ಸಂವಿಧಾನದ ವಿರುದ್ಧ ಇರುವವರನ್ನು ಅಧಿಕಾರದಿಂದ ಕಿತ್ತೊಗೆಯಬೇಕು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ

ಸಂವಿಧಾನದ ವಿರುದ್ಧ ಇರುವವರನ್ನು ಅಧಿಕಾರದಿಂದ ಕಿತ್ತೊಗೆಯಬೇಕು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ

ಬೆಂಗಳೂರು, ಫೆ.24 ಸಂವಿಧಾನದ ವಿರುದ್ಧ ಇರುವವರನ್ನು ಅಧಿಕಾರದಿಂದ ಕಿತ್ತೊಗೆಯಬೇಕು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.

ಬೆಂಗಳೂರಿನ ಅರಮನೆ ಮೈದಾನದಲ್ಲಿಂದು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ಸಂವಿದಾನ ಮತ್ತು ರಾಷ್ಟ್ರೀಯ ಐಕ್ಯತಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಸಂವಿಧಾನ ರಕ್ಷಣೆಯಾದರೆ ನಾವೆಲ್ಲರೂ ಉಳಿಯುತ್ತೇವೆ. ಸಂವಿಧಾನದ ವಿರುದ್ಧದ ಅಪಪ್ರಚಾರವನ್ನು ಯಾರೂ ಸಹಿಸಬಾರದು ಎಂದರು.
ನಾವು ಸಂವಿಧಾನದ ಮಾಲೀಕರು. ಸಂವಿಧಾನ ಕಿತ್ತು ಎಸೆಯುವುದರಲ್ಲಿ ನಮ್ಮ ಆಸಕ್ತಿ ಇಲ್ಲ. ಸಂವಿಧಾನದ ವಿರುದ್ಧ ಇರುವವರನ್ನು ಅಧಿಕಾರದಿಂದ ಕಿತ್ತೊಗೆಯಬೇಕು ಎಂದು ಅಮೆರಿಕಾದ ಮಾಜಿ ಅಧ್ಯಕ್ಷ ಅಬ್ರಾಂ ಲಿಂಕನ್ ಅವರ ಮಾತುಗಳನ್ನು ಇದೇ ಸಂದರ್ಭದಲ್ಲಿ ಉಲ್ಲೇಖಿಸಿದರು.
ಸಂವಿಧಾನದ ವಿರುದ್ಧ ಅಪಪ್ರಚಾರಗಳು ನಡೆಯುತ್ತಿವೆ. ಸಂವಿಧಾನ ದಲಿತರ ಉದ್ದಾರಕ್ಕಿದೆ. ಸಮಾಜದ ಹಾಗೂ ಆರ್ಥಿಕ ಪರಿಸ್ಥಿತಿ ಅನುಗುಣವಾಗಿಲ್ಲ ಎಂಬ ಎರಡು ಅಪಪ್ರಚಾರಗಳು ನಡೆದಿವೆ. ಈ ಅಪ ಪ್ರಚಾರಗಳನ್ನು ಯಾರು ಸಹಿಸಬಾರದು ಎಂದು ಅವರು ಹೇಳಿದರು.
ಸಂವಿಧಾನದಲ್ಲಿ ಸ್ವಾತಂತ್ರ್ಯ, ಸಮಾನತೆ, ಭ್ರಾತ್ರತ್ವವನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಸಂವಿಧಾನದ ವಿರುದ್ಧ ಇರುವ ಜನರು ಅಪ ಪ್ರಚಾರ ಮಾಡುತ್ತಿದ್ದಾರೆ. ಇದನ್ನೆಲ್ಲಾ ನಾವು ಅರಿಯಬೇಕು ಹಾಗೂ ಅಪಪ್ರಚಾರ ನಡೆಸುತ್ತಿರುವವರ ಬಗ್ಗೆ ಎಚ್ಚರ ವಹಿಸಬೇಕು ಎಂದು ಮುಖ್ಯಮಂತ್ರಿಗಳು ಹೇಳಿದರು.
ದೇಶದಲ್ಲಿ ಸಂವಿಧಾನ ಜಾರಿಯಾದಾಗಿನಿಂದ ಈ ಅಪಪ್ರಚಾರ ನಡೆಯುತ್ತಿದೆ. ಇದನ್ನು ಸಹಿಸಬಾರದು. ಸಂವಿಧಾನದ ರಕ್ಷಣೆಯಾದರೆ ನಾವೆಲ್ಲರೂ ಉಳಿಯುತ್ತೇವೆ. ಇಲ್ಲದಿದ್ದರೆ ಅಪಾಯಕ್ಕೆ ಸಿಲುಕುತ್ತೇವೆ ಎಂದು ಹೇಳಿದರು.
ಅಸಮಾನತೆ ಅಳಿಸುವುದು ಜವಾಬ್ದಾರಿ
ದೇಶದಲ್ಲಿ ಅಸಮಾನತೆಯನ್ನು ಅಳಿಸಿ ಹಾಕುವುದು ಪ್ರತಿ ಸರ್ಕಾರದ ಜವಾಬ್ದಾರಿಯಾಗಿದೆ ಎಂದ ಮುಖ್ಯಮಂತ್ರಿಗಳು, ದೇಶದಲ್ಲಿ ಅಸಮಾನತೆಯನ್ನು ತೊಲಗಿಸಬೇಕು. ನಾವು ವೈರುದ್ಧ್ಯ ಇರುವ ಸಮಾಜಕ್ಕೆ ಕಾಲಿಡುತ್ತಿದ್ದೇವೆ. ಸಾಮಾಜಿಕ, ಆರ್ಥಿಕ ಅಸಮಾನತೆವುಳ್ಳ ಸಮಾಜದಲ್ಲಿ ರಾಜಕೀಯ ಪ್ರಜಾಪ್ರಭುತ್ವ ಸಾಮಾಜಿಕ ಪ್ರಜಾಪ್ರಭುತ್ವದ ತಳಹದಿಯ ಮೇಲೆ ನಿಂತಾಗ ಮಾತ್ರ ಯಶಸ್ವಿಯಾಗುತ್ತದೆ. ಇಲ್ಲದಿದ್ದರೆ ಅಸಮಾನತೆಯಿಂದ ನರಳುವರು ಪ್ರಜಾಪ್ರಭುತ್ವದ ಸೌಧವನ್ನು ಧ್ಮಂಜ ಮಾಡುತ್ತಾರೆ ಎಂದು ಅಂಬೇಡ್ಕರ್ ಹೇಳಿದ್ದಾರೆ. ಸಾಮಾಜಿಕ ಅಸಮಾನತೆಯನ್ನು ಅಳಿಸಿ ಹಾಕುವುದು ಪ್ರತಿ ಸರ್ಕಾರದ ಜವಾಬ್ದಾರಿ ಎಂದರು.
ಸಂವಿಧಾನ ಯಶಸ್ವಿಯಾದರೂ ಸಂವಿಧಾನ ಯಾರ ಕೈಯಲ್ಲಿದೆ ಎನ್ನುವುದು ಮುಖ್ಯ. ಸಂವಿಧಾನ ಸಮಾನತೆ, ಮಾನವ ಸಮಾಜದ ನಿರ್ಮಾಣದ ಪರವಾಗಿರುವವರ ಕೈಯಲ್ಲಿದ್ದರೆ ಸಂವಿಧಾನ ಯಶಸ್ವಿಯಾಗುತ್ತದೆ. ಸಂವಿಧಾನಕ್ಕೆ ವಿರುದ್ಧವಾಗಿರುವವರ ಕೈಯಲ್ಲಿದ್ದರೆ ನಮಗೆ ಉಳಿಗಾಲವಿಲ್ಲ ಎಂದರು.
ಸಂವಿಧಾನದ ಆಸೆಗಳು ಈಡೇರಲು ಸಂವಿಧಾನದ ಪರವಾಗಿರುವವರ ಕೈಯಲ್ಲಿ ಅಧಿಕಾರವಿರಬೇಕು ಎಂದು ಸಿದ್ಧರಾಮಯ್ಯ ಪ್ರತಿಪಾದಿಸಿದರು.
ದೇಶದಲ್ಲಿ ಸಂವಿಧಾನ ಜಾರಿಯಾದ ಅಮೃತ ಮಹೋತ್ಸವ ಆಚರಣೆ ನಡೆಯುತ್ದಿದೆ. ಇದರ ಅಂಗವಾಗಿ ಸಂವಿಧಾನದ ಪೀಠಿಕೆ, ಕಾರ್ಯಕ್ರಮಗಳು ಓದನ್ನು ಶಾಲೆಗಳಲ್ಲಿ ಜಾರಿ ಮಾಡಿದ್ದೇವೆ. ರಾಜ್ಯದ ಜನರು ಸಂವಿಧಾನದ ಆಶಯಗಳನ್ನು ಅರ್ಥ ಮಾಡಿಕೊಳ್ಳಲು ಎಂದು ೨೦೨೪ರ ಜನವರಿ ೨೬ ರಿಂದ ಸಂವಿಧಾನ ಜಾಥಾವನ್ನು ನಡೆಸಿದ್ದೇವೆ. ರಾಜ್ಯದ ಎಲ್ಲ ಜಿಲ್ಲೆಗಳು ಸಂವಿಧಾನ ಉದ್ದೇಶ, ಅಗತ್ಯ ಅನಿವಾರ್ಯತೆಯನ್ನು ಜನರಿಗೆ ತಿಳಿಸುವ ಕೆಲಸ ಮಾಡಲಾಗಿದೆ. ಅದರ ಭಾಗವಾಗಿಯೇ ಇಂದಿನಿಂದ ಎರಡು ದಿನಗಳ ಕಾಲ ರಾಷ್ಟ್ರೀಯ ಏಕತಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ದೇಶದ ಪ್ರತಿಯೊಬ್ಬರು ಸಂವಿಧಾನವನ್ನು ಓದಬೇಕು ಎಂದು ಸಲಹೆ ಮಾಡಿದ ಮುಖ್ಯಮಂತ್ರಿಗಳು, ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿ ಅನೇಕ ದೇಶಗಳ ಸಂವಿಧಾನ ಓದಿ ಅರ್ಥ ಮಾಡಿಕೊಂಡು ದೇಶದ ಸಮಸ್ಯೆಗಳಿಗೆ ಪರಿಹಾರ ದೊರಕಿಸುವ ರೀತಿಯಲ್ಲಿ ಸಂವಿಧಾನ ರಚಿಸಿದ್ದಾರೆ. ಭಾರತದ ಸಂವಿಧಾನ ಅತ್ಯಂತ ಶ್ರೇಷ್ಠ ಸಂವಿಧಾನ ಎಂದರು.
ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಸಂವಿಧಾನದ ಜಾಗೃತಿ ಬಗ್ಗೆ ಅತ್ಯುತ್ತಮ ಕಾರ್ಯಕ್ರಮಗಳನ್ನು ಆಯೋಜಿಸಿದ ತುಮಕೂರು, ದಾವಣಗೆರೆ, ಮೈಸೂರು, ಕೊಡಗು, ಬಳ್ಳಾರಿ ಜಿಲ್ಲೆಗಳಿಗೆ ಬಹುಮಾನ ವಿತರಿಸಿದರು.
ಕಾರ್ಯಕ್ರಮದ ವಿಧಾನಪರಿಷತ್ ಸಭಾಪತಿ ಬಸವರಾಜಹೊರಟ್ಟಿ, ಸಮಾಜ ಕಲ್ಯಾಣ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಗೋಪಾಲಕೃಷ್ಣ, ಉಚ್ಛ ನ್ಯಾಯಾಲಯ ನಿವೃತ್ತ ನ್ಯಾ. ನಾಗಮಹೋನ್ ದಾಸ್, ಸಚಿವ ಪ್ರಿಯಾಂಕ ಖರ್ಗೆ, ಶಾಸಕ ಸೋಮಶೇಖರ್, ಅಪರ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಜೀರ್ ಅಹಮದ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Previous Post
ಸೇಫ್ ಸಿಟಿ ಯೋಜನೆಯಡಿ ನಗರದಾದ್ಯಂತ 10 ಸಾವಿರ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ತಿಳಿಸಿದ್ದಾರೆ.
Next Post
ಬೇಸಿಗೆಯಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ಕ್ರಮ: ಸಚಿವ ಶಿವರಾಜ್ ತಂಗಡಗಿ

Recent News