ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆ ಏಪ್ರಿಲ್ 19 ರಿಂದ ಏಳು ಹಂತದಲ್ಲಿ ಮತದಾನ | ಜೂನ್ 04 ರಂದು ಫಲಿತಾಂಶ ; ಕರ್ನಾಟಕದಲ್ಲಿ ಎರಡು ಹಂತದಲ್ಲಿ ಮತದಾನ
ನವದೆಹಲಿ : 18ನೇ ಲೋಕಸಭಾ ಚುನಾವಣೆಗೆ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಶನಿವಾರ ಘೋಷಣೆ ಮಾಡಿದೆ. 7 ಹಂತಗಳಲ್ಲಿ ಮತದಾನ ನಡೆಯಲಿದೆ. ಚುನಾವಣಾ ನೀತಿ ಸಂಹಿತೆ ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್ ತಿಳಿಸಿದ್ದಾರೆ.
ದೆಹಲಿಯ ವಿಜ್ಞಾನ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜ್ಞಾನೇಶ್ ಕುಮಾರ್ ಮತ್ತು ಸುಖ್ಬೀರ್ ಸಿಂಗ್ ಸಂಧು ಚುನಾವಣಾ ಆಯುಕ್ತರಾಗಿ ನೇಮಕವಾಗಿದ್ದಾರೆ. ಭಾರತೀಯ ಪ್ರಜಾಪ್ರಭುತ್ವದ ಅತಿದೊಡ್ಡ ಹಬ್ಬಕ್ಕೆ ನಾವು ಸಂಪೂರ್ಣ ಸಿದ್ಧರಾಗಿದ್ದೇವೆ ಎಂದು ಹೇಳಿದರು.
ದೇಶದಲ್ಲಿ 543 ಲೋಕಸಭಾ ಕ್ಷೇತ್ರ, ಮುಕ್ತ, ಪಾರದರ್ಶಕ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ಸಂಪೂರ್ಣ ತಯಾರಿಯಾಗಿದ್ದು, 7 ಹಂತಗಳಲ್ಲಿ ಮತದಾನ ನಡೆಯಲಿದೆ. ಏಪ್ರಿಲ್ 19 ರಂದು ಮೊದಲ ಹಂತದ ಮತದಾನ ನಡೆಯಲಿದೆ. ಜೂನ್ 4ರಂದು ಮತ ಎಣಿಕೆ ಹಾಗೂ ಫಲಿತಾಂಶ ಪ್ರಕಟಗೊಳ್ಳಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.
ಏಪ್ರಿಲ್ 26 ಮತ್ತು ಮೇ 7ರಂದು ಕರ್ನಾಟಕದಲ್ಲಿ 2 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ದಕ್ಷಿಣ ಕರ್ನಾಟಕದಲ್ಲಿ ಎರಡನೇ ಹಂತದಲ್ಲಿ ಮತದಾನ ನಡೆಯಲಿದ್ದು, ಉತ್ತರ ಕರ್ನಾಟಕ ಮೂರನೇ ಹಂತದಲ್ಲಿ ಮತದಾನ ನಡೆಯಲಿದೆ. ಚುನಾವಣಾ ಮಾದರಿ ನೀತಿ ಸಂಹಿತೆ ಕೂಡ ಇಂದಿನಿಂದಲೇ ಜಾರಿಗೆ ಬರಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.
ದೇಶಾದ್ಯಂತ 10.5 ಲಕ್ಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ದೇಶದಲ್ಲಿ ಒಟ್ಟು 97 ಕೋಟಿ ಮತದಾರರು ಇದ್ದಾರೆ. 49.7 ಕೋಟಿ ಪುರುಷ ಮತದಾರರು ಇದ್ದಾರೆ. 47.1ಕೋಟಿ ಮಹಿಳಾ ಮತದಾರರು ಇದ್ದಾರೆ. 85 ವಯಸ್ಸು ಮೇಲ್ಪಟ್ಟ 82 ಲಕ್ಷ ಹಿರಿಯ ಮತದಾರರು ಇದ್ದಾರೆ ಎಂದು ರಾಜೀವ್ ಕುಮಾರ್ ವಿವರಿಸಿದರು. ಅಭ್ಯರ್ಥಿಗಳು ಕ್ರಿಮಿನಲ್ ಕೇಸ್ ಇದ್ದರೆ ಅದರ ಬಗ್ಗೆ ಮಾಹಿತಿ ನೀಡುವುದು ಕಡ್ಡಾಯವಾಗಿರುತ್ತದೆ, ಅದನ್ನು ಮುಚ್ಚಿಡಬಾರದು. ಇನ್ನೂ ಮತಗಟ್ಟೆಗಳಿಗೆ ನೀರು, ವಿದ್ಯುತ್ ಸಂಪರ್ಕ, 80 ವರ್ಷ ಮೇಲ್ಪಟ್ಟವರನ್ನು ಕರೆತರಲು ವ್ಹೀಲ್ ಚೇರ್ ಸೇರಿದಂತೆ ಎಲ್ಲ ರೀತಿಯ ಮೂಲಸೌಕರ್ಯ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು
ಉಚಿತ ಕೊಡುಗೆಗಳ ಮೇಲೆ ಕಣ್ಣು
ಮತದಾರರಿಗೆ ಕುಕ್ಕರ್, ಮದ್ಯ, ಹಣ, ಇತರ ವಸ್ತು ಹಂಚುವ ಮೂಲಕ ಆಮಿಷ ಒಡ್ಡಬಾರದು. ಮತದಾರರ ದಿಕ್ಕು ತಪ್ಪಿಸುವಂತಿಲ್ಲ. ಇನ್ನೂ ದೇಶಾದ್ಯಂತ ಇರುವ ಚೆಕ್ಕಪೋಸ್ಟ್‌ಗಳಲ್ಲಿಯೂ ಪೊಲೀಸರು ಕಣ್ಗಾವಲು ವಹಿಸಲಿದ್ದಾರೆ. ನೀತಿ ಸಂಹಿತೆ ಉಲ್ಲಂಘಿಸಿದರೆ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹರಡುವ ಸುಳ್ಳು ಸುದ್ದಿಗಳ ವಿರುದ್ಧ ಕ್ರಮ ವಹಿಸಲು ಕ್ರಮ ವಹಿಸಲಾಗಿದೆ, ಯಾವುದೇ ಅಭ್ಯರ್ಥಿ ಅಥಾವ ವ್ಯವಸ್ಥೆಯ ಬಗ್ಗೆ ಟೀಕೆ ಟಿಪ್ಪಣಿ ಮಾಡಬಹುದು ಆದರೆ ಸುಳ್ಳು ಸುದ್ದಿ ಹರಿಡಿದ್ರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು.
ಕೆಂಪು ಗೆರೆ ದಾಟದಂತೆ ಎಚ್ಚರಿಕೆ
ಪ್ರಚಾರ ಮಾಡುವಾಗ ಕೆಂಪು ಗೆರೆಯನ್ನು ದಾಟದಂತೆ ಪಕ್ಷಗಳಿಗೆ ರಾಜೀವ್ ಕುಮಾರ್ ಹೇಳಿದರು. ದೇಶದಲ್ಲಿ ರಾಜಕೀಯ ಚರ್ಚೆಯ ಮಟ್ಟ ಕುಸಿಯುತ್ತಿದೆ ಎಂದು ಹೇಳಿದ ಅವರು, ಎಲ್ಲಾ ರಾಜಕೀಯ ಪಕ್ಷಗಳಿಗೆ ಬಲವಾದ ಸಲಹೆಯನ್ನು ನೀಡಲಾಗಿದೆ ಎಂದು ಶನಿವಾರ ಹೇಳಿದರು. ಎಲ್ಲ ಮಾದರಿ ನೀತಿ ಸಂಹಿತೆ (ಎಂಸಿಸಿ) ಉಲ್ಲಂಘನೆಗಳ ಡೇಟಾವನ್ನು ಸಂಗ್ರಹಿಸಿದ ನಂತರ, ನಾವು ಅಂತಿಮ ಸಲಹೆಯನ್ನು ನೀಡಿದ್ದೇವೆ. ನಾವು ರಾಜಕೀಯ ಪಕ್ಷಗಳ ಮೇಲೆ ನಿಗಾ ಇಡುತ್ತೇವೆ. ಸ್ಟಾರ್ ಪ್ರಚಾರಕರ ಪಟ್ಟಿ ನೀಡುವಂತೆ ನಾವು ರಾಜಕೀಯ ಪಕ್ಷಗಳನ್ನು ಕೇಳಿದ್ದೇವೆ ಮಾರ್ಗಸೂಚಿಗಳನ್ನು ನೀಡುತ್ತೇವೆ ಎಂದು ಅವರು ಹೇಳಿದರು.
ಪ್ರತಿಯೊಬ್ಬ ಸ್ಟಾರ್ ಪ್ರಚಾರಕರ ಗಮನಕ್ಕೆ ಈ ಮಾರ್ಗಸೂಚಿಗಳನ್ನು ತರುವುದು ರಾಜಕೀಯ ಪಕ್ಷಗಳ ಜವಾಬ್ದಾರಿಯಾಗಿದೆ. ಆದ್ದರಿಂದ ನಾವು ಅವುಗಳನ್ನು ನೀಡಿದ್ದೇವೆ ಮತ್ತು ಈ ಮಾರ್ಗಸೂಚಿಗಳ ಬಗ್ಗೆ ನಾವು ತಿಳಿದುಕೊಳ್ಳುತ್ತೇವೆ. ಕಳೆದ ಬಾರಿ ಹಲವು ಸೂಚನೆಗಳನ್ನು ನೀಡಿದ್ದೀರಿ. ಆದರೆ ಏನೂ ಮಾಡಲಿಲ್ಲ ಎಂದು ಜನರು ಕೇಳುತ್ತಿದ್ದರು. ಈಗ ನಾವು ಅದನ್ನೆಲ್ಲಾ ಮೀರಿ ಹೋಗುತ್ತೇವೆ; ನಾವು ಭೂತಕಾಲ ಮತ್ತು ಇತಿಹಾಸವನ್ನು ಸಹ ನೋಡುತ್ತೇವೆ. ಪ್ರಮುಖ ನಿರ್ಣಯವನ್ನು ತೆಗೆದುಕೊಳ್ಳುತ್ತೇವೆ ಎಂದು ಅವರು ಹೇಳಿದರು. ವಿಭಜಿಸುವ ಮತ್ತು ಪ್ರೇರೇಪಿಸುವ ಯಾವುದೇ ದ್ವೇಷದ ಭಾಷಣಗಳಿಲ್ಲ ಎಂದು ಖಚಿತಪಡಿಸಿಕೊಳ್ಳುವುದರ ಮೇಲೆ ಗಮನ ಹರಿಸಲಾಗುತ್ತದೆ. ಜಾತಿ ಅಥವಾ ಧಾರ್ಮಿಕ ಮನವಿಗಳನ್ನು ಮಾಡದಿರುವುದು, ಖಾಸಗಿ ಜೀವನದ ಯಾವುದೇ ಅಂಶವನ್ನು ಟೀಕಿಸದಿರುವುದು ಸಹ ಸಲಹೆಯ ಭಾಗವಾಗಿದೆ ಎಂದರು.
* ಮೊದಲ ಹಂತದ ಮತದಾನ: ಏಪ್ರೀಲ್ 19
* ಎರಡನೇ ಹಂತದ ಮತದಾನ: ಏಪ್ರೀಲ್ 26
* ಮೂರನೇ ಹಂತದ ಮತದಾನ : ಮೇ 7
* ನಾಲ್ಕನೇ ಹಂತದ ಮತದಾನ : ಮೇ 13
* ಐದನೇ ಹಂತದ ಮತದಾನ : ಮೇ 20
* ಆರನೇ ಹಂತದ ಮತದಾನ : ಮೇ 25
* ಏಳನೇ ಹಂತದ ಮತದಾನ : ಜೂನ್ 01
* ಚುನಾವಣಾ ಫಲಿತಾಂಶ : ಜೂನ್ 04
=======
ನವದೆಹಲಿ : ಕರ್ನಾಟಕದಲ್ಲಿ ಎರಡು ಹಂತದಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಏಪ್ರಿಲ್ 26ರಂದು ಮೊದಲ ಹಂತದ ಮತದಾನ ಮತ್ತು ಮೇ 7ರಂದು ಎರಡನೇ ಹಂತದ ಮತದಾನ ನಡೆಯಲಿದೆ. 14 ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಮತ್ತು ಇನ್ನುಳಿದ 14 ಕ್ಷೇತ್ರಗಳಿಗೆ 2ನೇ ಹಂತದಲ್ಲಿ ಮತದಾನ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಮೊದಲ ಹಂತದಲ್ಲಿ ಚಿತ್ರದುರ್ಗ, ಚಾಮರಾಜನಗರ, ಬೆಂಗಳೂರ ಉತ್ತರ, ಬೆಂಗಳೂರು ದಕ್ಷಿಣ, ದಕ್ಷಿಣ ಕನ್ನಡ, ಉಡುಪಿ-ಚಿಕ್ಕಮಗಳೂರು, ಹಾಸನ, ಚಿಕ್ಕಬಳ್ಳಾಪುರ, ಬೆಂಗಳೂರು ಕೇಂದ್ರ, ತುಮಕೂರು, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಮೈಸೂರು-ಕೊಡಗು, ಕೋಲಾರ ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ.
ಬೆಳಗಾವಿ, ಬಳ್ಳಾರಿ, ಚಿಕ್ಕೋಡಿ, ಹಾವೇರಿ-ಗದಗ, ಕಲಬುರ್ಗಿ, ಬೀದರ್, ಧಾರವಾಡ, ಕೊಪ್ಪಳ
ರಾಯಚೂರು, ಉತ್ತರಕನ್ನಡ, ದಾವಣಗೆರೆ, ಶಿವಮೊಗ್ಗ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳಲ್ಲಿ 2ನೇ ಹಂತದ ಮತದಾನ ನಡೆಯಲಿದೆ. ರಾಜ್ಯದಲ್ಲೂ ಮಾರ್ಚ್ 16 ರಿಂದಲೇ ನೀತಿ ಸಂಹಿತೆ ಜಾರಿಯಾಗಲಿದೆ ಎಂದು ಆಯೋಗ ಹೇಳಿದೆ.