ಸುಪ್ರೀಂನಿಂದಲೂ ಸದ್ಯಕ್ಕಿಲ್ಲ ರಿಲೀಫ್ ಏಪ್ರೀಲ್ 29 ರಂದು ಕೇಜ್ರಿವಾಲ್ ಅರ್ಜಿ ವಿಚಾರಣೆ
ನವದೆಹಲಿ : ತಮ್ಮ ಬಂಧನವನ್ನು ಪ್ರಶ್ನಿಸಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ಏಪ್ರೀಲ್ 29 ಕ್ಕೆ ಮುಂದೂಡಿದೆ. ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯಕ್ಕೆ ನೋಟಿಸ್ ನೀಡಿದ್ದು ಏಪ್ರೀಲ್ 24 ರೊಳಗೆ ಪ್ರತಿಕ್ರಿಯೆ ನೀಡುವಂತೆ ಸೂಚನೆ ನೀಡಿದೆ.
ಹೊಸ ಮದ್ಯ ನೀತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮನ್ನು ಬಂಧಿಸಿದ ಹಿನ್ನಲೆ, ತಮ್ಮ ಬಂಧನ ಪ್ರಶ್ನಿಸಿ ಈ ಮೊದಲು ಅರವಿಂದ್ ಕೇಜ್ರಿವಾಲ್ ದೆಹಲಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಇಡಿ ಬಂಧನ ಕಾನೂನು ವ್ಯಾಪ್ತಿಯಲ್ಲಿದೆ, ಇದನ್ನು ರಾಜಕೀಕರಣಗೊಳಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟು ಅರ್ಜ ವಜಾ ಮಾಡಿತ್ತು.
ಹೈಕೋರ್ಟ್‌ನಲ್ಲಿ ಅರ್ಜಿ ವಜಾ ಆದ ಹಿನ್ನಲೆ ಕೇಜ್ರಿವಾಲ್ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಇಂದು ಅರ್ಜಿ ವಿಚಾರಣೆ ನಡೆಸಿದ ನ್ಯಾ. ಸಂಜೀವ್ ಖನ್ನಾ ನೇತೃತ್ವದ ದ್ವಿ ಸದಸ್ಯ ಪೀಠ ಮಧ್ಯಂತರ ಆದೇಶ ನೀಡಲು ನಿರಾಕರಿಸಿತು ಮತ್ತು ಇಡಿಗೆ ನೋಟಿಸ್ ಜಾರಿ ಮಾಡಿತು. ಸುಧೀರ್ಘ ವಿಚಾರಣೆ ನಡೆಸುವುದಾಗಿ ಹೇಳಿತು.
ಇದಕ್ಕೂ ಮುನ್ನ ಅರವಿಂದ್ ಕೇಜ್ರಿವಾಲ್ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನುಸಿಂಘ್ವಿ, ಶುಕ್ರವಾರ ಸಣ್ಣ ದಿನಾಂಕವನ್ನು ಕೋರುತ್ತಿದ್ದೇನೆ ಈ ಪ್ರಕರಣದಲ್ಲಿ ಆಯ್ದ ಸೋರಿಕೆಗಳಿವೆ ಎಂದು ಹೇಳಿದರು. ಇದಕ್ಕೆ ಜಸ್ಟಿಸ್ ಖನ್ನಾ ನಿಮಗೆ ಒಂದು ಸಣ್ಣ ದಿನಾಂಕವನ್ನು ನೀಡುತ್ತೇನೆ ಆದರೆ ನೀವು ಸೂಚಿಸಿದ ದಿನಾಂಕ ಸಾಧ್ಯವಿಲ್ಲ ಎಂದು ಉತ್ತರಿಸಿದರು.
ಬಳಿಕ ಕೇಜ್ರಿವಾಲ್ ಅವರನ್ನ ಎನ್‌ಫೋರ್ಸ್‌ಮೆಂಟ್ ಕೇಸ್ ಮಾಹಿತಿ ವರದಿ (ಇಸಿಐಆರ್) ಅಥವಾ ಚಾರ್ಜ್‌ಶೀಟ್‌ನಲ್ಲಿ ಬಂಧಿಸಿಲ್ಲ, ಬದಲಿಗೆ ಇತರೆ ಆರೋಪಿಗಳ 15 ಹೇಳಿಕೆಗಳ ಮೇಲೆ ಬಂಧಿಸಿದೆ. ಚುನಾವಣಾ ಪ್ರಚಾರದಿಂದ ತಪ್ಪಿಸಲು ಬಂಧನವಾಗಿದೆ ಎಂದು ಸಿಂಘ್ವಿ ಹೇಳಿದರು. ಪ್ರಸ್ತುತ ತಿಹಾರ್ ಜೈಲಿನಲ್ಲಿರುವ ಮುಖ್ಯಮಂತ್ರಿ ಕೇಜ್ರಿವಾಲ್ ಅವರ ನ್ಯಾಯಾಂಗ ಬಂಧನವನ್ನು ಏಪ್ರೀಲ್ 23 ವರೆಗೂ ರೋಸ್ ಅವೆನ್ಯೂ ಕೋರ್ಟ್ ವಿಸ್ತರಿಸಿದೆ.