ಸಂಖ್ಯೆಯೂ ಅತ್ಯಧಿಕವಾಗಿದೆ” ಎಂದು ಜೆಡಿಯು ನಾಯಕ ಕೆ.ಸಿ. ತ್ಯಾಗಿ ಹೇಳಿದ್ದಾರೆ. 18ನೇ ಲೋಕಸಭೆಯು ಜೂನ್ 24ರಂದು ಮೊದಲ ಬಾರಿಗೆ ಸಭೆ ಸೇರಲಿದ್ದು, ಜುಲೈ 3ರಂದು ಅಧಿವೇಶನ ಮುಕ್ತಾಯವಾಗಲಿದೆ. ನೂತನವಾಗಿ ಆಯ್ಕೆಯಾದ ಸದಸ್ಯರ ಪ್ರಮಾಣ ವಚನ ಸ್ವೀಕಾರಕ್ಕೆ ಮೊದಲ ಎರಡು ದಿನ ಮೀಸಲಾಗಿದ್ದರೆ, ಜೂನ್ 26ಕ್ಕೆ ಸ್ಪೀಕರ್ ಆಯ್ಕೆಗೆ ದಿನಾಂಕ ನಿಗದಿಯಾಗಿದೆ. ಜೂನ್ 27ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಲೋಕಸಭೆ ಮತ್ತು ರಾಜ್ಯಸಭೆಯ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

Previous Post
ಅಹಂಕಾರಿಗಳನ್ನು ರಾಮನು 241ಕ್ಕೆ ನಿಲ್ಲಿಸಿದನು: RSS ಪ್ರತಿಕ್ರಿಯೆ
Next Post
ಕುವೈತ್‌ ಅಗ್ನಿ ದುರಂತದ ಸ್ಥಳಕ್ಕೆ ತೆರಳಲು ಮುಂದಾಗಿದ್ದ ಕೇರಳದ ಸಚಿವೆ ವೀಣಾ ಜಾರ್ಜ್‌ಗೆ ಕೇಂದ್ರದ ಅಡ್ಡಿ?

Recent News