ಸಂವಿಧಾನವನ್ನು ಬದಲಾಯಿಸಲು ನಮಗೆ ಉಭಯ ಸದನಗಳಲ್ಲಿ ಅತ್ಯಧಿಕ ಬಹುಮತ ಬೇಕು ಬಿಜೆಪಿ ಅಭ್ಯರ್ಥಿ ಜ್ಯೋತಿ ಮಿರ್ಧಾ ವಿವಾದತ್ಮಾಕ ಹೇಳಿಕೆ

ಸಂವಿಧಾನವನ್ನು ಬದಲಾಯಿಸಲು ನಮಗೆ ಉಭಯ ಸದನಗಳಲ್ಲಿ ಅತ್ಯಧಿಕ ಬಹುಮತ ಬೇಕು ಬಿಜೆಪಿ ಅಭ್ಯರ್ಥಿ ಜ್ಯೋತಿ ಮಿರ್ಧಾ ವಿವಾದತ್ಮಾಕ ಹೇಳಿಕೆ

ಜೈಪುರ : ದೇಶದ ಹಿತಾಸಕ್ತಿಯಿಂದ ಹಲವಾರು ಕಠಿಣ ನಿರ್ಧಾರಗಳನ್ನು ಕೈಗೊಳ್ಳಬೇಕಿದ್ದು, ಅದಕ್ಕಾಗಿ ಸಂವಿಧಾನಕ್ಕೆ ಬದಲಾವಣೆ ಮಾಡಬೇಕಿದೆ. ನಾವು ಸಂವಿಧಾನ ಬದಲಾವಣೆ ಮಾಡಬೇಕಿದ್ದರೆ ಲೋಕಸಭೆ ಹಾಗೂ ರಾಜ್ಯಸಭೆಗಳೆರಡರಲ್ಲೂ ಅಂಗೀಕಾರದ ಅಗತ್ಯವಿದೆ, ಅದಕ್ಕೆ ಬಹುಮತ ಬೇಕಾಗಿದೆ ಎಂದು ಬಿಜೆಪಿ ನಾಯಕಿ ಜ್ಯೋತಿ ಮಿರ್ಧಾ ಸಂವಿಧಾನ ಬದಲಾಯಿಸುವ ಬಗ್ಗೆ ಹೇಳಿಕೆಯನ್ನು ನೀಡಿ ವಿವಾದವನ್ನು ಸೃಷ್ಟಿಸಿದ್ದಾರೆ.

ಮಾರ್ಚ್ 30ರಂದು ರಾಜಸ್ಥಾನದ ರಾಜಾಶನ ನಗೌರ್‌ನಲ್ಲಿ ಮಾತನಾಡಿ ಬಿಜೆಪಿ ನಾಯಕಿ ಜ್ಯೋತಿ ಮಿರ್ಧಾ ಸಂವಿಧಾನ ಬದಲಾಯಿಸುವ ಬಗ್ಗೆ ಉಲ್ಲೇಖಿಸಿದ್ದು, ಸಂವಿಧಾನವನ್ನು ಬದಲಾಯಿಸುವ ಕುರಿತು ಬಿಜೆಪಿ ನಾಯಕಿಯ ಹೇಳಿಕೆ ಪ್ರತಿಪಕ್ಷಗಳ ಟೀಕೆಗೆ ಕಾರಣವಾಗಿದೆ. ಇದಲ್ಲದೆ ಇದು ಬಿಜೆಪಿಯ ಉದ್ದೇಶಪೂರ್ವಕ ಕಾರ್ಯತಂತ್ರದ ಭಾಗವಾಗಿದೆ ಎಂದು ವರದಿಯಾಗಿದೆ.

ಜ್ಯೋತಿ ಮಿರ್ಧಾ ಭಾಷಣವನ್ನು ಎಕ್ಸ್‌ನಲ್ಲಿ ಹಂಚಿಕೊಂಡ ಕಾಂಗ್ರೆಸ್, ಇದು ರಾಜಸ್ಥಾನದ ನಾಗೌರ್‌ನಿಂದ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿ ಜ್ಯೋತಿ ಮಿರ್ಧಾ, ಸಂವಿಧಾನವನ್ನು ಬದಲಾಯಿಸಲು ನಮಗೆ ಉಭಯ ಸದನಗಳಲ್ಲಿ ಅತ್ಯಧಿಕ ಬಹುಮತ ಬೇಕು ಎಂದು ಜ್ಯೋತಿ ಮಿರ್ಧಾ ಹೇಳುತ್ತಾರೆ. ಲೋಕಸಭೆ ಚುನಾವಣೆಯಲ್ಲಿ 400 ಸ್ಥಾನ ಪಡೆದರೆ ಸಂವಿಧಾನ ಬದಲಿಸುತ್ತೇವೆ ಎಂದು ಬಿಜೆಪಿ ಸಂಸದ ಅನಂತ ಹೆಗಡೆ ಕೂಡ ಹೇಳಿದ್ದಾರೆ. ಬಿಜೆಪಿ ಮತ್ತು ಪ್ರಧಾನಿ ಮೋದಿಯವರು ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ದ್ವೇಷಿಸುತ್ತಾರೆ ಎಂಬುದು ಈ ಹೇಳಿಕೆಗಳಿಂದ ಸ್ಪಷ್ಟವಾಗಿದೆ. ಬಾಬಾಸಾಹೇಬರು ನೀಡಿದ ಸಂವಿಧಾನವನ್ನು ರದ್ದುಪಡಿಸುವ ಮೂಲಕ ಬಿಜೆಪಿ ಜನರ ಹಕ್ಕುಗಳನ್ನು ಕಿತ್ತುಕೊಳ್ಳಲು ಹೊರಟಿದೆ ಎಂದು ಹೇಳಿದೆ.

ಲೋಕಸಭೆಯಲ್ಲಿ, ಬಿಜೆಪಿ ಮತ್ತು ಎನ್‌ಡಿಎಗೆ ಭಾರಿ ಜನಾದೇಶವಿದೆ, ಆದರೆ ರಾಜ್ಯಸಭೆಯಲ್ಲಿ ನಮಗೆ ಇನ್ನೂ ಬಹುಮತವಿಲ್ಲ. ಎನ್‌ಡಿಎ ಸರ್ಕಾರ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದರೆ ನಾವು ಸಂವಿಧಾನಕ್ಕೆ ತಿದ್ದುಪಡಿ ಮಾಡಬೇಕಿದ್ದರೆ ಲೋಕಸಭೆ ಹಾಗೂ ರಾಜ್ಯಸಭೆಗಳೆರಡರಲ್ಲೂ ಅಂಗೀಕಾರದ ಅಗತ್ಯವಿದೆ ಎಂದು ಮಿರ್ಧಾ ಹೇಳುವುದನ್ನು ಕೇಳಬಹುದು.

ಕಾಂಗ್ರೆಸ್ ಸಂಸದ ಶಶಿ ತರೂರ್ ಮಿರ್ಧಾ ಹೇಳಿಕೆಗೆ ಪ್ರತಿಕ್ರಿಯಿಸಿ, ಅನಂತ್ ಕುಮಾರ್‌ ಹೆಗಡೆ ಸಂವಿಧಾನ ಬದಲಾಯಿಸುವ ಬಗ್ಗೆ ಹೇಳಿದರು, ಬಿಜೆಪಿ ನಾಯಕರು ಅಭ್ಯರ್ಥಿ ಪಟ್ಟಿಯಿಂದ ಅವರನ್ನು ಕೈಬಿಟ್ಟಿದ್ದರು. ಈಗ ಮತ್ತೊಬ್ಬ ಬಿಜೆಪಿ ಅಭ್ಯರ್ಥಿ ಬಹಿರಂಗವಾಗಿ ಬಿಜೆಪಿಯ ಉದ್ದೇಶ ಸಂವಿಧಾನವನ್ನು ಬದಲಿಸುವುದಾಗಿದೆ ಎಂದು ಹೇಳಿದ್ದಾರೆ. ಸತ್ಯವನ್ನು ಬಹಿರಂಗಪಡಿಸಿದ್ದಕ್ಕಾಗಿ ಬಿಜೆಪಿ ಇನ್ನೂ ಎಷ್ಟು ಅಭ್ಯರ್ಥಿಗಳಿಗೆ ಟಿಕೆಟ್‌ ನಿರಾಕರಿಸಬಹುದು ಎಂದು ಪ್ರಶ್ನಿಸಿದ್ದಾರೆ.

ತರೂರ್ ಅವರ ಟ್ವೀಟ್‌ನ್ನು ಉಲ್ಲೇಖಿಸಿ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಪ್ರತಿಕ್ರಿಯೆ ನೀಡಿದ್ದು, ಇವೆಲ್ಲವನ್ನೂ ಮಹಾಸೂತ್ರದಾರರೇ ಆಯೋಜಿಸಿದ್ದಾರೆ. ಇದು ಉದ್ದೇಶಪೂರ್ವಕ ತಂತ್ರವಾಗಿದೆ ಎಂದು ಹೇಳಿದ್ದಾರೆ.‌ ವಿವಾದ ಬೆನ್ನಲೆ ತಮ್ಮ ಹೇಳಿಕೆ ಸಮರ್ಥಿಸಿಕೊಂಡ ಮಿರ್ಧಾ, 1950ರಿಂದ ಸಂವಿಧಾನಕ್ಕೆ 106 ತಿದ್ದುಪಡಿಗಳನ್ನು ಮಾಡಲಾಗಿದೆ. ನಮ್ಮ ಪವಿತ್ರ ಸಂವಿಧಾನವು ಜೀವಂತ ದಾಖಲೆಯಾಗಿದೆ. ಜನರು ಮತ್ತು ದೇಶದ ಕಲ್ಯಾಣವನ್ನು ಪರಿಗಣಿಸಿ ಕಾಲಕಾಲಕ್ಕೆ ತಿದ್ದುಪಡಿ ಮಾಡಲಾಗುತ್ತದೆ ಎಂದು ಹೇಳಿದ್ದೇನೆ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

Previous Post
ಘರ್ ಘರ್ ಗ್ಯಾರಂಟಿ ಅಭಿಯಾನಕ್ಕೆ ಖರ್ಗೆ ಚಾಲನೆ
Next Post
ಇಡಿ ಬಂಧನ ಅಪಾಯದಲ್ಲಿ ಕೇಜ್ರಿವಾಲ್ ಆರೋಗ್ಯ ಆಪ್ ಆರೋಪ ತಿರಸ್ಕರಿಸಿದ ತಿಹಾರ್ ಜೈಲು ಅಧಿಕಾರಗಳು

Recent News