ಸೌಮ್ಯರೆಡ್ಡಿ ನಮ್ಮ ಮನೆ ಮಗಳು, ಅವರನ್ನು 1 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ಡಿಸಿಎಂ ಡಿ.ಕೆ. ಶಿವಕುಮಾರ್

ಸೌಮ್ಯರೆಡ್ಡಿ ನಮ್ಮ ಮನೆ ಮಗಳು, ಅವರನ್ನು 1 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ಡಿಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು, ಏಪ್ರಿಲ್, 1: ಸೌಮ್ಯ ರೆಡ್ಡಿ ನಮ್ಮ ಮನೆ ಮಗಳು. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಕನಿಷ್ಠ 1 ಲಕ್ಷ ಮತಗಳ ಅಂತರದಲ್ಲಿ ಅವರನ್ನು ಗೆಲ್ಲಿಸಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮತದಾರರಲ್ಲಿ ಮನವಿ ಮಾಡಿದರು.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸೌಮ್ಯ ರೆಡ್ಡಿ ಅವರ ನಾಮಪತ್ರ ಸಲ್ಲಿಕೆಗೂ ಮುಂಚಿತವಾಗಿ ಜಯನಗರದಲ್ಲಿ ನಡೆದ ಮೆರವಣಿಗೆ ವೇಳೆ ಮಾತನಾಡಿದ ಅವರು ಹೇಳಿದ್ದಿಷ್ಟು;

“ಐಶ್ವರ್ಯ ಬೇರೆಯಲ್ಲ, ಸೌಮ್ಯ ರೆಡ್ಡಿ ಬೇರೆಯಲ್ಲ. ಸೌಮ್ಯ ನನ್ನ ಮನೆ ಮಗಳು, ಅತ್ಯಂತ ಕ್ರಿಯಾಶೀಲ ಹೆಣ್ಣುಮಗಳು. ಬೊಮ್ಮನಹಳ್ಳಿ, ಬಸವನಗುಡಿ ಸೇರಿದಂತೆ ಈ ಕ್ಷೇತ್ರದ ಎಲ್ಲಾ ಕಡೆಯೂ ಹೆಚ್ಚು ಮತಗಳು ಸೌಮ್ಯ ಅವರಿಗೆ ಬರುತ್ತವೆ. ಇಡೀ ರಾಜ್ಯದಲ್ಲಿ ಯಾವ ಮೋದಿ ಅಲೆಯೂ ಇಲ್ಲ, ಬಿಜೆಪಿ ಅಲೆಯೂ ಇಲ್ಲ. ಇರುವುದು ಒಂದೇ ಗಾಳಿ, ಅದು ಕಾಂಗ್ರೆಸ್, ಗ್ಯಾರಂಟಿ ಗಾಳಿ”.

ನಾನು ಮತ್ತು ಸಿದ್ದರಾಮಯ್ಯ ಅವರು ಗ್ಯಾರಂಟಿ ಚೆಕ್ಕಿಗೆ ಸಹಿ ಹಾಕಿ, ಅನುಷ್ಠಾನಕ್ಕೆ ತಂದಿದ್ದೇವೆ. ಕಾಂಗ್ರೆಸ್ ಜನರ ಸಹಕಾರದಿಂದ 136 ಸ್ಥಾನಗಳನ್ನು ಗೆದ್ದು, ಕೊಟ್ಟ ಮಾತನ್ನು ಉಳಿಸಿಕೊಂಡಿದೆ. ದೇಶದ ಯಾವ ರಾಜ್ಯಗಳು ಮಾಡದ ಕೆಲಸವನ್ನು ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಮಾಡಿದೆ. ಕಾಂಗ್ರೆಸ್ ಜನರ ಭಾವನೆ ಮೇಲೆ ರಾಜಕಾರಣ ಮಾಡುವುದಿಲ್ಲ, ಜನರ ಬದುಕಿನ ಮೇಲೆ ರಾಜಕಾರಣ ಮಾಡುತ್ತದೆ. ಜನರ ಕಲ್ಯಾಣಕ್ಕೆ ಎಂದು 52 ಸಾವಿರ ಕೋಟಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ನೀಡಿದ್ದೇವೆ. ಆದರೆ ಕೇಂದ್ರ ಸರ್ಕಾರ ಕರ್ನಾಟಕದ ಪಾಲಿನ ಹಣ ಕೊಡಲಿಲ್ಲ. ಇದರಿಂದ ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ಆಗಿದೆ.

ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಬಂಟ, ರೆಡ್ಡಿ, ಸೇರಿ ಒಟ್ಟು ಎಂಟು ಮಂದಿ ಒಕ್ಕಲಿಗರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿದೆ. ʼಒಕ್ಕಲಿಗರನ್ನು ಸಿಎಂ ಮಾಡಲಿಲ್ಲವಲ್ಲʼ ಎನ್ನುವ ಟೀಕೆಗೆ ನಾವು ಈ ರೀತಿ ಉತ್ತರಿಸಿದ್ದೇವೆ. ಇದರ ಜತೆಗೆ ಆರು ಮಹಿಳೆಯರಿಗೆ ಟಿಕೆಟ್ ನೀಡಿದ್ದೇವೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ಸೌಮ್ಯ ರೆಡ್ಡಿ ಸೋಲಿಸಿದ ಅಧಿಕಾರಿಗಳು ರಾಮಲಿಂಗಾರೆಡ್ಡಿ ಅವರ ಬಳಿ ಕ್ಷಮಾಪಣೆ ಕೇಳಿದ್ದಾರೆ

“ಸೌಮ್ಯ ರೆಡ್ಡಿ ಸೋತಿಲ್ಲ, ಅಧಿಕಾರಿಗಳಿಂದ ಅವರು ಸೋಲಬೇಕಾಯಿತು. ಒತ್ತಡಕ್ಕೆ ಒಳಗಾಗಿ ನಾವು ಸೌಮ್ಯರೆಡ್ಡಿ ಅವರನ್ನು ಸೋಲಿಸಬೇಕಾಯಿತು ಎಂದು ಅಕ್ರಮದಲ್ಲಿ ಭಾಗಿಯಾಗಿದ್ದ ಅಧಿಕಾರಿಗಳು ರಾಮಲಿಂಗಾರೆಡ್ಡಿ ಅವರ ಬಳಿ ಬಂದು ಕ್ಷಮಾಪಣೆ ಕೇಳಿದರು ಎನ್ನುವ ಸಂಗತಿ ತಿಳಿಯಿತು” ಎಂದರು.

ನಾನು ಪ್ರಶ್ನಿಸಿದ್ದು ಕುಮಾರಸ್ವಾಮಿ ಅವರನ್ನು, ಸುಮಲತಾ ಅವರನ್ನಲ್ಲ

ಇದಕ್ಕೂ ಮುನ್ನ ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿದರು. ಅಂಬರೀಶ್ ಅವರು ಕಾಂಗ್ರೆಸ್ ಪಕ್ಷಕ್ಕೆ ಏನು ಅನ್ಯಾಯ ಮಾಡಿದರು. ಡಿ.ಕೆ. ಶಿವಕುಮಾರ್ ಅವರು ಹೀಗೇಕೆ ಮಾತನಾಡುತ್ತಾರೆ ಎನ್ನುವ ಸುಮಲತಾ ಅವರ ಹೇಳಿಕೆ ಬಗ್ಗೆ ಕೇಳಿದಾಗ ಅವರು ಉತ್ತರಿಸಿದ್ದು ಹೀಗೆ;

ಕುಮಾರಸ್ವಾಮಿ ಅವರನ್ನು ಉದ್ದೇಶಿಸಿ ʼವಿಷʼ ಹೇಳಿಕೆ ನೀಡಿದ್ದೇನೆ. ಕುಂಬಳಕಾಯಿ ಕಳ್ಳ ಎಂದರೆ ಸುಮಲತಾ ಅವರು ಏಕೆ ಹೆಗಲು ಮುಟ್ಟಿ ನೋಡಿಕೊಳ್ಳಬೇಕು? ನಾನು ಸುಮಲತಾ ಅವರ ಸುದ್ದಿಗೆ ಹೋಗಿಲ್ಲ, ಅವರ ಸುದ್ದಿ ನನಗೆ ಅವಶ್ಯಕತೆ ಇಲ್ಲ. ಅಂಬರೀಷ್ ಅವರಿಗೆ ಕಾಂಗ್ರೆಸ್ ಪಕ್ಷ ಏನು ಮಾಡಿದೆ ಎನ್ನುವುದು ಇಡೀ ದೇಶಕ್ಕೆ ಗೊತ್ತಿದೆ. ಅವರು ಕೊನೆಯುಸಿರು ಬಿಡುವ ವೇಳೆಯಲ್ಲಿ ಏನು ಹೇಳಿದರು ಎಂಬುದು ಗೊತ್ತಿದೆ. ನಾವು ಈಗ ಆ ವಿಚಾರಗಳನ್ನು ಮಾತನಾಡುವುದಿಲ್ಲ.

ನಾನು ಸುಮಲತಾ ಅವರ ವಿಚಾರಕ್ಕೆ ಇಂದು ಹೋಗಲ್ಲ, ನಾಳೆಯೂ ಹೋಗಲ್ಲ. ನನಗೆ ಅದರ ಅವಶ್ಯಕತೆಯೂ ಇಲ್ಲ. ಅವರ ಬಗ್ಗೆ ನಾನೇಕೆ ತಲೆ ಕೆಡಿಸಿಕೊಳ್ಳಬೇಕು. ಪಕ್ಷದ ಸಿದ್ದಾಂತದ ಬಗ್ಗೆ ಮಾತನಾಡಲಿ, ಉತ್ತರ ಕೊಡುತ್ತೇನೆ. ಅವರು ಪಕ್ಷದ ಸಿದ್ಧಾಂತದಿಂದ ಹೊರಗೆ ಬರಲಿ, ಆನಂತರ ಮಾತನಾಡುವʼ ಎಂದರು.

ಪಕ್ಷದ ಬ್ಯಾಂಕ್ ಖಾತೆಗಳು ಸ್ಥಗಿತಗೊಂಡಿದ್ದು ದೇಣಿಗೆ ಸಂಗ್ರಹಕ್ಕೆ ರಾಹುಲ್ ಗಾಂಧಿ ಕರೆ ನೀಡಿದ್ದಾರೆ ಎಂದಾಗ “ಚುನಾವಣೆ ನಡೆಸಬೇಕು. ನಿಮಗೆ (ಮಾಧ್ಯಮಗಳಿಗೆ) ಜಾಹೀರಾತು ನೀಡಬೇಕು. ದೇಣಿಗೆ ಸಂಗ್ರಹ ಮಾಡಲೇ ಬೇಕು, ವಿಧಿಯಿಲ್ಲವಲ್ಲ” ಎಂದು ಹೇಳಿದರು.

ನಿಮಗೂ ಐಟಿ ನೋಟಿಸ್ ಬಂದಿದೆ ಎಂದು ಕೇಳಿದಾಗ “ಇದಕ್ಕೆ ಆನಂತರ ಉತ್ತರಿಸುತ್ತೇನೆ” ಎಂದರು.

Previous Post
ಮಂಡ್ಯದ ಜನ ಹೊರಗಿನವರಿಗೆ ತಮ್ಮ ಸ್ಥಾನ, ಸ್ವಾಭಿಮಾನ ಬಿಟ್ಟುಕೊಟ್ಟಿಲ್ಲ, ಟೂರಿಂಗ್ ಟಾಕೀಸ್ ರಾಜಕಾರಣ ಇಲ್ಲಿ ನಡೆಯಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್
Next Post
ವರುಣಾ ನನ್ನ ಪಾಲಿಗೆ ಅದೃಷ್ಟದ ಕ್ಷೇತ್ರ. ನಿಮ್ಮಿಂದ ಎರಡು ಬಾರಿ ಮುಖ್ಯಮಂತ್ರಿಯಾದೆ ಸಿ.ಎಂ.ಸಿದ್ದರಾಮಯ್ಯ ಕೃತಜ್ಞತೆ

Recent News