ಲೋಕಸಭೆಗೂ ಮುನ್ನ ಆಪ್ ಧ್ವಂಸಗೊಳಿಸುವ ಹುನ್ನಾರ ದೆಹಲಿ ಹೈಕೋರ್ಟ್‌ನಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಆರೋಪ ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯ ಆದೇಶ ಕಾಯ್ದಿರಿಸಿದ ಕೋರ್ಟ್

ಲೋಕಸಭೆಗೂ ಮುನ್ನ ಆಪ್ ಧ್ವಂಸಗೊಳಿಸುವ ಹುನ್ನಾರ ದೆಹಲಿ ಹೈಕೋರ್ಟ್‌ನಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಆರೋಪ ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯ ಆದೇಶ ಕಾಯ್ದಿರಿಸಿದ ಕೋರ್ಟ್

ನವದೆಹಲಿ : ತಮ್ಮನ್ನು ಜಾರಿ ನಿರ್ದೇಶನಾಲಯ ಬಂಧಿಸಿರುವುದು ಮತ್ತು ಮದ್ಯ ನೀತಿ ಪ್ರಕರಣದಲ್ಲಿ ರಿಮಾಂಡ್ ಮಾಡಿರುವುದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್‌ ಬುಧವಾರ ತನ್ನ ಆದೇಶವನ್ನು ಕಾಯ್ದಿರಿಸಿದೆ. ಲೋಕಸಭೆ ಚುನಾವಣೆಗೆ ಮುನ್ನ ತನ್ನ ಪಕ್ಷವನ್ನು ಧ್ವಂಸಗೊಳಿಸುವ ಉದ್ದೇಶದಿಂದ ತನ್ನ ಬಂಧನವಾಗಿದೆ ಎಂದು ಕೇಜ್ರಿವಾಲ್ ಹೇಳಿಕೊಂಡರೆ, ದೇಶವನ್ನು ಲೂಟಿ ಮಾಡುವವರು ಚುನಾವಣೆಗಳನ್ನು ಉಲ್ಲೇಖಿಸಿ ವಿನಾಯಿತಿ ಪಡೆಯಲು ಸಾಧ್ಯವಿಲ್ಲ ಎಂದು ಇಡಿ ಹೇಳಿದೆ.

ಇಡಿ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು, ತನಿಖಾ ಸಂಸ್ಥೆ ತನ್ನನ್ನು ಬಂಧಿಸಿರುವುದನ್ನು ಪ್ರಶ್ನಿಸಿ ಕೇಜ್ರಿವಾಲ್ ಸಲ್ಲಿಸಿರುವ ಅರ್ಜಿಯನ್ನು ತಿರಸ್ಕರಿಸಬೇಕು ಎಂದರು. ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಎಎಪಿಯ ಕೆಲವು ಆಸ್ತಿಗಳನ್ನು ಜಪ್ತಿ ಮಾಡಲು ಬಯಸಿದೆ ಆದರೆ ಸಂದಿಗ್ಧ ಸ್ಥಿತಿಯಲ್ಲಿದೆ, ನಾವು ಒಂದು ವೇಳೆ ಹಾಗೆ ಮಾಡಿದರೆ ಅವರು ಚುನಾವಣೆ ಸಮಯದಲ್ಲಿ ಇದೆಲ್ಲ ಏನು ಎಂದು ಅರೋಪ ಮಾಡುತ್ತಾರೆ ಎಂದು ಇಡಿ ನ್ಯಾಯಾಲಯಕ್ಕೆ ತಿಳಿಸಿದೆ.

ಮದ್ಯದ ನೀತಿ ಪ್ರಕರಣದಲ್ಲಿ ಕೇಜ್ರಿವಾಲ್ ಪಾತ್ರದ ತನಿಖೆಯು ಆರಂಭಿಕ ಹಂತದಲ್ಲಿದೆ, ಹಣದ ಜಾಡು ಪತ್ತೆಯಾಗಿದೆ ಎಂದು ಇಡಿ ಹೇಳಿದೆ. ಯಾರೇ ಅಪರಾಧ ಮಾಡಿದರು ಕಂಬಿಗಳ ಹಿಂದೆ ಹೋಗಬೇಕು, ಆದರೆ ನೀವು ಮುಖ್ಯಮಂತ್ರಿಯಾಗಿರುವುದರಿಂದ ನಿಮ್ಮನ್ನು ಬಂಧಿಸಲಾಗುವುದಿಲ್ಲವೇ? ನೀವು ದೇಶವನ್ನು ಲೂಟಿ ಮಾಡುತ್ತೀರಿ ಆದರೆ ಚುನಾವಣೆಗಳು ಬರುತ್ತಿರುವ ಕಾರಣ ಯಾರೂ ನಿಮ್ಮನ್ನು ಮುಟ್ಟಲು ಸಾಧ್ಯವಿಲ್ಲ ಎಂದು ಭಾವಿಸಿದ್ದೀರಾ? ಎಂದು ಎಎಸ್‌ಜಿ ಕೇಳಿದರು.

ನಾವು ಹಣದ ಜಾಡು ಪತ್ತೆ ಮಾಡಿದ್ದೇವೆ, ಹಣವನ್ನು ಹೇಗೆ ಬಳಸಿರಬಹುದು ಮತ್ತು ಅದಕ್ಕಾಗಿಯೇ ಏನು ಮಾಡಿದೆ ಆ ಬಗ್ಗೆ ಮಾಹಿತಿ ಇಲ್ಲ ಎಂದು ಎಎಸ್‌ಜಿ ತಿಳಿಸಿದ್ದಾರೆ. ರಾಜಕೀಯ ಪ್ರೇರಿತ ಬಂಧನ ಎಂಬ ಕೇಜ್ರಿವಾಲ್ ಅವರ ವಾದಕ್ಕೆ ಪ್ರತಿಕ್ರಿಯಿಸಿದ ಎಎಸ್‌ಜಿ, ರಾಜಕಾರಣಿಯೂ ಆಗಿರುವ ಭಯೋತ್ಪಾದಕನ ಪ್ರಕರಣವನ್ನು ತೆಗೆದುಕೊಳ್ಳಿ, ಅವನು ಸೇನಾ ವಾಹನವನ್ನು ಸ್ಫೋಟಿಸಿ, ನಾನು ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸುತ್ತೇನೆ, ಆದ್ದರಿಂದ ನೀವು ಮುಟ್ಟಲು ಸಾಧ್ಯವಿಲ್ಲ ಎಂದು ಹೇಳಿದರೇ ಇದು ಯಾವ ರೀತಿಯ ವಾದ? ಎಂದು ತಿರುಗೇಟು ನೀಡಿದರು.

ಕೇಜ್ರಿವಾಲ್ ಅವರ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಕೇಜ್ರಿವಾಲ್ ಬಂಧನದ ಸಮಯ ಪ್ರಶ್ನಾರ್ಹವಾಗಿದೆ, ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ ಎಂದು ಒತ್ತಿ ಹೇಳಿದರು. ಲೋಕಸಭೆ ಚುನಾವಣೆಗೆ ಮುನ್ನ ತಮ್ಮ ಪಕ್ಷವನ್ನು ಧ್ವಂಸಗೊಳಿಸುವ ಗುರಿಯನ್ನು ಹೊಂದಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಎಎಸ್‌ಜಿ ಮಾಡಿರುವ ಭಯೋತ್ಪಾದಕ ಹೋಲಿಕೆಗೆ ಸಿಂಘ್ವಿ ಆಕ್ಷೇಪ ವ್ಯಕ್ತಪಡಿಸಿದರು. ಭಯೋತ್ಪಾದಕರು ಸೇನಾ ವಾಹನವನ್ನು ಸ್ಫೋಟಿಸಿದ ವಿಲಕ್ಷಣ ಉದಾಹರಣೆಗಳೊಂದಿಗೆ ಅವರು ಬಂದಿದ್ದಾರೆ. ಇದು ವಿಲಕ್ಷಣ ಉದಾಹರಣೆಯಾಗಿದೆ ಎಂದು ಅವರು ಹೇಳಿದರು. ಕೇಜ್ರಿವಾಲ್ ಅಕ್ರಮ ಹಣ ವರ್ಗಾವಣೆಯಲ್ಲಿ ಭಾಗಿಯಾಗಿರುವ ಬಗ್ಗೆ ಯಾವುದೇ ಪುರಾವೆಗಳಿಲ್ಲ ಎಂದು ಸಿಂಘ್ವಿ ಹೇಳಿದ್ದರು. ದೆಹಲಿ ಮುಖ್ಯಮಂತ್ರಿ ಹವಾಲಾ ವಹಿವಾಟು ನಡೆಸುತ್ತಾರೆ ಎಂದು ಹೇಳುವುದು ಅಪಹಾಸ್ಯ ಎಂದು ಅವರು ಹೇಳಿದರು. ವಾದ ಪ್ರತಿವಾದ ಆಲಿಸಿದ ಬಳಿಕ ಕೋರ್ಟ್ ಆದೇಶ ಕಾಯ್ದಿರಿಸಿದೆ.

Previous Post
ವಯನಾಡ್‌ನಿಂದ ನಾಮಪತ್ರ ಸಲ್ಲಿಸಿದ ರಾಹುಲ್ ಗಾಂಧಿ ಅಮೇಥಿ ಬಿಟ್ಟು ಎರಡನೇ ಬಾರಿಗೆ ಕೇರಳಕ್ಕೆ ಮುಖ ಮಾಡಿದ್ದೇಕೆ ಯುವರಾಜ?
Next Post
ಭೂಕಂಪನಕ್ಕೆ ನಲುಗಿದ ದ್ವೀಪರಾಷ್ಟ್ರ ತೈವಾನ್‌: 7.5 ತೀವ್ರತೆಯ ಭೂಕಂಪನ, 25 ವರ್ಷಗಳಲ್ಲೇ ಶಕ್ತಿ ಶಾಲಿ ಕಂಪನ

Recent News