ವಿಧಾನ ಪರಿಷತ್ ಚುನಾವಣೆ ಮೂವರು ಅಭ್ಯರ್ಥಿಗಳನ್ನ ಘೋಷಿಸಿದ ಬಿಜೆಪಿ

ವಿಧಾನ ಪರಿಷತ್ ಚುನಾವಣೆ ಮೂವರು ಅಭ್ಯರ್ಥಿಗಳನ್ನ ಘೋಷಿಸಿದ ಬಿಜೆಪಿ

ನವದೆಹಲಿ: ಕರ್ನಾಟಕ ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಸಿ.ಟಿ ರವಿ ಸೇರಿ ಮೂವರು ಅಭ್ಯರ್ಥಿಗಳಿಗೆ ಟಿಕೆಟ್‌ ಘೋಷಣೆ ಮಾಡಿದೆ. ಪರಿಷತ್‌ ಸ್ಥಾನಕ್ಕೆ ಮಾಜಿ ಸಚಿವ ಸಿ.ಟಿ ರವಿ, ಪರಿಷತ್ ಮುಖ್ಯ ಸಚೇತಕ ಎನ್. ರವಿಕುಮಾರ್ ಹಾಗೂ ಮಾಜಿ ಶಾಸಕ ಎಂ.ಜಿ ಮುಳೆ ಅವರಿಗೆ ಟಿಕೆಟ್‌ ಘೋಷಣೆ ಮಾಡಲಾಗಿದೆ.

ಸೋಮವಾರ ನಾಮಪತ್ರ ಸಲ್ಲಿಕೆಗೆ ಕೊನೇ ದಿನವಾದ ಹಿನ್ನೆಲೆಯಲ್ಲಿ ಇಂದು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಹೈಕಮಾಂಡ್‌ ಕೋಟಾದಿಂದ ಸಿ.ಟಿ ರವಿ, ರಾಜ್ಯ ಬಿಜೆಪಿ ಕೋಟಾದಿಂದ ಎನ್. ರವಿಕುಮಾರ್ ಹಾಗೂ ಆರ್‌ಎಸ್‌ಎಸ್‌ ಕೋಟಾದ ಅಡಿಯಲ್ಲಿ ಮಾರುತಿರಾವ್ ಗೋವಿಂದರಾವ್ ಮುಳೆ (ಎಂ.ಜಿ ಮುಳೆ) ಅವರಿಗೆ ಟಿಕೆಟ್‌ ನೀಡಲಾಗಿದೆ

ಮಾಜಿ ಶಾಸಕರೂ ಆಗಿರುವ ಎಂ.ಜಿ ಮುಳೆ ಮರಾಠ ಸಮುದಾಯದ ಪ್ರಭಾವಿ ನಾಯಕರೂ ಆಗಿದ್ದಾರೆ. ಈ ಮೊದಲು ಜೆಡಿಎಸ್‌ನಲ್ಲಿ ಶಾಸಕರಾಗಿದ್ದ ಮುಳೆ ಕಳೆದ ಬಸವಕಲ್ಯಾಣ ಉಪಚುನಾವಣೆ ವೇಳೆ ಬಿಜೆಪಿ ಸೇರ್ಪಡೆಗೊಂಡಿದ್ದರು. ಪ್ರಸಕ್ತ ವರ್ಷದ ಲೋಕಸಭಾ ಚುನಾವಣೆ ವೇಳೆ ಬಿಜೆಪಿ ಸೇರ್ಪಡೆಗೊಂಡ ಸಂಸದೆ ಸುಮಲತಾ ಅವರಿಗೆ ಪರಿಷತ್‌ನಲ್ಲಿ ಟಿಕೆಟ್‌ ನೀಡಲಾಗುತ್ತಿದೆ ಎಂಬ ಮಾತುಗಳು ಕೇಳಿಬಂದಿತ್ತು. ಆದ್ರೆ ಕೊನೇ ಕ್ಷಣದಲ್ಲಿ ಟಿಕೆಟ್‌ ಕೈತಪ್ಪಿದೆ. ಇದರೊಂದಿಗೆ ಮಾಜಿ ಸಚಿವ ಜೆ.ಸಿ ಮಾಧುಸ್ವಾಮಿ, ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಶಾಸಕ ಎನ್.ಮಹೇಶ್ ಅವರಿಗೂ ಟಿಕೆಟ್‌ ಕೈತಪ್ಪಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಎಂ.ಜಿ.ಮುಳೆ ನಾನು ನನ್ನ ಶಕ್ತಿ ಪ್ರಕಾರ ಪಕ್ಷಕ್ಕೆ ದುಡಿದ್ದೇನೆ ಪಕ್ಷ ನನಗೆ ಅವಕಾಶ ಕೊಟ್ಟಿದೆ ಬಹಳ ಸಂತೋಷ ಆಗುತ್ತಿದೆ ನನ್ನ ಗುರುತಿಸಿ ಅವಕಾಶ ನೀಡಿದಕ್ಕೆ ಧನ್ಯವಾದ ಹೇಳುತ್ತೇನೆ ನಾನು ರಾಜ್ಯ ನಾಯಕರಿಗೂ, ರಾಷ್ಟ್ರೀಯ ನಾಯಕರಿಗೂ ಮನವಿ ಮಾಡಿದ್ದೆ ಜನರ ಸಮಸ್ಯೆ ಇದೆ, ಜನರ ಪರವಾಗಿ ಪರಿಷತ್ ‌ನಲ್ಲಿ ಶಕ್ತಿ ಮೀರಿ ಕೆಲಸ ಮಾಡುತ್ತೇನೆ. ನಮ್ಮ ಮರಾಠ ಸಮುದಾಯ ಸ್ವಲ್ಪ ಅವಕಾಶ ವಂಚಿತ ಆಗಿದೆ, ನಮ್ಮ ಸಮುದಾಯದಲ್ಲಿ ಸಾಕಷ್ಟು ಸಮಸ್ಯೆ ಇದೆ ಎಲ್ಲಾ ಸಮಸ್ಯೆಗಳು ಗಮನಹರಿಸಿ ಪರಿಹಾರ ಕೊಡುವ ಕೆಲಸ ಮಾಡುತ್ತೇನೆ ಎಂದರು.

ಕರ್ನಾಟಕ ವಿಧಾನಪರಿಷತ್ತಿನ ಚುನಾವಣೆಗೆ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಕ್ಕೆ ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ ನಡ್ಡಾ, ಕೇಂದ್ರ ಸಂಸದೀಯ ಮಂಡಳಿ ಸದಸ್ಯರಾದ ಬಿ.ಎಸ್ ಯಡಿಯೂರಪ್ಪ, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಗಳಾದ ಬಿ.ಎಲ್ ಸಂತೋಷ್, ಕೇಂದ್ರ ಗೃಹ ಸಚಿವರಾದ ಅಮಿತ್ ಶಾ, ರಾಜ್ಯಾಧ್ಯಕ್ಷರಾದ ಬಿ.ವೈ ವಿಜಯೇಂದ್ರ ಅವರಿಗೆ ಹಾಗೂ ರಾಜ್ಯ ಕೋರ್ ಕಮಿಟಿಯ ಎಲ್ಲಾ ನನ್ನ ಸಹೋದ್ಯೋಗಿ ಬಂಧುಗಳಿಗೆ ಹೃತ್ಪೂರ್ವಕ ಧನ್ಯವಾದಗಳು ಎಂದು ಸಿ.ಟಿ ರವಿ ಟ್ವಿಟ್ ಮಾಡಿದ್ದಾರೆ.

Previous Post
ಇಡೀ ದೇಶದಲ್ಲೇ ವಿದೇಶಿ ನೇರ ಬಂಡವಾಳ ಹೂಡಿಕೆ ಕುಸಿದಿದೆ; ಸಚಿವ ಎಂ.ಬಿ ಪಾಟೀಲ
Next Post
ಜಾಮೀನು ಅವಧಿ ಅಂತ್ಯ, ತಿಹಾರ್‌ಗೆ ಮರಳಿದ ಕೇಜ್ರಿವಾಲ್

Recent News