ಸ್ವಾತಿ ಮಲಿವಾಲ್ ಮೇಲಿನ ಹಲ್ಲೆ ಪ್ರಕರಣ: ಕೇಜ್ರಿವಾಲ್ ಸಹಾಯಕ ಬಂಧನ
ನವದೆಹಲಿ, ಮೇ 18: ಎಎಪಿ ಸಂಸದೆ ಸ್ವಾತಿ ಮಲಿವಾಲ್ ಅವರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಹಾಯಕ ಮತ್ತು ಮಾಜಿ ಆಪ್ತ ಕಾರ್ಯದರ್ಶಿ ಬಿಭವ್ ಕುಮಾರ್ ಅವರನ್ನು ಶನಿವಾರ ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಬಿಭವ್ ಕುಮಾರ್ ಅವರನ್ನು ಮುಖ್ಯಮಂತ್ರಿ ನಿವಾಸದ ಬಳಿಯಿಂದ ಬಂಧಿಸಿ ಕರೆದೊಯ್ದಿರುವ ಬಗ್ಗೆ ವರದಿಯಾಗಿದೆ. ಮಲಿವಾಲ್ ದೂರಿನ ಮೇರೆಗೆ ದೆಹಲಿ ಪೊಲೀಸರು ಕುಮಾರ್ ವಿರುದ್ಧ ಪ್ರಕರಣ ದಾಖಲಿಸಿದ ಎರಡು ದಿನಗಳ ನಂತರ ಈ ಬೆಳವಣಿಗೆ ನಡೆದಿದೆ.
ಮೇ.13ರಂದು ಮುಖ್ಯಮಂತ್ರಿಗಳ ನಿವಾಸಕ್ಕೆ ಹೋದಾಗ ಬಿಭವ್ ಕುಮಾರ್ ತನಗೆ 7–8 ಬಾರಿ ಕಪಾಳಮೋಕ್ಷ ಮಾಡಿದ್ದಾನೆ ಮತ್ತು ಪದೇ ಪದೇ ಎದೆ ಮತ್ತು ಹೊಟ್ಟೆಗೆ ಒದೆ ನೀಡಿದ್ದಾನೆ. ತನಗೆ ಪಿರಿಯಡ್ಸ್ ಆಗುತ್ತಿದೆ ಎಂದು ಹೇಳಿದ ನಂತರವೂ ಬಿಭವ್ ಕ್ರೂರವಾಗಿ ಹಲ್ಲೆ ನಡೆಸಿದ್ದಾನೆ ಎಂದು ಮಲಿವಾಲ್ ದೂರಿನಲ್ಲಿ ಆರೋಪಿಸಿದ್ದರು. ಶುಕ್ರವಾರ ದೆಹಲಿ ಪೊಲೀಸರು ಅಪರಾಧದ ದೃಶ್ಯವನ್ನು ಮರುಸೃಷ್ಟಿಸಲು ಮಲಿವಾಲ್ ಅವರನ್ನು ಅರವಿಂದ್ ಕೇಜ್ರಿವಾಲ್ ಅವರ ನಿವಾಸಕ್ಕೆ ಕರೆದೊಯ್ದಿದ್ದರು. ತೀಸ್ ಹಜಾರಿ ನ್ಯಾಯಾಲಯದಲ್ಲಿ ಮ್ಯಾಜಿಸ್ಟ್ರೇಟ್ ಮುಂದೆ ಮಲಿವಾಲ್ ಹೇಳಿಕೆಯನ್ನೂ ದಾಖಲಿಸಿದ್ದರು.
ಈ ಮಧ್ಯೆ ಬಿಭವ್ ಕುಮಾರ್ ಅವರು ಸಿವಿಲ್ ಲೈನ್ಸ್ ಪೊಲೀಸ್ ಠಾಣೆಗೆ ಪ್ರತಿದೂರು ನೀಡಿದ್ದು, ಮಲಿವಾಲ್ ಅವರು ಬಲವಂತವಾಗಿ ಮತ್ತು ಅನಧಿಕೃತವಾಗಿ ಮುಖ್ಯಮಂತ್ರಿಯ ನಿವಾಸಕ್ಕೆ ಪ್ರವೇಶಿಸಿದ್ದಾರೆ ಎಂದು ಆರೋಪಿಸಿದ್ದಾರೆ. ದೆಹಲಿ ಮಹಿಳಾ ಆಯೋಗದ ಮಾಜಿ ಅಧ್ಯಕ್ಷರು ಗದ್ದಲವನ್ನು ಸೃಷ್ಟಿಸಲು ಮತ್ತು ಹಲ್ಲೆ ಮಾಡಲು ಪ್ರಯತ್ನಿಸಿದರು. ಕೇಜ್ರಿವಾಲ್‌ಗೆ ಹಾನಿ ಮಾಡುವ ಉದ್ದೇಶ ಹೊಂದಿದ್ದರು ಎಂದು ಆರೋಪಿಸಿದ್ದರು.
ಈ ಕುರಿತು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ದೆಹಲಿ ಸಚಿವೆ ಅತಿಶಿ, ಮುಖ್ಯಮಂತ್ರಿ ಕೇಜ್ರಿವಾಲ್ ವಿರುದ್ಧದ ಪಿತೂರಿಯ ಭಾಗವಾಗಲು ಮಲಿವಾಲ್ ಅವರನ್ನು ಬಿಜೆಪಿ “ಬ್ಲ್ಯಾಕ್‌ಮೇಲ್” ಮಾಡಿದೆ. ಆಪ್ ಸಂಸದರನ್ನು ದೆಹಲಿ ಮುಖ್ಯಮಂತ್ರಿ ಮನೆಯಿಂದ ಭದ್ರತಾ ಸಿಬ್ಬಂದಿ ಹೊರಕ್ಕೆ ಕರೆದುಕೊಂಡು ಹೋಗುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಮಲಿವಾಲ್ ಅವರು ನಾಟಕವಾಡುತ್ತಿದ್ದಾರೆ. ವೀಡಿಯೊದಲ್ಲಿ ಅವರು ಯಾವುದೇ ಕುಂಟುತ್ತಿಲ್ಲದೆ ನಡೆಯುತ್ತಿರುವುದು ಕಂಡುಬಂದಿದೆ. ಆಕೆಯ ಬಟ್ಟೆ ಹರಿದಿಲ್ಲ, ನೋವಿನಿಂದ ಇರಲಿಲ್ಲ ಎಂಬುದನ್ನು ವಿಡಿಯೋದಲ್ಲಿ ಕಾಣಬಹುದು. ಎಫ್‌ಐಆರ್‌ನಲ್ಲಿ ಬರೆದಿರುವುದೆಲ್ಲ ಸುಳ್ಳು ಎಂದು ಈ ವಿಡಿಯೋ ತೋರಿಸುತ್ತದೆ. ಅವರು ಬಿಭವ್ ಕುಮಾರ್‌ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳು ಅವರು ಆರಾಮವಾಗಿ ಸಿಎಂ ಕಚೇರಿಯಿಂದ ಹೊರಗೆ ಹೋಗುತ್ತಿದ್ದಾರೆ ಎಂದು ತೋರಿಸುತ್ತದೆ ಎಂದು ಅತಿಶಿ ಹೇಳಿದ್ದರು.