ಲೋಕಸಭೆಗೆ ಮಲ್ಲಿಕಾರ್ಜುನ್ ಖರ್ಗೆ ಸ್ಪರ್ಧೆ ಅನುಮಾನ
ನವದೆಹಲಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆಯಿಂದ ಹಿಂದೆ ಸರಿಯಬಹುದು ಎಂದು ಮೂಲಗಳು ತಿಳಿಸಿವೆ. ಕಳೆದ ವಾರ ಕಲಬುರಗಿ ಕ್ಷೇತ್ರದ ಟಿಕೆಟ್ ಬಗ್ಗೆ ಚರ್ಚಿಸಲಾಗಿತ್ತು. ಕರ್ನಾಟಕದ ಅಭ್ಯರ್ಥಿಗಳ ಪಟ್ಟಿಯಲ್ಲಿ ಖರ್ಗೆ ಹೆಸರು ಸೇರಿಸಲು ಯಾರಿಂದಲೂ ವಿರೋಧವಿಲ್ಲ. ಆದರೂ ಖರ್ಗೆ ಅವರು ತಮ್ಮ ಅಳಿಯ ರಾಧಾಕೃಷ್ಣನ್ ದೊಡ್ಡಮನಿ ಅವರಿಗೆ ಟಿಕೆಟ್ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಮಲ್ಲಿಕಾರ್ಜುನ್ ಖರ್ಗೆ ಅವರು ಕಲಬುರಗಿ ಕ್ಷೇತ್ರದಿಂದ ಎರಡು ಬಾರಿ ಗೆದ್ದಿದ್ದರು. ಆದರೆ 2019 ರಲ್ಲಿ ಸೋತರು. ನಂತರ ರಾಜ್ಯಸಭೆ ಪ್ರವೇಶಿಸಿ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಅವರಿಗೆ ಮೇಲ್ಮನೆಯಲ್ಲಿ ಇನ್ನೂ ನಾಲ್ಕು ವರ್ಷ ಬಾಕಿ ಇದೆ. ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಸಚಿವರಾಗಿದ್ದಾರೆ. ಅವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಉತ್ಸುಕರಾಗಿಲ್ಲ ಎಂದು ವರದಿಗಳು ಹೇಳಿವೆ
ಪಕ್ಷದ ವರಿಷ್ಠರು ಚುನಾವಣೆಗೆ ಸ್ಪರ್ಧಿಸದಿರುವ ಬಗ್ಗೆ ಕಾಂಗ್ರೆಸ್ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ. ಕಳೆದ ಚುನಾವಣೆಯಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಇಬ್ಬರೂ ಸ್ಪರ್ಧಿಸಿ ಗೆದ್ದಿದ್ದರು. ರಾಹುಲ್ ಗಾಂಧಿ ಅವರು 2019 ರಲ್ಲಿ ಸ್ಮೃತಿ ಇರಾನಿ ವಿರುದ್ಧ ಸೋತಿದ್ದರು. ಕೇರಳದ ವಯನಾಡಿನಿಂದ ಗೆದ್ದಿದ್ದರು.