ಸಂಸತ್ ಅಧಿವೇಶನ ಆರಂಭ: ನಾಳೆ ಸ್ಪೀಕರ್ ಆಯ್ಕೆ

ಸಂಸತ್ ಅಧಿವೇಶನ ಆರಂಭ: ನಾಳೆ ಸ್ಪೀಕರ್ ಆಯ್ಕೆ

ನವದೆಹಲಿ, ಜೂ. 24: ಸೋಮವಾರ 18ನೇ ಲೋಕಸಭೆಯ ಮೊದಲ ಅಧಿವೇಶನ ಪ್ರಾರಂಭವಾಗಿದ್ದು, ಚುನಾಯಿತ ಸದಸ್ಯರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಬುಧವಾರ (ಜೂ. 26) ಲೋಕಸಭಾ ಸ್ಪೀಕರ್‌ ಆಯ್ಕೆ ನಡೆಯಲಿದ್ದು, ಗುರುವಾರ (ಜೂ. 27) ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಉಭಯ ಸದನಗಳ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಬಿಜೆಪಿ ನಾಯಕ ಮತ್ತು ಏಳು ಬಾರಿ ಸಂಸದರಾಗಿ ಅನುಭವ ಹೊಂದಿರುವ ಭರ್ತೃಹರಿ ಮಹತಾಬ್‌ ಅವರನ್ನು ಪ್ರಸ್ತುತ ಹಂಗಾಮಿ ಸ್ಪೀಕರ್‌ ಆಗಿ ನೇಮಿಸಲಾಗಿದೆ.

ರಾಷ್ಟ್ರಪತಿ ಶಿಷ್ಟಾಚಾರ ಮೀರಿ ಮಹತಾಬ್‌ ಅವರನ್ನು ಹಂಗಾಮಿ ಸ್ಪೀಕರ್‌ ಆಗಿ ನೇಮಿಸಿರುವ ಆರೋಪ ಕೇಳಿ ಬಂದಿದೆ. ಈ ಸ್ಥಾನಕ್ಕೆ ಕಾಂಗ್ರೆಸ್‌ನ ಹಿರಿಯ ಸದಸ್ಯ ಕೆ. ಸುರೇಶ್‌ ಅವರ ಹೆಸರನ್ನು ಸೂಚಿಸಲಾಗಿದ್ದರೂ, ಸರ್ಕಾರ ಕಡೆಗಣಿಸಿದೆ ಎಂದು ಹೇಳಲಾಗ್ತಿದೆ. ಈ ಸಂಬಂಧ ಸೃಷ್ಟಿಯಾಗಿರುವ ವಿವಾದವು ಅಧಿವೇಶನದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಪ್ರತಿಪಕ್ಷಗಳು ರಾಷ್ಟ್ರಪತಿ ಮತ್ತು ಕೇಂದ್ರದ ನಡೆಯನ್ನು ಟೀಕಿಸಿವೆ. ಮಹತಾಬ್‌ ಅವರು ಸತತವಾಗಿ ಏಳು ಬಾರಿ ಲೋಕಸಭೆ ಸದಸ್ಯರಾಗಿದ್ದು, ಹಂಗಾಮಿ ಸ್ಪೀಕರ್‌ ಹುದ್ದೆಗೆ ಅರ್ಹರಾಗಿದ್ದಾರೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು ಪ್ರತಿಪಾದಿಸಿದ್ದಾರೆ. ಸುರೇಶ್‌ ಅವರು 1998 ಮತ್ತು 2004ರ ಚುನಾವಣೆಯಲ್ಲಿ ಸೋತಿದ್ದರು ಎಂದೂ ಅವರು ಹೇಳಿದ್ದಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಭವನದಲ್ಲಿ ಮಹತಾಬ್‌ ಅವರಿಗೆ ಸೋಮವಾರ ಬೆಳಿಗ್ಗೆ ಪ್ರಮಾಣವಚನ ಬೋಧಿಸಿದರು. ಬಳಿಕ ಮಹತಾಬ್‌ ಅವರು ಸಂಸತ್‌ ಭವನ ತಲುಪಿ ಲೋಕಸಭೆ ಅಧಿವೇಶನ ಆರಂಭಿಸಿದರು. ಅಗಲಿದ ಗಣ್ಯರ ಗೌರವ ನಮನ ಸಲ್ಲಿಸುವ ಮೂಲಕ ಕಲಾಪ ಆರಂಭವಾಯಿತು. ಮೊದಲಿಗೆ ಲೋಕಸಭೆಯ ನಾಯಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸದನದ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸುವಂತೆ ಹಂಗಾಮಿ ಸ್ಪೀಕರ್‌ ಕರೆ ನೀಡಿದರು.

ನೂತನ ಸದಸ್ಯರಿಗೆ ಪ್ರಮಾಣವಚನ ಬೋಧಿಸಲು ಹಂಗಾಮಿ ಸ್ಪೀಕರ್‌ಗೆ ನೆರವಾಗಲು ಸದಸ್ಯರಾದ ಕೆ. ಸುರೇಶ್‌ (ಕಾಂಗ್ರೆಸ್‌), ಟಿ.ಆರ್‌.ಬಾಲು (ಡಿಎಂಕೆ), ರಾಧಾ ಮೋಹನ್‌ ಸಿಂಗ್‌, ಫಗ್ಗನ್‌ ಸಿಂಗ್‌ ಕುಲಸ್ತೆ (ಇಬ್ಬರೂ ಬಿಜೆಪಿ) ಹಾಗೂ ಸುದೀಪ್‌ ಬಂದ್ಯೋಪಾಧ್ಯಾಯ (ಟಿಎಂಸಿ) ಅವರನ್ನು ರಾಷ್ಟ್ರಪತಿ ನೇಮಿಸಿದ್ದಾರೆ. ನರೇಂದ್ರ ಮೋದಿಯ ಬಳಿಕ, ಮಂತ್ರಿ ಪರಿಷತ್ತಿನ ಸದಸ್ಯರು ಸದನದ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಆ ನಂತರ ಎರಡು ದಿನಗಳವರೆಗೆ ಉಳಿದ ಸದಸ್ಯರ ಪ್ರಮಾಣವಚನ ಪ್ರಕ್ರಿಯೆ ನಡೆಯಲಿದೆ.

ರಾಷ್ಟ್ರಪತಿಯವರ ಭಾಷಣದ ಮೇಲಿನ ಚರ್ಚೆಯು ಜೂನ್ 28ರಂದು ಪ್ರಾರಂಭವಾಗಲಿದ್ದು, ಜುಲೈ 2 ಅಥವಾ 3ರಂದು ಪ್ರಧಾನಿ ಚರ್ಚೆಗೆ ಪ್ರತಿಕ್ರಿಯಿಸುವ ಸಾಧ್ಯತೆ ಇದೆ. ನಂತರ ಎರಡೂ ಸದನಗಳನ್ನು ಸಂಕ್ಷಿಪ್ತ ಅವಧಿಗೆ ಮುಂದೂಡಲಾಗುತ್ತದೆ. ಕೇಂದ್ರ ಬಜೆಟ್‌ ಮಂಡನೆಗಾಗಿ ಜುಲೈ 22ರಂದು ಮತ್ತೆ ಸದನದ ಕಲಾಪ ನಡೆಯುವ ನಿರೀಕ್ಷೆಯಿದೆ.

Previous Post
ಪೇಪರ್ ಲೀಕ್ ಪ್ರಕರಣಗಳನ್ನು ಭೇದಿಸಲು ಸಿಬಿಐ ಹೊಸ ಯೋಜನೆ
Next Post
ನೀಟ್-ಯುಜಿ ಮರು ಪರೀಕ್ಷೆಗೆ 750 ಮಂದಿ ಗೈರು: ಎನ್‌ಟಿಎ

Recent News