ಸರ್ಕಾರಿ ಉದ್ಯೋಗಕ್ಕೆ 2 ಮಕ್ಕಳ ನಿಯಮ: ರಾಜಸ್ಥಾನ ನಿರ್ಧಾರಕ್ಕೆ ‘ಸುಪ್ರೀಂ’ ಅಸ್ತು
ನವದೆಹಲಿ, ಫೆ. 29: ಸರ್ಕಾರಿ ಉದ್ಯೋಗಕ್ಕೆ ಎರಡು ಮಕ್ಕಳ ನಿಯಮವನ್ನು ಜಾರಿಗೆ ತರುವ ರಾಜಸ್ತಾನದ ಸರ್ಕಾರದ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್ ಅನುಮೋದನೆ ನೀಡಿದೆ. ಹೌದು.. ಪಂಚಾಯ್ತಿ ಚುನಾವಣೆಗಳಲ್ಲಿ ಸ್ಪರ್ಧಿಸಲು ಗರಿಷ್ಠ ಎರಡು ಮಕ್ಕಳ ಮಾನದಂಡವನ್ನು ಎತ್ತಿ ಹಿಡಿದು 21 ವರ್ಷಗಳ ಬಳಿಕ, ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಕೂಡಾ ಇದೇ ಮಾನದಂಡವನ್ನು ಅನ್ವಯಿಸುವ ರಾಜಸ್ಥಾನ ಸರ್ಕಾರದ ನಿರ್ಧಾರಕ್ಕೆ ಸುಪ್ರೀಂಕೋರ್ಟ್ ಒಪ್ಪಿಗೆ ನೀಡಿದೆ.
ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ದೀಪಂಕರ್ ದತ್ತಾ ಹಾಗೂ ಕೆ.ವಿ.ವಿಶ್ವನಾಥನ್ ಅವರನ್ನು ಒಳಗೊಂಡ ಪೀಠ, ರಾಜಸ್ಥಾನ ಸರ್ಕಾರದ ಈ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಿದ ಮೇಲ್ಮನವಿಯನ್ನು ತಿರಸ್ಕರಿಸಿದೆ. 2017ರಲ್ಲಿ ಸೇವೆಯಿಂದ ನಿವೃತ್ತರಾಗಿದ್ದ ಯೋಧ ರಾಮಲಾಲ್ ಜಾಟ್, 2018ರ ಮೇ 25ರಂದು ರಾಜಸ್ಥಾನ ಪೊಲೀಸ್ ಇಲಾಖೆಯಲ್ಲಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ರಾಜಸ್ಥಾನ ಪೊಲೀಸ್ ಸಬಾರ್ಡಿನೇಟ್ ಸರ್ವೀಸಸ್ ರೂಲ್ಸ್-1989ರ ನಿಯಮ 24 (4) ಅನ್ವಯ ಇವರ ಅರ್ಜಿ ತಿರಸ್ಕೃತಗೊಂಡಿತ್ತು. ಈ ನಿಯಮದ ಪ್ರಕಾರ, 2002ರ ಜೂನ್ 1ರ ಬಳಿಕ ಎರಡಕ್ಕಿಂತ ಹೆಚ್ಚಿನ ಮಕ್ಕಳನ್ನು ಹೊಂದಿದವರನ್ನು ಸರ್ಕಾರಿ ಉದ್ಯೋಗಕ್ಕೆ ನೇಮಿಸಿಕೊಳ್ಳಲು ಅವಕಾಶ ಇರುವುದಿಲ್ಲ.
ಈ ಬಗ್ಗೆ ರಾಜ್ಯ ಹೈಕೋರ್ಟ್ನಲ್ಲಿ ಜಾಟ್ ಅವರು ಸಲ್ಲಿಸಿದ್ದ ಅರ್ಜಿ 2022ರ ಅಕ್ಟೋಬರ್ನಲ್ಲಿ ತಿರಸ್ಕೃತಗೊಂಡಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು. ಮಾನದಂಡವನ್ನು ನಿರ್ಧರಿಸುವುದು ನೀತಿಗೆ ಸಂಬಂಧಿಸಿದ ವಿಚಾರ. ಇದರಲ್ಲಿ ಕೋರ್ಟ್ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿತ್ತು.