ಹತ್ರಾಸ್‌ ಕಾಲ್ತುಳಿತ ಪ್ರಕರಣ ಮೃತರ ಕುಟುಂಬಗಳಿಗೆ ಪರಿಹಾರ ಮೊತ್ತ ಹೆಚ್ಚಿಸಿದ ಸಿಎಂ ಯೋಗಿ

ಹತ್ರಾಸ್‌ ಕಾಲ್ತುಳಿತ ಪ್ರಕರಣ ಮೃತರ ಕುಟುಂಬಗಳಿಗೆ ಪರಿಹಾರ ಮೊತ್ತ ಹೆಚ್ಚಿಸಿದ ಸಿಎಂ ಯೋಗಿ

ಲಕ್ನೋ: ಹತ್ರಾಸ್‌ನಲ್ಲಿ ನಡೆದ ಕಾಲ್ತುಳಿತ ಪ್ರಕರಣ ಸಂಬಂಧ ಇದೀಗ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಪರಿಹಾರದ ಮೊತ್ತದಲ್ಲಿ ಹೆಚ್ಚಳ ಮಾಡಿದ್ದಾರೆ. ಮೃತರ ಕುಟುಂಬಗಳಿಗೆ ತಲಾ 4 ಲಕ್ಷ, ಗಾಯಾಳುಗಳಿಗೆ ತಲಾ 1 ಲಕ್ಷ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಇದರ ಜೊತೆಗೆ ಘಟನೆಯ ತನಿಖೆಯನ್ನು ವಿಶೇಷ ತನಿಖಾ ತಂಡಗೆ ನೀಡುವುದಾಗಿ ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯದ ಮಟ್ಟಿಗೆ ಭಕ್ತರ ರಕ್ಷಣೆ ಮತ್ತು ಸುರಕ್ಷತೆಗೆ ಒತ್ತು ನೀಡುವುದು ನಮ್ಮ ಆದ್ಯತೆಯಾಗಿದೆ. ಸತ್ಸಂಗ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವರ ಪೈಕಿ 121 ಭಕ್ತರು ಪ್ರಾಣ ಕಳೆದುಕೊಂಡಿದ್ದಾರೆ. ಯುಪಿ, ಹರಿಯಾಣ, ಮಧ್ಯಪ್ರದೇಶ ಮತ್ತು ರಾಜಸ್ಥಾನದಿಂದ ಭಕ್ತರು ಈ ಕಾರ್ಯಕ್ರಮಕ್ಕೆ ಬಂದಿದ್ದರು. ಸದ್ಯ ಗಾಯಗೊಂಡವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಬಹುತೇಕ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ ಎಂದು ಹೇಳಿದರು.

ನಾನು ಹಲವಾರು ಪ್ರತ್ಯಕ್ಷದರ್ಶಿಗಳೊಂದಿಗೆ ಮಾತುಕತೆ ನಡೆಸಿದ್ದೇನೆ. ಕಾರ್ಯಕ್ರಮ ಮುಗಿದ ನಂತರ ಸತ್ಸಂಗದ ಪ್ರಚಾರಕರು ಬರುತ್ತಿದ್ದಾಗ ಘಟನೆ ನಡೆದಿದೆ ಎಂದು ತಿಳುದುಬಂದಿದೆ. ವೇದಿಕೆಯಿಂದ ಕೆಳಗೆ ಬಾಬಾ ಇಳಿಯುತ್ತಿದ್ದಂತೆ, ಹಲವಾರು ಮಹಿಳೆಯರು ಅವರ ಆಶೀರ್ವಾದ ಪಡೆಯಲು ಮುಂದಾಗಿದ್ದಾರೆ. ಅವರನ್ನು ತಡೆಯುವ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಸಿಎಂ ವಿವರಿಸಿದರು.

ಸದ್ಯ ಆಗ್ರಾ ಎಡಿಜಿ ನೇತೃತ್ವದಲ್ಲಿ ಎಸ್‌ಐಟಿ ರಚಿಸಿದ್ದೇವೆ. ಈ ತಂಡ ಪ್ರಾಥಮಿಕ ವರದಿ ಸಲ್ಲಿಸಿದೆ. ಈ ಬಗ್ಗೆ ಇನ್ನಷ್ಟು ತನಿಖೆ ನಡೆಸುವಂತೆ ನಿರ್ದೇಶನ ನೀಡಿದ್ದೇನೆ. ಅಲ್ಲದೆ ರಾಜ್ಯ ಸರ್ಕಾರವು ನ್ಯಾಯಾಂಗ ತನಿಖೆ ನಡೆಸಲು ನಿರ್ಧರಿಸಿದೆ. ಇದರ ನೇತೃತ್ವವನ್ನು ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರು ವಹಿಸಲಿದ್ದಾರೆ. ಆಡಳಿತ ಮತ್ತು ಪೊಲೀಸ್‌ನ ನಿವೃತ್ತ ಹಿರಿಯ ಅಧಿಕಾರಿಗಳು ಸಹ ಭಾಗವಾಗಲಿದ್ದಾರೆ ಎಂದು ಹೇಳಿದರು.

ರಾಜ್ಯಸಭೆಯಲ್ಲಿ ಮೃತರಿಗೆ ಸಂತಾಪ

ಘಟನೆಯಲ್ಲಿ ಮೃತರಾದವರಿಗೆ ಇಂದು ರಾಜ್ಯಸಭೆಯಲ್ಲಿ ಸಂತಾಪ ಸೂಚಿಸಲಾಯಿತು. ಅಧ್ಯಕ್ಷ ಜಗದೀಪ್ ದನ್ಕರ್ ವಿಷಯ ಪ್ರಸ್ತಾಪ ಮಾಡಿ ಮೌನಚಾರಣೆ ಮಾಡುವಂತೆ ಮನವಿ ಮಾಡಿದರು. ಘಟನೆಯ ಬಗ್ಗೆ ಟ್ವಿಟ್ ಮಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ್ ಖರ್ಗೆ, ಹತ್ರಾಸ್ ಸತ್ಸಂಗದಲ್ಲಿ ಸಂಭವಿಸಿದ ಅಪಘಾತದಂತಹ ಕಾರ್ಯಕ್ರಮಗಳಲ್ಲಿ ಜನರ ಸುರಕ್ಷತೆಗೆ ಯಾವುದೇ ಕಾನೂನು ಇಲ್ಲ ಆದ್ದರಿಂದ ಇಂತಹ ಕಾರ್ಯಕ್ರಮಗಳಲ್ಲಿ ಜನರ ರಕ್ಷಣೆಗೆ ಕಾನೂನು ರೂಪಿಸಬೇಕು. ಕರ್ನಾಟಕ, ಮಹಾರಾಷ್ಟ್ರಗಳಲ್ಲಿರುವಂತೆ ಮೂಢ ನಂಬಿಕೆಯ ವಿರುದ್ಧ ಕಾನೂನು ರೂಪಿಸುವುದು ಅಗತ್ಯವಾಗಿದ್ದು, ಹಣಕ್ಕಾಗಿ ಜನರನ್ನು ದರೋಡೆ ಮಾಡುವ ನಕಲಿ ಜನರನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದ್ದಾರೆ.

ಸುಪ್ರೀಂಕೋರ್ಟ್ ಗೆ ಅರ್ಜಿ

ಘಟನೆಯ ಸೂಕ್ತ ತನಿಖೆಗೆಗಾಗಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿದೆ‌. ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ಮನವಿ ಮಾಡಿದ್ದು ಮುಂದೆ ಇಂತಹ ಘಟನೆಗಳನ್ನು ತಡೆಯಬೇಕು ಇದಕ್ಕಾಗಿ ಮಾರ್ಗಸೂಚಿಗಳನ್ನು ರಚಿಸಬೇಕು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಕ್ರಮ ತೆಗೆದುಕೊಂಡ ವಿವರಗಳನ್ನು ನೀಡುವಂತೆ ಉತ್ತರ ಪ್ರದೇಶ ಸರಕಾರಕ್ಕೆ ನಿರ್ದೇಶನ ನೀಡಿ ಎಂದು ಮನವಿ ಮಾಡಿದೆ.

Previous Post
ವೈಜಾಗ್ ಉಕ್ಕು ಕಾರ್ಖಾನೆ ಪುನಶ್ಚೇತನ ಉನ್ನತ ಅಧಿಕಾರಿಗಳೊಂದಿಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸಭೆ
Next Post
ಮೋದಿಗೆ ಸುಳ್ಳು ಹೇಳುವ ಅಭ್ಯಾಸ; ರಾಜ್ಯಸಭೆಯಿಂದ ಹೊರನಡೆದಿದ್ದಕ್ಕೆ ಕಾರಣ ನೀಡಿದ ಮಲ್ಲಿಕಾರ್ಜುನ ಖರ್ಗೆ

Recent News