ಲೋಕಸಭೆಯ ಸ್ಪೀಕರ್‌ ಆಗಿ 2 ನೇ ಬಾರಿಗೆ ಓಂ ಬಿರ್ಲಾ ಆಯ್ಕೆ

ಲೋಕಸಭೆಯ ಸ್ಪೀಕರ್‌ ಆಗಿ 2 ನೇ ಬಾರಿಗೆ ಓಂ ಬಿರ್ಲಾ ಆಯ್ಕೆ

ನವದೆಹಲಿ: 18ನೇ ಲೋಕಸಭೆಯ ಸ್ಪೀಕರ್‌ ಆಗಿ 2 ನೇ ಬಾರಿಗೆ ಓಂ ಬಿರ್ಲಾ ಆಯ್ಕೆಯಾಗಿದ್ದಾರೆ. ಧ್ವನಿ ಮತದ ಮೂಲಕ ಲೋಕಸಭೆ ಸ್ಪೀಕರ್ ಆಗಿ ಓಂ ಬಿರ್ಲಾ ಆಯ್ಕೆಯಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಓಂ ಬಿರ್ಲಾ ಹೆಸರನ್ನು ಪ್ರಸ್ತಾಪಿಸಿದರು. ನಂತರ ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿ ಅವರನ್ನು ಸ್ಪೀಕರ್‌ ಕುಳಿತುಕೊಳ್ಳುವ ಆಸನಕ್ಕೆ ಕರೆದೊಯ್ದರು. ಈ ವೇಳೆ ಮೋದಿಯವರು, ನೀವು ಎರಡನೇ ಬಾರಿಗೆ ಈ ಸ್ಥಾನವನ್ನು ಅಲಂಕರಿಸಿರುವುದು ಸದನದ ಸೌಭಾಗ್ಯ. ನಾನು ನಿಮ್ಮನ್ನು ಮತ್ತು ಇಡೀ ಸದನವನ್ನು ಅಭಿನಂದಿಸುತ್ತೇನೆ ಎಂದು ಹೇಳಿದರು.

ಪ್ರತಿಪಕ್ಷಗಳಿಗೆ ಉಪಸಭಾಪತಿ ಸ್ಥಾನ ನೀಡುವಂತೆ ಷರತ್ತು ಹಾಕಿದ್ದರು. ಈ ಬಗ್ಗೆ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವೆ ಒಮ್ಮತ ಮೂಡಿರಲಿಲ್ಲ. ಎನ್‌ಡಿಎಯಿಂದ ಓಂ ಬಿರ್ಲಾ ಮತ್ತು ವಿರೋಧ ಪಕ್ಷದಿಂದ ಕೆ. ಸುರೇಶ್ ಅಭ್ಯರ್ಥಿಯಾಗಿದ್ದರು. ಸ್ವಾತಂತ್ರ್ಯದ ನಂತರ, ಲೋಕಸಭೆಯ ಸ್ಪೀಕರ್ ಮತ್ತು ಉಪಸಭಾಪತಿಯನ್ನು ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವಿನ ಒಮ್ಮತದ ಮೂಲಕ ಆಯ್ಕೆ ಮಾಡಲಾಗುತಿತ್ತು. ಆದರೆ ಈ ಬಾರಿ ಇಂಡಿಯಾ ಬಣ ಅಭ್ಯರ್ಥಿ ಘೋಷಣೆಯ ನಂತರ ಚುನಾವಣೆ ನಡೆದಿದೆ. ಈ ಹಿಂದೆ 1952 ಮತ್ತು 1976ರಲ್ಲಿ ಲೋಕಸಭಾ ಸ್ಪೀಕರ್ ಹುದ್ದೆಗೆ ಚುನಾವಣೆ ನಡೆದಿತ್ತು.

ಈ ಮೊದಲು ಓ ಬಿರ್ಲಾ ಅವರು 2019 ರಿಂದ 2024 ರವರೆಗೆ ಲೋಕಸಭೆಯ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದು, ಇದೀಗ ಮುಂದಿನ 2029ರವರೆಗೆ ಮತ್ತೆ ಎರಡನೇ ಭಾರಿಗೆ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ. 18ನೇ ಲೋಕಸಭಾ ಈ ಸ್ಪೀಕರ್ ಹುದ್ದೆಗೆ INDIA ಬಣದಿಂದ ಕೋಡಿಕುನ್ನಿಲ್ ಸುರೇಶ್ ಹಾಗೂ ಎನ್‌ಡಿಎ ಮೈತ್ರಿಕೂಟದಿಂದ ಓಂ ಬಿರ್ಲಾ ಅವರು ಸ್ಪೀಕರ್ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದರು.

ಪ್ರಕ್ರಿಯೆ ಬಳಿಕ ಮಾತನಾಡಿದ ರಾಹುಲ್ ಗಾಂಧಿ, 18ನೇ ಲೋಕಸಭೆಯ ಸ್ಪೀಕರ್ ಆಗಿ ಆಯ್ಕೆಯಾಗಿರುವ ಓಂ ಬಿರ್ಲಾ ಅವರನ್ನು ಅಭಿನಂದಿಸಿದರು‌. ಪ್ರತಿಪಕ್ಷಗಳಿಗೆ ಮಾತನಾಡಲು ಅವಕಾಶ ಮಾಡಿಕೊಡಬೇಕು ಮತ್ತು ಭಾರತದ ಸಂವಿಧಾನವನ್ನು ರಕ್ಷಿಸುವ ಕರ್ತವ್ಯವನ್ನು ನಿರ್ವಹಿಸಬೇಕು ಎಂದು ಒತ್ತಾಯಿಸಿದರು. ಪ್ರತಿ ಪಕ್ಷಗಳು ನೀವು ನಿಮ್ಮ ಕೆಲಸವನ್ನು ಸಮರ್ಥವಾಗಿ ಮುಂದುವರಿಸಬೇಕು ಮತ್ತು ಸದನ ಉತ್ತಮವಾಗಿ ಕಾರ್ಯನಿರ್ವಹಿಸಬೇಕೆಂದು ಬಯಸುತ್ತದೆ. ಸಹಕಾರ, ನಂಬಿಕೆಯ ಆಧಾರದ ಮೇಲೆ ಸದನ ನಡೆಯುವುದು ಬಹಳ ಮುಖ್ಯ ಎಂದು ರಾಹುಲ್ ಹೇಳಿದರು.

ರಾಹುಲ್ ಗಾಂಧಿಯ ಬಳಿಕ ಸದನವನ್ನು ಉದ್ದೇಶಿಸಿ ಮಾತನಾಡಿದ ಅಖಿಲೇಶ್ ಯಾದವ್ “ವಿರೋಧ ಪಕ್ಷದ ಧ್ವನಿಯನ್ನು ನೀವು ಹತ್ತಿಕ್ಕುವುದಿಲ್ಲ, ಇನ್ನು ಮುಂದೆ ಯಾವುದೇ ಉಚ್ಚಾಟನೆಗಳು ಇರುವುದಿಲ್ಲ ಎಂದು ನಾವು ನಿರೀಕ್ಷಿಸುತ್ತೇವೆ ಎಂದು ಹೇಳಿದರು. ನೀವು ತಾರತಮ್ಯವಿಲ್ಲದೆ ಮುಂದುವರಿಯುತ್ತೀರಿ ಮತ್ತು ಸ್ಪೀಕರ್ ಆಗಿ, ನೀವು ಪ್ರತಿ ಪಕ್ಷಕ್ಕೂ ಸಮಾನ ಅವಕಾಶ ಮತ್ತು ಗೌರವವನ್ನು ನೀಡುತ್ತೀರಿ ಎಂದು ನಾವು ನಂಬುತ್ತೇವೆ. ನಿಷ್ಪಕ್ಷಪಾತವು ಈ ದೊಡ್ಡ ಹುದ್ದೆಯ ದೊಡ್ಡ ಜವಾಬ್ದಾರಿಯಾಗಿದೆ. ಇಲ್ಲಿ ಕುಳಿತಿರುವ ನೀವು ಪ್ರಜಾಪ್ರಭುತ್ವದ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಎಂದು ಅಖಿಲೇಶ್ ಹೇಳಿದರು.

ಓಂ ಬಿರ್ಲಾ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ. ಓಂ ಬಿರ್ಲಾ ಅವರ ರಾಜಕೀಯದ ಕೇಂದ್ರಬಿಂದು ಅಂದರೆ ಅದು ಸಮಾಜಸೇವೆ. ಕಳೆದ ಅವಧಿಯಲ್ಲಿ ಸ್ಪೀಕರ್‌ ಆಗಿದ್ದ ಬಿರ್ಲಾ ಅವರ ಅನುಭವವು ದೇಶಕ್ಕೆ ಮತ್ತಷ್ಟು ಮಾರ್ಗದರ್ಶನ ನೀಡಲು ಸಹಾಯ ಮಾಡುತ್ತದೆ ಎಂದಿದ್ದಾರೆ. ರಾಜಸ್ಥಾನದ ಕೋಟಾದಲ್ಲಿ ಯಾವುದೇ ವ್ಯಕ್ತಿ ಹಸಿವಿನಿಂದ ಬಳಲಬಾರದೆಂದು ಇಂದಿಗೂ ಶ್ರಮಿಸುತ್ತಿದ್ದಾರೆ ಎಂದು ಓಂಬಿರ್ಲಾ ಸೇವೆಯನ್ನು ನೆನಪಿಸಿಕೊಂಡರು.

Previous Post
ದೆಹಲಿ ಜಲ ಬಿಕ್ಕಟ್ಟು: ಸಚಿವೆ ಅತಿಶಿ ಆಸ್ಪತ್ರೆಗೆ ದಾಖಲು
Next Post
ಚನ್ನಪಟ್ಟಣ ಉಪ ಚುನಾವಣೆ ಅಭ್ಯರ್ಥಿ ಆಯ್ಕೆಗೆ ದೆಹಲಿಯಲ್ಲಿ ಕಸರತ್ತು

Recent News