ಸಚಿವನಾದ ಬಳಿಕ 48ನೇ ವಯಸ್ಸಿನಲ್ಲಿ ಪದವಿ ಪಡೆದೆ: ಡಿಸಿಎಂ ಡಿಕೆ.ಶಿವಕುಮಾರ್

ಸಚಿವನಾದ ಬಳಿಕ 48ನೇ ವಯಸ್ಸಿನಲ್ಲಿ ಪದವಿ ಪಡೆದೆ: ಡಿಸಿಎಂ ಡಿಕೆ.ಶಿವಕುಮಾರ್

ಬೆಂಗಳೂರು: ನಾನಿಂದು ರಾಜ್ಯ ಉಪಮುಖ್ಯಮಂತ್ರಿಯಾಗಿರಬಹುದು, ಆದರೆ, ಪದವೀಧನಾಗಿಲ್ಲ ಎಂಬುದಕ್ಕೆ ಪಶ್ಚಾತ್ತಾಪ ಬರುತ್ತಿದ್ದ ಕಾಲವಿತ್ತು. ಆದರೆ, ಸಚಿವನಾದ ಬಳಿಕ 48ನೇ ವಯಸ್ಸಿನಲ್ಲಿ ಪದವಿ ಪಡೆದೆ ಎಂದು ಡಿಕೆ.ಶಿವಕುಮಾರ್ ಅವರು ಶನಿವಾರ ಹೇಳಿದರು.

‘ಪರಿಶ್ರಮ’ ನೀಟ್ ಅಕಾಡೆಮಿಯಲ್ಲಿ ಕಲಿತು ನೀಟ್ ಪರೀಕ್ಷೆಯಲ್ಲಿ ಯಶಸ್ವಿಯಾದ ವಿದ್ಯಾರ್ಥಿಗಳಿಗೆ ಶನಿವಾರ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಡಿಕೆ.ಶಿವಕುಮಾರ್ ಅವರು ಮಾತನಾಡಿದರು.

ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆಯಲ್ಲಿ ಭಾಗವಹಿಸಿದ್ದಕ್ಕಿಂತ ಮೈಸೂರಿನಲ್ಲಿ ನನ್ನ ಪದವಿ ಪ್ರಮಾಣಪತ್ರ ಸ್ವೀಕರಿಸಿದ್ದು ಹೆಚ್ಚು ಖುಷಿ ನೀಡಿತ್ತು ಎಂದು ಹೇಳಿದರು.

ಇದೇ ವೇಳೆ ಶಿಕ್ಷಣವು ಇಡೀ ವಿಶ್ವವನ್ನೇ ಬದಲಾಯಿಸಬಲ್ಲ ಅತ್ಯಂತ ಶಕ್ತಿಶಾಲಿ ಅಸ್ತ್ರವಾಗಿದೆ ಎಂದ ಅವರು, ಪರಿಶ್ರಮ ನೀಟ್ ಅಕಾಡೆಮಿ ಕುರಿತು ಮಾತನಾಡಿದರು.

ಪರಿಶ್ರಮ ಸಂಸ್ಥೆಯು ಹೊಸ ಅವಕಾಶಗಳನ್ನು ಒದಗಿಸುವ ಮಾರ್ಗದರ್ಶಕನಂತೆ ಕಾರ್ಯನಿರ್ವಹಿಸುತ್ತದೆ. ‘ಪರಿಶ್ರಮ ಸಂಸ್ಥೆಯವರು ಇಲ್ಲಿನ ಮಕ್ಕಳನ್ನು ಯಾವ ರೀತಿ ತಯಾರು ಮಾಡಿದ್ದಾರೆ ಎಂದರೆ ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ 250 ಸೀಟುಗಳಿದ್ದರೆ ಅದರಲ್ಲಿ 150ರಿಂದ 180 ಮಕ್ಕಳು ಇಲ್ಲಿ ಶಿಕ್ಷಣ ಪಡೆದವರೇ ಇದ್ದಾರೆ. ಇದಕ್ಕಿಂತ ದೊಡ್ಡ ಸಾಧನೆ, ಬದಲಾವಣೆ ಯಾರೂ ಮಾಡಲು ಸಾಧ್ಯವಿಲ್ಲ’ ಎಂದರು.

697 ಅಂಕ ಗಳಿಸಿರುವ ಟಾಪರ್ ಗೌರಿ ಸಂತೋಷ ಗುಂಡ ಅವರ ತಂದೆ ಸಂತೋಷ್ ಮಾತನಾಡಿ, ಸಂಸ್ಥೆಯು ಅತ್ಯುತ್ತಮ ಬೋಧಕ ಸಿಬ್ಬಂದಿಯನ್ನು ಹೊಂದಿದ್ದು, ಸಂಸ್ಥೆಯು ವಿದ್ಯಾರ್ಥಿಗಳಿಗೆ ಮೊಬೈಲ್ ಬಳಸಲು ಅವಕಾಶ ನೀಡದೆ ಶಿಕ್ಷಣದತ್ತ ಗಮನ ಹರಿಸುವಂತೆ ಮಾಡುತ್ತದೆ ಎಂದರು.

ಕಾರ್ಯಕ್ರಮದಲ್ಲಿ ನೀಟ್ ಪರೀಕ್ಷೆಯಲ್ಲಿ ಮೊದಲ 10 ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಸ್ಮರಣಿಕೆಗಳನ್ನು ವಿತರಿಸಿದರು.

Previous Post
ಗ್ಯಾರಂಟಿ ಎನ್ನುತ್ತ ಜನರ ತಲೆ ಮೇಲೆ ಚಪ್ಪಡಿ ಕಲ್ಲು ಎತ್ತಿ ಹಾಕಿದ ಕಾಂಗ್ರೆಸ್: ಪ್ರಲ್ಹಾದ್‌ ಜೋಶಿ ಕಿಡಿ
Next Post
ಲೋಕಸಭೆ ಚುನಾವಣೆಯಲ್ಲಿ ಸಿಕ್ಕಿದ ಗೆಲುವು: ಜಿ.ಪಂ, ತಾ.ಪಂ ಚುನಾವಣೆಯಲ್ಲೂ ‘ಮೈತ್ರಿ ಕಮಾಲ್’ಗೆ ಬಿಜೆಪಿ-ಜೆಡಿಎಸ್ ತವಕ

Recent News