ವ್ಯಕ್ತಿಗೆ ಥಳಿಸಿ ಮೂತ್ರ ಕುಡಿಯುವಂತೆ ಬಲವಂತ
ಭೂಪಾಲ್, ಮೇ 29: ಮಧ್ಯಪ್ರದೇಶದ ಗುನಾ ಜಿಲ್ಲೆಯಿಂದ ಬುಡಕಟ್ಟು ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬನನ್ನು ಅಪಹರಿಸಿ ರಾಜಸ್ಥಾನಕ್ಕೆ ಕರೆದೊಯ್ದು ಥಳಿಸಿ, ಬಲವಂತವಾಗಿ ಮೂತ್ರ ಕುಡಿಸಿ, ಮಹಿಳೆಯರ ಉಡುಪಿನಲ್ಲಿ ಮೆರವಣಿಗೆ ನಡೆಸಿರುವ ಅಮಾನವೀಯ ಘಟನೆ ನಡೆದಿದೆ.
ಸಂತ್ರಸ್ತ ವ್ಯಕ್ತಿಯನ್ನು ಮಹೇಂದ್ರ ಸಿಂಗ್ ಎಂದು ಗುರುತಿಸಲಾಗಿದೆ. ಸಂತ್ರಸ್ತನ ಕುಟುಂಬಸ್ಥರನ್ನು ಒಳಗೊಂಡ ಗುಂಪು ಈ ಕೃತ್ಯವನ್ನು ನಡೆಸಿದೆ. ವ್ಯಕ್ತಿಯನ್ನು ಮರಕ್ಕೆ ಕಟ್ಟಿ ಹಾಕಿ, ಪಾದರಕ್ಷೆಗಳ ಮಾಲೆಯನ್ನು ತೊಡುವಂತೆ ಬಲವಂತ ಮಾಡಲಾಗಿದೆ. ಮಹೇಂದ್ರ ಸಿಂಗ್ ಎಂಬ ಸಂತ್ರಸ್ತ ಆರಂಭದಲ್ಲಿ ತನ್ನ ದೂರನ್ನು ದಾಖಲಿಸಲಿಲ್ಲ. ಈ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿಯ ಗಮನಕ್ಕೆ ತಂದ ನಂತರ ಫತೇಘರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿದ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ್ ಸಿನ್ಹಾ, ಈ ಘಟನೆಯು ಮೇ 22ರಂದು ನಡೆದಿದ್ದು, ರಾಜಸ್ಥಾನದಲ್ಲಿ ಹಲ್ಲೆ ನಡೆದಿದ್ದರೂ, ಈ ಬಗ್ಗೆ ಸೋಮವಾರ ತಡರಾತ್ರಿ ಗುಣಾದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ, ಏಕೆಂದರೆ ಅಲ್ಲಿಂದ ಅವರನ್ನು ಅಪಹರಿಸಲಾಗಿದೆ ಎಂದು ತಿಳಿಸಿದ್ದಾರೆ.
ದೂರಿನ ಪ್ರಕಾರ ಆರೋಪಿಗಳು ಚಿತ್ರಹಿಂಸೆಯ ವೀಡಿಯೊವನ್ನು ಚಿತ್ರೀಕರಿಸಿ ಅದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಇದಲ್ಲದೆ ಸಂತ್ರಸ್ತನನ್ನು ರಾಜಸ್ಥಾನದ ವಿವಿಧ ಸ್ಥಳಗಳಿಗೆ ಕರೆದೊಯ್ಯಲಾಗಿತ್ತು. ಆತನನ್ನು ಬಿಡುಗಡೆ ಮಾಡಲು ಅಪಹರಣಕಾರರು ಆತನ ತಂದೆ ಫೂಲ್ ಸಿಂಗ್ ಅವರಿಂದ 25 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಫೂಲ್ ಸಿಂಗ್ ಪೊಲೀಸರನ್ನು ಸಂಪರ್ಕಿಸಿದಾಗ, ಅವರು ಕ್ರಮ ಕೈಗೊಳ್ಳುವ ಬದಲು ಹಣ ನೀಡುವಂತೆ ಒತ್ತಾಯಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದೀಗ ನ್ಯಾಯಕ್ಕಾಗಿ ಸಂತ್ರಸ್ತ ಕುಟುಂಬ ಹೈಕೋರ್ಟ್ ಮೊರೆ ಹೋಗಲು ಮುಂದಾಗಿದೆ.
ಆರೋಪಿಗಳಾದ ಸೌದನ್ ಸಿಂಗ್, ಗುಮಾನ್ ಸಿಂಗ್ ಮತ್ತು ಓಂಕಾರ್ ಸೇರಿಂದತೆ 10-12 ಮಂದಿಯಿದ್ದ ಗುಂಪು ನನ್ನನ್ನು ಕರೆದುಕೊಂಡು ಹೋಗಿ ಹಲ್ಲೆ ನಡೆಸಿದ್ದಾರೆ. ಅವರು ನನ್ನ ತಲೆಯನ್ನು ಬೋಳಿಸಿ, ಮೂತ್ರ ಕುಡಿಯುವಂತೆ ಬಲವಂತ ಮಾಡಿದರು, ಪಾದರಕ್ಷೆಯಿಂದ ಮಾಡಿದ ಮಾಲೆಯನ್ನು ಧರಿಸುವಂತೆ ಮಾಡಿದರು ಮತ್ತು ನನ್ನ ಮುಖಕ್ಕೆ ಕಪ್ಪು ಬಣ್ಣವನ್ನು ಬಳಿದಿದ್ದಾರೆ. ಬಳಿಕ ಅವರು ನನ್ನನ್ನು ಇಡೀ ಗ್ರಾಮದಲ್ಲಿ ಮೆರವಣಿಗೆ ಮಾಡಿದರು. ನಂತರ ನನ್ನನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿದ್ದಾರೆ. ಆದ್ದರಿಂದ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಆತ್ಮಹತ್ಯೆ ಹೊರತು ನನಗೆ ಬೇರೆ ದಾರಿ ಕಾಣಿಸುತ್ತಿಲ್ಲ ಎಂದು ದೂರುದಾರ ಹೇಳಿದ್ದಾರೆ.
ವ್ಯಕ್ತಿಯನ್ನು ಜೀಪಿನಲ್ಲಿ ಅಪಹರಿಸಿ, ಥಳಿಸಿ, ಚಪ್ಪಲಿ ಹಾರವನ್ನು ಹಾಕಿ, ಮಹಿಳೆಯ ಬಟ್ಟೆಗಳನ್ನು ಧರಿಸುವಂತೆ ಮಾಡಿದರು ಮತ್ತು ಮೂತ್ರ ಕುಡಿಸುವಂತೆ ಒತ್ತಾಯಿಸಿದರು. ಆರೋಪಿಗಳು ಮೂರು ದಿನಗಳಲ್ಲಿ 20 ಲಕ್ಷ ರೂ.ಗಳನ್ನು ಪಾವತಿಸುವ ಷರತ್ತಿನ ಮೇಲೆ ಕೊನೆಗೆ ವ್ಯಕ್ತಿಯನ್ನು ಬಿಡುಗಡೆ ಮಾಡಿದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದೀಗ ಪ್ರಕರಣಕ್ಕೆ ಸಂಬಂಧಿಸಿ 7 ಮಂದಿ ಆರೋಪಿಗಳ ವಿರುದ್ಧ 506 (ಕ್ರಿಮಿನಲ್ ಬೆದರಿಕೆ), 365 (ಅಪಹರಣ) ಸೇರಿದಂತೆ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಎಸ್‌ಪಿ ಸಿಂಗ್ ಹೇಳಿದ್ದಾರೆ.