ಶಾಸಕ ಸ್ಥಾನಕ್ಕೆ ಜೂನ್‌ 17ರಂದು ಬೊಮ್ಮಾಯಿ ರಾಜೀನಾಮೆ,

ಶಾಸಕ ಸ್ಥಾನಕ್ಕೆ ಜೂನ್‌ 17ರಂದು ಬೊಮ್ಮಾಯಿ ರಾಜೀನಾಮೆ,

ಹಾವೇರಿ: ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಸದಸ್ಯರಾಗಿ ಆಯ್ಕೆಯಾಗಿರುವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಜೂನ್‌17ರ ಸೋಮವಾರದಂದು ಬೊಮ್ಮಾಯಿ ಅವರು ಕರ್ನಾಟಕ ವಿಧಾನಸಭೆ ಅಧ್ಯಕ್ಷ ಯು.ಟಿ.ಖಾದರ್‌ ಅವರನ್ನು ಖುದ್ದು ಭೇಟಿ ಮಾಡಿ ರಾಜೀನಾಮೆ ನೀಡಲಿದ್ದಾರೆ.ಬೊಮ್ಮಾಯಿ ಅವರು ಕಳೆದ ವರ್ಷ ಸತತ ನಾಲ್ಕನೇ ಬಾರಿಗೆ ಹಾವೇರಿ ಶಿಗ್ಗಾಂವಿ- ಸವಣೂರು ಮತ ಕ್ಷೇತ್ರದಿಂದ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿದ್ದರು. ಇದಾದ ಬಳಿಕ ಬಿಜೆಪಿ ಅವರಿಗೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವಂತೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಅವರು ಚುನಾವಣೆಗೆ ಸ್ಪರ್ಧಿಸಿ ಗೆದ್ದು ಬಂದಿದ್ದರು. ಈಗ ಎರಡೂ ಸ್ಥಾನ ಉಳಿಸಿಕೊಳ್ಳುವ ಹಾಗಿಲ್ಲ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ.ಜೂನ್ 17 ರಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದೇನೆ. ಬಳಿಕ ಶಿಗ್ಗಾಂವಿ ಉಪಚುನಾವಣೆ ಪ್ರಕ್ರಿಯೆ ಶುರುವಾಗಲಿದೆ. ಸಮೀಕ್ಚೆ ನಡೆಸಿ ಜನಾಭಿಪ್ರಾಯ ಯಾರ ಪರ ಇದೆಯೋ ಅವರಿಗೆ ಪಕ್ಷ ಟಿಕೇಟ್ ನೀಡಲಿದೆ. ನಮ್ಮಲ್ಲೂ ಅನೇಕ ಸಮರ್ಥ ಅಭ್ಯರ್ಥಿಗಳಿದ್ದಾರೆ. ಖಂಡಿತವಾಗಿ ಶಿಗ್ಗಾಂವಿ ಉಪಚುನಾವಣೆ ಗೆಲ್ಲಲಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ಗುರುವಾರ ಹಾವೇರಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಪ್ರಕ್ರಿಯೆ ಪ್ರಾರಂಭವಾಗಿಲ್ಲ. ನಾನಿನ್ನು ರಾಜೀನಾಮೆ ಕೊಟ್ಟಿಲ್ಲ. ಇಂದಿಗೂ ನಾನು ಶಿಗ್ಗಾಂವಿ ಕ್ಷೇತ್ರದ ಶಾಸಕ. ನಾನು ರಾಜಿನಾಮೆ ಕೊಟ್ಟ ನಂತರ ಉಪಚುನಾವಣೆ ಪ್ರಕ್ರಿಯೆ ಪ್ರಾರಂಭವಾಗುತ್ತದೆ ಎಂದು ಹುಬ್ಬಳ್ಳಿಯಲ್ಲಿ ಗುರುವಾರ ಬೆಳಿಗ್ಗೆ ಬೊಮ್ಮಾಯಿ ಹೇಳಿಕೊಂಡಿದ್ದರು.

ತಮ್ಮ ಪುತ್ರನಿಗೆ ಉಪ ಚುನಾವಣೆಯಲ್ಲಿ ಟಿಕೆಟ್ ನೀಡುವ ವಿಚಾರದ ಕುರಿತು ಕೇಳಿದ ಪ್ರಶ್ನೆಗೆ ಟಿಕೆಟ್ ವಿಚಾರದಲ್ಲಿ ಪಕ್ಷ ತೀರ್ಮಾನ ಮಾಡುತ್ತದೆ. ಪಕ್ಷ ಮಾಡುವ ತೀರ್ಮಾನಕ್ಕೆ ನಾವು ಬದ್ಧವಾಗಿರಬೇಕು. ಪಕ್ಷ ಯಾರಿಗೇ ಟಿಕೆಟ್ ಕೊಟ್ಟರು ಅವರ ಪರವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದರು.ಶಿಗ್ಗಾಂವಿ ಕ್ಷೇತ್ರಕ್ಕೆ ತಮ್ಮ ಪುತ್ರ ಭರತ್‌ ಬೊಮ್ಮಾಯಿಗೆ ಟಿಕೆಟ್‌ ನೀಡುವಂತೆ ಬಸವರಾಜ ಬೊಮ್ಮಾಯಿ ಅವರು ಪಕ್ಷದ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಹಾಗೂ ಪಕ್ಷದ ನಾಯಕರಿಗೆ ಕೋರಿಕೊಂಡಿದ್ದಾರೆ. ಪುತ್ರನಿಗೆ ಟಿಕೆಟ್‌ ನೀಡಿದರೆ ಗೆಲ್ಲಿಸಿಕೊಂಡು ಬರುವುದಾಗಿಯೂ ಹೇಳಿದ್ದಾರೆ. ಆದರೆ ಪಕ್ಷದ ನಾಯಕರು ಯಾವ ತೀರ್ಮಾನ ಕೈಗೊಳ್ಳುತ್ತಾರೆ ಎನ್ನುವ ಕುತೂಹಲವಿದೆ.ಆಗಸ್ಟ್‌ ಇಲ್ಲವೇ ಸೆಪ್ಟಂಬರ್‌ ತಿಂಗಳಲ್ಲಿ ಚುನಾವಣೆ ನಡೆಯಬಹುದು ಎನ್ನಲಾಗುತ್ತಿದೆಇದಲ್ಲದೇ ಮಂಡ್ಯ ಸಂಸದರಾಗಿ ಕೇಂದ್ರದಲ್ಲಿ ಮಂತ್ರಿಯಾಗಿರುವ ಎಚ್.ಡಿ.ಕುಮಾರಸ್ವಾಮಿ ಚನ್ನಪಟ್ಟಣ ಶಾಸಕರು. ಬಳ್ಳಾರಿ ಸಂಸದರಾಗಿರುವ ತುಕಾರಾಂ ಅವರು ಸಂಡೂರು ಶಾಸಕರು. ಹಾಗೂ ಉಡುಪಿ ಚಿಕ್ಕಮಗಳೂರು ಸಂಸದರಾಗಿರುವ ವಿಧಾನಪರಿಷತ್‌ ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸಪೂಜಾರಿ ಅವರು ದಕ್ಷಿಣ ಕನ್ನಡ ಉಡುಪಿ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳ ವಿಧಾನಪರಿಷತ್‌ ಸದಸ್ಯ. ಅವರು ರಾಜೀನಾಮೆ ನೀಡಬೇಕಾಗುತ್ತದೆ.ಚನ್ನಪಟ್ಟಣ ಮರು ಚುನಾವಣೆಗೆ ಕುಮಾರಸ್ವಾಮಿ ಪುತ್ರ ನಿಖಿಲ್‌ ಕುಮಾರಸ್ವಾಮಿ, ಸಂಡೂರು ಕ್ಷೇತ್ರಕ್ಕೆ ತುಕಾರಾಂ ಪತ್ನಿ ಇಲ್ಲವೇ ಪುತ್ರಿ ಹಾಗೂ ಉಡುಪಿಯಲ್ಲಿ ಪಕ್ಷದ ಕಾರ್ಯಕರ್ತರೊಬ್ಬರಿಗೆ ಅವಕಾಶ ಸಿಗಬಹುದು ಎನ್ನುವ ಮಾತುಗಳು ಕೇಳಿ ಬಂದಿವೆ.

Previous Post
ನೀಟ್-ಯುಜಿ ಪೇಪರ್ ಸೋರಿಕೆ ಬಗ್ಗೆ ಪುರಾವೆಗಳಿಲ್ಲ: ಧರ್ಮೇಂದ್ರ ಪ್ರಧಾನ್
Next Post
ಬಿ.ಎಸ್​​​​ ಯಡಿಯೂರಪ್ಪ ವಿರುದ್ಧ ಅರೆಸ್ಟ್​​​​ ವಾರಂಟ್​​ ಜಾರಿ

Recent News