ಸಿದ್ದಗಂಗಾ ಮಠಕ್ಕೆ ಕೆಎಲ್ ರಾಹುಲ್ ಭೇಟಿ: ಕ್ರಿಕೆಟಿಗನ ನೋಡಿ ಸಂಭ್ರಮಿಸಿದ ಅಭಿಮಾನಿಗಳು

ಸಿದ್ದಗಂಗಾ ಮಠಕ್ಕೆ ಕೆಎಲ್ ರಾಹುಲ್ ಭೇಟಿ: ಕ್ರಿಕೆಟಿಗನ ನೋಡಿ ಸಂಭ್ರಮಿಸಿದ ಅಭಿಮಾನಿಗಳು

ಕನ್ನಡಿಗ ಕೆಎಲ್ ರಾಹುಲ್ ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದರು. ಶ್ರೀ ಶಿವಕುಮಾರ ಸ್ವಾಮೀಜಿ ಗದ್ದುಗೆ ದರ್ಶನ ಪಡೆದ ಅವರು, ಬಳಿಕ ಸಿದ್ದಗಂಗಾ ಶ್ರೀಗಳ ಆಶೀರ್ವಾದ ಪಡೆದುಕೊಂಡಿದ್ದಾರೆ. ಸಿದ್ದಗಂಗಾ ಶ್ರೀಗಳ ಆಶೀರ್ವಾದ ಪಡೆದ ಕೆಎಲ್ ರಾಹುಲ್, ಮಠದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಮಠಕ್ಕೆ ಭೇಟಿ ನೀಡಿದ್ದು ಖುಷಿಯಾಗಿದೆ, ಮಕ್ಕಳ ಜೊತೆ ಮಾತನಾಡುತ್ತಿರುವುದು ಖುಷಿಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಹೇಳಿದರು.

ಕೆಎಲ್ ರಾಹುಲ್ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದಾರೆ ಎನ್ನುವ ವಿಷಯ ತಿಳಿಯುತ್ತಿದ್ದಂತೆ ನೂರಾರು ಅಭಿಮಾನಿಗಳು ಮಠಕ್ಕೆ ಬಂದು, ನೆಚ್ಚಿನ ಕ್ರಿಕೆಟಿಗನ ನೋಡಿ ಸಂತಸ ಪಟ್ಟರು. ಮಠದಿಂದ ಹೊರ ಬರುವಾಗ ನೂರಾರು ಅಭಿಮಾನಿಗಳು ಸುತ್ತುವರೆದು ಅವರ ಫೋಟೊ ಪಡೆಯುತ್ತಿರುವ ವಿಡಿಯೋ ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ನಾಲ್ಕನೇ ಟೆಸ್ಟ್‌ಗೆ ಕೆಎಲ್ ರಾಹುಲ್ ಫಿಟ್? ಇಂಗ್ಲೆಂಡ್ ವಿರುದ್ಧದ ನಡೆಯುತ್ತಿರುವ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಆಡಿದ್ದ ಕೆಎಲ್ ರಾಹುಲ್, ಬಳಿಕ ಗಾಯದ ಸಮಸ್ಯೆಯಿಂದ ಎರಡು ಟೆಸ್ಟ್ ಪಂದ್ಯಗಳನ್ನು ಕಳೆದುಕೊಂಡರು. ಹೈದರಾಬಾದ್‌ ಟೆಸ್ಟ್‌ನಲ್ಲಿ ಕಣಕ್ಕಿಳಿದ ಅವರು, ವಿಶಾಖಪಟ್ಟಣ ಮತ್ತು ರಾಜ್‌ಕೋಟ್ ಟೆಸ್ಟ್‌ನಿಂದ ದೂರ ಉಳಿದಿದ್ದರು. ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 86 ರನ್ ಗಳಿಸಿ ಭಾರತ ತಂಡಕ್ಕೆ ಉಪಯುಕ್ತ ರನ್‌ಗಳ ಕೊಡುಗೆ ನೀಡಿದ್ದರು.

ಎರಡನೇ ಟೆಸ್ಟ್‌ಗೆ ತಂಡದಿಂದ ಹೊರಗುಳಿದ ಅವರು, ಮೂರನೇ ಟೆಸ್ಟ್‌ಗೆ ತಂಡಕ್ಕೆ ಆಯ್ಕೆಯಾಗಿದ್ದರು ಕೊನೆ ಕ್ಷಣದಲ್ಲಿ ಫಿಟ್ ಆಗದ ಕಾರಣ ಹೊರಗುಳಿದರು. ಅವರ ಬದಲಾಗಿ ಮತ್ತೊಬ್ಬ ಕರ್ನಾಟಕ ಆಟಗಾರ ದೇವದತ್ ಪಡಿಕ್ಕಲ್ ಭಾರತ ತಂಡವನ್ನು ಸೇರಿಕೊಂಡರು. ಸದ್ಯ ಕೆಎಲ್ ರಾಹುಲ್ ಸಂಪೂರ್ಣವಾಗಿ ಫಿಟ್ ಆಗಿದ್ದು, ಫೆಬ್ರವರಿ 23 ರಿಂದ ರಾಂಚಿಯಲ್ಲಿ ಆರಂಭವಾಗಲಿರುವ 4ನೇ ಟೆಸ್ಟ್‌ನಲ್ಲಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಾಗಿದೆ. ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಬಳಿಕ ಅವರು ರಾಂಚಿಯಲ್ಲಿ ಭಾರತ ತಂಡವನ್ನು ಸೇರಿಕೊಳ್ಳುವ ಸಾಧ್ಯತೆ ಇದ್ದು, ನಾಲ್ಕನೇ ಟೆಸ್ಟ್‌ಗೆ ಅಭ್ಯಾಸ ಆರಂಭಿಸಲಿದ್ದಾರೆ. ಕೆಎಲ್ ರಾಹುಲ್ ತಂಡಕ್ಕೆ ವಾಪಸಾದರೆ ರನ್ ಗಳಿಸಲು ವಿಫಲವಾದ ರಜತ್ ಪಾಟಿದಾರ್ ಅವರು ಜಾಗ ಬಿಟ್ಟುಕೊಡಲಿದ್ದಾರೆ. ಉಳಿದ ಬ್ಯಾಟರ್ ಗಳು ಉತ್ತಮ ಪ್ರದರ್ಶನ ನೀಡಿರುವ ಕಾರಣ 4ನೇ ಟೆಸ್ಟ್‌ನಲ್ಲಿ ನಾಯಕ ರೋಹಿತ್ ಶರ್ಮಾ ತಂಡದಲ್ಲಿ ಹೆಚ್ಚಿನ ಬದಲಾವಣೆ ಮಾಡುವ ಸಾಧ್ಯತೆ ಕಡಿಮೆ ಇದೆ.

Previous Post
ಅಮೇಥಿಯಲ್ಲಿ ಚುನಾವಣೆಗೂ ಮುನ್ನ ಮುಖಾಮುಖಿಯಾದ ರಾಹುಲ್ ಗಾಂಧಿ ಮತ್ತು ಸ್ಮೃತಿ ಇರಾನಿ!
Next Post
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 100 ಸ್ಥಾನಗಳನ್ನೂ ಗೆಲ್ಲಲ್ಲ: ಮಲ್ಲಿಕಾರ್ಜುನ ಖರ್ಗೆ

Recent News