ಸಿಎಎ ಜಾರಿಗೆ ತಡೆ ಕೋರಿ ಸುಪ್ರೀಂಗೆ ಮುಸ್ಲಿಂ ಲೀಗ್ ಮೊರೆ

ಸಿಎಎ ಜಾರಿಗೆ ತಡೆ ಕೋರಿ ಸುಪ್ರೀಂಗೆ ಮುಸ್ಲಿಂ ಲೀಗ್ ಮೊರೆ

ನವದೆಹಲಿ, ಮಾ. 12: ಕೇಂದ್ರ ಸರಕಾರ ಜಾರಿಗೆ ತಂದ ಪೌರತ್ವ ತಿದ್ದುಪಡಿ ಕಾಯ್ದೆಗೆ ತಡೆ ಕೋರಿ ಭಾರತೀಯ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಮಂಗಳವಾರ ಸುಪ್ರೀಂ ಕೋರ್ಟ್‌ಗೆ ತುರ್ತು ಅರ್ಜಿ ಸಲ್ಲಿಸಿದೆ. ಕೇಂದ್ರ ಸರ್ಕಾರವು ಪೌರತ್ವ (ತಿದ್ದುಪಡಿ) ಕಾಯ್ದೆ ಜಾರಿ ಕುರಿತು ಅಧಿಸೂಚನೆ ಹೊರಡಿಸಿದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ. ಈ ಕಾನೂನಿನ ಪ್ರಯೋಜನದಿಂದ ವಂಚಿತರಾದ ಮುಸ್ಲಿಂ ಸಮುದಾಯಕ್ಕೆ ಸೇರಿದ ವ್ಯಕ್ತಿಗಳ ವಿರುದ್ಧ ಯಾವುದೇ ದಬ್ಬಾಳಿಕೆಯ ಕ್ರಮಗಳನ್ನು ತೆಗೆದುಕೊಳ್ಳಬಾರದು ಮತ್ತು ಕಾನೂನು ಮತ್ತು ನಿಬಂಧನೆಗಳನ್ನು ತಡೆಹಿಡಿಯಬೇಕು ಎಂದು IUML ಅರ್ಜಿಯಲ್ಲಿ ಆಗ್ರಹಿಸಿದೆ.
ಯೂನಿಯನ್ ಮುಸ್ಲಿಂ ಲೀಗ್ ತನ್ನ ಅರ್ಜಿಯಲ್ಲಿ, CAA ಅಸಂವಿಧಾನಿಕ ಮತ್ತು ತಾರತಮ್ಯದಿಂದ ಕೂಡಿದೆ, ವಿಶೇಷವಾಗಿ ಮುಸ್ಲಿಮರ ವಿರುದ್ಧವಾಗಿದೆ ಎಂದು ವಾದಿಸಿದೆ. ಈ ತಿದ್ದುಪಡಿಯನ್ನು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) 2020ರಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಸಿಎಎಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ 200ಕ್ಕೂ ಹೆಚ್ಚು ಅರ್ಜಿಗಳನ್ನು ಸಲ್ಲಿಸಲಾಗಿದೆ. ಇವುಗಳಲ್ಲಿ ಅಸಾದುದ್ದೀನ್ ಓವೈಸಿ, ಜೈರಾಮ್ ರಮೇಶ್, ರಮೇಶ್ ಚೆನ್ನಿತಲಾ ಮತ್ತು ಮಹುವಾ ಮೊಯಿತ್ರಾ ಮತ್ತು ರಾಜಕೀಯ ಸಂಘಟನೆಗಳಾದ ಅಸ್ಸಾಂ ಪ್ರದೇಶ ಕಾಂಗ್ರೆಸ್ ಸಮಿತಿ, ಡಿಎಂಕೆ, ಅಸೋಮ್ ಗಣ ಪರಿಷತ್ (ಎಜಿಪಿ), ನ್ಯಾಷನಲ್ ಪೀಪಲ್ಸ್ ಪಾರ್ಟಿ (ಅಸ್ಸಾಂ), ಮುಸ್ಲಿಂ ವಿದ್ಯಾರ್ಥಿಗಳ ಒಕ್ಕೂಟಗಳ (ಅಸ್ಸಾಂ) ಅರ್ಜಿಗಳು ಕೂಡ ಸೇರಿದೆ.
ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ, ಸಿಎಎ ಅಡಿಯಲ್ಲಿ ಪೌರತ್ವ ನೀಡುವ ಸರ್ಕಾರದ ನಿರ್ಧಾರವು ಮತ್ತೆ ವಿವಾದಕ್ಕೆ ಕಾರಣವಾಗಿದೆ. ಡಿಸೆಂಬರ್ 11, 2019ರಂದು ಸಂಸತ್ತಿನಲ್ಲಿ ಅಂಗೀಕರಿಸಲ್ಪಟ್ಟ CAA ಭಾರತದಾದ್ಯಂತ ವ್ಯಾಪಕ ಪ್ರತಿಭಟನೆಗೆ ಕಾರಣವಾಯಿತು. ದೆಹಲಿ ಪ್ರತಿಭಟನೆಯ ಕೇಂದ್ರ ಬಿಂದುವಾಗಿತ್ತು. ಅಲ್ಲಿ ತಿಂಗಳುಗಳ ಕಾಲ ಪ್ರತಿಭಟನೆಗಳು ನಡೆದವು, ವಿಶೇಷವಾಗಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ಮತ್ತು ಶಾಹೀನ್ ಬಾಗ್ ಪ್ರದೇಶಗಳಲ್ಲಿ ವ್ಯಾಪಕವಾದ ಪ್ರತಿಭಟನೆ ನಡೆದಿತ್ತು. ಪ್ರತಿಭಟನೆಗಳ ಜೊತೆಗೆ, CAA ಕೋಮು ಉದ್ವಿಗ್ನತೆಗೆ ಕಾರಣವಾಗಿದೆ, 2020ರ ಆರಂಭದಲ್ಲಿ ಈಶಾನ್ಯ ದೆಹಲಿಯಲ್ಲಿ ಹಿಂಸಾತ್ಮಕ ಗಲಭೆಗಳು ನಡೆದಿದೆ. ಈ ವೇಳೆ 100ಕ್ಕೂ ಅಧಿಕ ಮಂದಿ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇದಾದ ಬಳಿಕ ಸಿಎಎ ಜಾರಿಯಿಂದ ಕೇಂದ್ರ ಸರಕಾರ ಹಿಂದೆ ಸರಿದಿತ್ತು. ಇದೀಗ ಲೋಕಸಭೆ ಚುನಾವಣೆ ಹಿನ್ನೆಲೆ ಸಿಎಎಯನ್ನು ಜಾರಿಗೊಳಿಸಲಾಗಿದೆ.
ಈ ಕಾಯ್ದೆಯಡಿಯಲ್ಲಿ ಅಫ್ಘಾನಿಸ್ತಾನ, ಬಾಂಗ್ಲಾದೇಶ ಅಥವಾ ಪಾಕಿಸ್ತಾನದಿಂದ ಭಾರತಕ್ಕೆ ಬಂದಿರುವ ಮುಸ್ಲಿಮೇತರರು ಅಂದರೆ ಹಿಂದೂ, ಸಿಖ್, ಬೌದ್ಧ, ಜೈನ್, ಪಾರ್ಸಿ ಅಥವಾ ಕ್ರಿಶ್ಚಿಯನ್ ಧಾರ್ಮಿಕ ಸಮುದಾಯಗಳಿಗೆ ಸೇರಿದ ಅಕ್ರಮ ವಲಸಿಗರು ಡಿಸೆಂಬರ್ 31, 2014ರಂದು ಅಥವಾ ಅದಕ್ಕೂ ಮೊದಲು ಭಾರತಕ್ಕೆ ಪ್ರವೇಶಿಸಿದರೆ ಅವರಿಗೆ ಪೌರತ್ವವನ್ನು ನೀಡಬಹುದು. ಕಾಯಿದೆಯ ಮೂರನೇ ಶೆಡ್ಯೂಲ್‌ನ ಸೆಕ್ಷನ್ 5 ರ ಅಡಿಯಲ್ಲಿನ ಷರತ್ತುಗಳಿಗೆ ಸಮ್ಮತಿಸಿದರೆ ಒಬ್ಬ ವ್ಯಕ್ತಿಗೆ ನೋಂದಣಿ ಪ್ರಮಾಣಪತ್ರ ನೀಡಬಹುದು. ಸಿಎಎ ನಿಯಮಗಳನ್ನು ಅಧಿಸೂಚನೆ ಹೊರಡಿಸಿದ್ದಕ್ಕಾಗಿ ವಿರೋಧ ಪಕ್ಷದ ನಾಯಕರು ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿದ್ದು, ಬಿಜೆಪಿಯು ಸಮಾಜವನ್ನು ವಿಭಜಿಸಲು ಮತ್ತು ಸಾರ್ವತ್ರಿಕ ಚುನಾವಣೆಗೆ ಮುನ್ನ ಜನರನ್ನು ವಿಭಜಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದೆ.

Previous Post
ಅರ್ಜಿ ಸಲ್ಲಿಸದವರಿಗೆ ಪೌರತ್ವ ಕೊಟ್ಟರೆ ರಾಜೀನಾಮೆ ನೀಡುವೆ: ಅಸ್ಸಾಂ ಮುಖ್ಯಮಂತ್ರಿ ಘೋಷಣೆ
Next Post
ಕೇರಳ, ತಮಿಳುನಾಡಿನಲ್ಲಿ ಸಿಎಎ ಜಾರಿ ಇಲ್ಲ: ಸ್ಟಾಲಿನ್, ಪಿಣರಾಯಿ

Recent News