ಸಹಾಯಕ ಲೋಕೋ ಪೈಲಟ್ ಹುದ್ದೆ ಪರೀಕ್ಷೆ ಕನ್ನಡದಲ್ಲೂ ನಡೆಸಲು ನಿರ್ದೇಶನ

ಸಹಾಯಕ ಲೋಕೋ ಪೈಲಟ್ ಹುದ್ದೆ ಪರೀಕ್ಷೆ ಕನ್ನಡದಲ್ಲೂ ನಡೆಸಲು ನಿರ್ದೇಶನ

ನವದೆಹಲಿ : ಸಹಾಯಕ ಲೋಕೋ ಪೈಲಟ್ ಹುದ್ದೆ ಮುಂಬಡ್ತಿ ಪರೀಕ್ಷೆಯನ್ನು ಕನ್ನಡದಲ್ಲೂ ನಡೆಸಲು ಕೇಂದ್ರ ರೈಲ್ವೆ ಮತ್ತು ಜಲ ಶಕ್ತಿ ರಾಜ್ಯ ಸಚಿವ ವಿ ಸೋಮಣ್ಣನವರ ನೈರುತ್ಯ ರೈಲ್ವೆ ಮಹಾಪ್ರಬಂಧಕರಿಗೆ ನಿರ್ದೇಶನ ನೀಡಿದ್ದಾರೆ‌.

ನೈರುತ್ಯ ರೈಲ್ವೆ ವಲಯದಲ್ಲಿ ಇತ್ತೀಚೆಗೆ ಸಹಾಯಕ ಲೋಕೋ ಪೈಲಟ್ ಹುದ್ದೆಗೆ ಮುಂಬಡ್ತಿ ಪರೀಕ್ಷೆ ನಿಗದಿಪಡಿಸಲಾಗಿತ್ತು. ಇದು ಕಂಪ್ಯೂಟರ್ ಆಧಾರಿತ ಪರೀಕ್ಷೆ ಆಗಿದ್ದು ಕೇವಲ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಮಾತ್ರ ಬರೆಯಲು ಅವಕಾಶ ನೀಡಲಾಗಿತ್ತು.

ಇಲಾಖೆಯ ಈ ಕ್ರಮದಿಂದ ನೈರುತ್ಯ ರೈಲ್ವೆ ವಲಯದಲ್ಲಿ ಕರ್ನಾಟಕದಲ್ಲಿ ಕಾರ್ಯನಿರ್ವಹಿಸುವ ಕನ್ನಡಿಗ ಅಭ್ಯರ್ಥಿಗಳಿಗೆ ಅನಾನುಕೂಲವಾಗುತ್ತಿದೆ ಎಂಬ ವಿಷಯ ರೈಲ್ವೆ ಮತ್ತು ಜಲ ಶಕ್ತಿ ಖಾತೆ ರಾಜ್ಯ ಸಚಿವ ವಿ ಸೋಮಣ್ಣನವರ ಗಮನಕ್ಕೆ ಬಂದ ತಕ್ಷಣವೇ ಅವರು ಕಾರ್ಯಪ್ರವೃತ್ತರಾಗಿ ನೈರುತ್ಯ ರೈಲ್ವೆ ಮಹಾಪ್ರಬಂಧಕರಿಗೆ ಕನ್ನಡದಲ್ಲಿಯೂ ಪರೀಕ್ಷೆ ನಡೆಸಲು ಸೂಕ್ತ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿದರು.

ಇದರಿಂದಾಗಿ ಸಹಾಯಕ ಲೋಕೋ ಪೈಲಟ್ ಹುದ್ದೆಗೆ ಮುಂಬಡ್ತಿ ಪರೀಕ್ಷೆಯನ್ನು ಕನ್ನಡದಲ್ಲಿಯೂ ನಡೆಸಲು ಇದೀಗ ನೈರುತ್ಯ ರೈಲ್ವೆ ವಲಯವು ಕ್ರಮ ಕೈಗೊಂಡಿದೆ. ಈ ಸಂಬಂಧ ನೈರುತ್ಯ ರೈಲ್ವೆ ಕೇಂದ್ರ ಕಚೇರಿಯಿಂದ ಬೆಂಗಳೂರು, ಮೈಸೂರು, ಹುಬ್ಬಳ್ಳಿ ಮೂರೂ ವಿಭಾಗೀಯ ಅಧಿಕಾರಿಗಳಿಗೆ ಅಧಿಕೃತ ಆದೇಶ ಹೊರಡಿಸಲಾಗಿದೆ. ಇದರಿಂದ ರೈಲ್ವೆಯಲ್ಲಿ ಕಾರ್ಯನಿರ್ವಹಿಸುವ ಕನ್ನಡಿಗ ಸಿಬ್ಬಂದಿಗಳಿಗೆ ಸಹಾಯಕವಾಗಲಿದೆ. ಸದ್ಯದಲ್ಲಿಯೇ ದಿನಾಂಕವನ್ನು ಮರು-ನಿಗದಿಪಡಿಸಿ ಪರೀಕ್ಷೆಯನ್ನು ನಡೆಸಲು ಕ್ರಮವಹಿಸಲಾಗುತ್ತಿದೆ..

ಕೇಂದ್ರ ಸರ್ಕಾರದ ಇಲಾಖೆಯಲ್ಲಿ ಕನ್ನಡ ಭಾಷೆಗೆ ಪ್ರಾತಿನಿಧ್ಯ – ಪ್ರಾಮುಖ್ಯತೆ ನೀಡುವ ಜೊತೆಗೆ ಕನ್ನಡ ಮಾಧ್ಯಮದಲ್ಲಿ ಓದಿದ/ ಕನ್ನಡವನ್ನು ಮಾತೃಭಾಷೆಯಾಗಿ ಹೊಂದಿದ ಅನೇಕ ಗ್ರೂಪ್ ಡಿ/ ಗ್ರೂಪ್-ಸಿ ಸಿಬ್ಬಂದಿಗಳಿಗೆ ಪರೀಕ್ಷೆಯನ್ನು ತಮ್ಮ ಸ್ವಂತ ಭಾಷೆಯಲ್ಲಿಯೇ ಆತ್ಮವಿಶ್ವಾಸದಿಂದ ಎದುರಿಸಿಲು ಸಚಿವರ ಈ ನಿರ್ಧಾರ ಪೂರಕವಾಗಲಿದೆ.

Previous Post
ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗೆ ಆಗ್ರಹ ದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನೆ
Next Post
ಒಲಂಪಿಕ್ಸ್‌ನಿಂದ ವಿನೇಶಾ ಅನರ್ಹ

Recent News