ಸಂವಿಧಾನ ಬದಲಾವಣೆ ಕುರಿತು ಪ್ರಸ್ತಾಪಿಸಿದ ಮತ್ತೋರ್ವ ಬಿಜೆಪಿ ಸಂಸದ

ಸಂವಿಧಾನ ಬದಲಾವಣೆ ಕುರಿತು ಪ್ರಸ್ತಾಪಿಸಿದ ಮತ್ತೋರ್ವ ಬಿಜೆಪಿ ಸಂಸದ

ಫೈಜಾಬಾದ್, ಏ. 15: ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಬಿಜೆಪಿ ನಾಯಕರು ಸಂವಿಧಾನ ಬದಲಾವಣೆ ಕುರಿತು ಹೇಳಿಕೆಯನ್ನು ನೀಡುತ್ತಿದ್ದಾರೆ. ಈ ಹಿಂದೆ ಉತ್ತರ ಕನ್ನಡ ಸಂಸದ ಅನಂತ್‌ ಕುಮಾರ್‌ ಹೆಗಡೆ ಮತ್ತು ಬಿಜೆಪಿ ನಾಯಕಿ ಜ್ಯೋತಿ ಮಿರ್ಧಾ ಸಂವಿಧಾನ ಬದಲಾವಣೆಯ ಬಗ್ಗೆ ಹೇಳಿಕೆಯನ್ನು ನೀಡಿದ್ದರು. ಇದು ಬಿಜೆಪಿಯ ನೈಜ ಉದ್ದೇಶ ಮತ್ತು ಬಿಜೆಪಿ ಆರೆಸ್ಸೆಸ್‌ನ ಅಂತರಾಳ ಎಂದು ಪ್ರತಿಪಕ್ಷಗಳು ಆರೋಪಿಸಿದ್ದವು. ಬಿಜೆಪಿ ಪ್ರಣಾಳಿಕೆ ಬಗ್ಗೆ ಪ್ರತಿಕ್ರಿಯಿಸಿದ್ದ ಪ್ರತಿಪಕ್ಷಗಳ ನಾಯಕರು ಇದು ತೋರ್ಪಡೆಗೆ ಮಾತ್ರ, ಬಿಜೆಪಿಯ ನೈಜ ಉದ್ದೇಶ ಸಂವಿಧಾನ ಬದಲಾವಣೆ ಮತ್ತು ಪ್ರಜಾಪ್ರಭುತ್ವವನ್ನು ನಾಶ ಮಾಡುವುದು ಎಂದು ಟೀಕಿಸಿದ್ದರು.

ಇದೀಗ ಬಿಜೆಪಿಯ ಫೈಜಾಬಾದ್ ಸಂಸದ ಲಲ್ಲು ಸಿಂಗ್ ಅವರು ಸಂವಿಧಾನದ ಬದಲಾವಣೆಗೆ ಬಿಜೆಪಿಗೆ ಮೂರನೇ ಎರಡರಷ್ಟು ಬಹುಮತದ ಅಗತ್ಯವಿದೆ ಎಂದು ಹೇಳಿದ್ದು, ಈ ಕುರಿತ ವಿಡಿಯೋ ವೈರಲ್‌ ಆಗಿದೆ. ಎಪ್ರಿಲ್ 13 ರಂದು ಅಯೋಧ್ಯೆಯ ಮಿಲ್ಕಿಪುರ್ ತೆಹಸಿಲ್‌ನಲ್ಲಿ ಮಾತನಾಡಿದ ಲಲ್ಲು ಸಿಂಗ್, ಲೋಕಸಭೆ ಚುನಾವಣೆಯಲ್ಲಿ 272 ಸಂಸದರಿದ್ದರೆ ಸರ್ಕಾರ ರಚಿಸಬಹುದು, ಆದರೆ ಸಂವಿಧಾನಕ್ಕೆ ತಿದ್ದುಪಡಿ ಮಾಡಲು ಅಥವಾ ಹೊಸ ಸಂವಿಧಾನವನ್ನು ಪಡೆಯಬೇಕಿದ್ದರೆ ನಮಗೆ ಮೂರನೇ ಎರಡರಷ್ಟು ಬಹುಮತ ಬೇಕು ಎಂದು ಹೇಳಿದ್ದಾರೆ.

ಈ ಕುರಿತು ವಿವಾದವಾಗುತ್ತಿದ್ದಂತೆ ಪ್ರತಿಕ್ರಿಯಿಸಲು ಲಲ್ಲು ಸಿಂಗ್ ನಿರಾಕರಿಸಿದ್ದಾರೆ. ಫೈಝಾಬಾದ್‌ನ ಸಮಾಜವಾದಿ ಪಕ್ಷದ ಅಭ್ಯರ್ಥಿ ಅವಧೇಶ್ ಪ್ರಸಾದ್ ಈ ಕುರಿತು ಪ್ರತಿಕ್ರಿಯೆಯನ್ನು ನೀಡಿದ್ದು, ಲಲ್ಲು ಸಿಂಗ್ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ತೊಡೆದುಹಾಕಲು ಮತ್ತು ಸರ್ವಾಧಿಕಾರ ವ್ಯವಸ್ಥೆ ಜಾರಿಗೆ ತರಲು ಬಯಸುತ್ತಿರುವ ಬಿಜೆಪಿಯ ಗುಪ್ತ ಅಜೆಂಡಾವನ್ನು ಬಹಿರಂಗಪಡಿಸಿದ್ದಾರೆ ಎಂದು ಹೇಳಿದ್ದಾರೆ. ಸಿಂಗ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅಯೋಧ್ಯೆ ಜಿಲ್ಲಾ ಬಿಜೆಪಿಯ ಮಾಧ್ಯಮ ಉಸ್ತುವಾರಿ ರಜನೀಶ್ ಸಿಂಗ್, ಅವರು ಯಾವ ಸಂದರ್ಭದಲ್ಲಿ ಮತ್ತು ಯಾವ ದೃಷ್ಟಿಯಲ್ಲಿ ಈ ರೀತಿ ಹೇಳಿದ್ದಾರೆಂದು ನನಗೆ ಅರ್ಥವಾಗುತ್ತಿಲ್ಲ, ಆದರೆ ಸಂವಿಧಾನವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಸ್ಪಷ್ಟಪಡಿಸಿದ್ದಾರೆ ಎಂದು ಹೇಳಿದ್ದಾರೆ.

ಸಿಂಗ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್, ಪಿಡಿಎ ಬಿಜೆಪಿಯನ್ನು ಸೋಲಿಸುತ್ತದೆ, ಏಕೆಂದರೆ ಹೊಸ ಸಂವಿಧಾನವನ್ನು ಮಾಡುವ ಮೂಲಕ ಹಿಂದುಳಿದ ವರ್ಗಗಳು, ದಲಿತರು ಮತ್ತು ಅಲ್ಪಸಂಖ್ಯಾತರಿಗೆ ನೀಡಲಾದ ಮೀಸಲಾತಿಯನ್ನು ಕೊನೆಗೊಳಿಸಲು ಬಿಜೆಪಿ ಬಯಸುತ್ತದೆ. ಬಿಜೆಪಿ ಗೆಲ್ಲಲು ಬಯಸುವುದು ಜನರ ಸೇವೆ ಅಥವಾ ಜನರ ಕಲ್ಯಾಣಕ್ಕಾಗಿ ಅಲ್ಲ. ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್‌ರವರು ರಚಿಸಿದ ಸಂವಿಧಾನವನ್ನು ಬದಲಾಯಿಸುವ ಗುರಿಯಿಂದ ಗೆಲ್ಲಲು ಬಯಸುತ್ತದೆ.

ಚುನಾವಣಾ ಆಯೋಗವು ಈ ವಿಚಾರದಲ್ಲಿ ಮಧ್ಯಪ್ರವೇಶಿಸಿ ತಕ್ಷಣ ಕ್ರಮ ಕೈಗೊಳ್ಳಬೇಕು. ಸಂವಿಧಾನವನ್ನು ಮೂಲಭೂತವಾಗಿ ಬದಲಾಯಿಸುವ ಬಗ್ಗೆ ಮಾತನಾಡುವುದಕ್ಕಿಂತ ದೊಡ್ಡ ಪ್ರಜಾಪ್ರಭುತ್ವದ ಉಲ್ಲಂಘನೆ ಏನಿದೆ. ನಮ್ಮ ಹಕ್ಕುಗಳನ್ನು ಕೊನೆಗಾಣಿಸುವ ಕುರಿತ ಷಡ್ಯಂತ್ರ ನೀತಿ ಸಂಹಿತೆಯ ಉಲ್ಲಂಘನೆಯಲ್ಲವೇ ಎಂದು ಪ್ರಶ್ನಿಸಿದ್ದಾರೆ.

Previous Post
3ನೇ ಮಹಾಯುದ್ಧ: 200 ಡ್ರೋನ್, ಕ್ಷಿಪಣಿ ಉಡಾಯಿಸಿದ ಇರಾನ್? ಇಸ್ರೇಲ್ ವಿರುದ್ಧ ಯುದ್ಧ ಶುರು?
Next Post
ಗುಜರಾತ್: ಕೇಂದ್ರ ಸಚಿವರ ವಿರುದ್ಧ ಕ್ಷತ್ರಿಯರಿಂದ ಬೃಹತ್ ಪ್ರತಿಭಟನೆ

Recent News