ಹಲವೆಡೆ ಹಿಂಸಾಚಾರ; ಮತಯಂತ್ರಗಳನ್ನು ಹೊತ್ತೊಯ್ದು ನೀರಿಗೆ ಎಸೆದ ಗುಂಪು

ಹಲವೆಡೆ ಹಿಂಸಾಚಾರ; ಮತಯಂತ್ರಗಳನ್ನು ಹೊತ್ತೊಯ್ದು ನೀರಿಗೆ ಎಸೆದ ಗುಂಪು

ಕೋಲ್ಕತ್ತಾ, ಜೂ. 1: ಕೊನೆಯ ಮತ್ತು ಏಳನೇ ಹಂತದ ಚುನಾವಣೆ ಹಿನ್ನೆಲೆ 7 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ಚಂಡೀಗಢದ 1 ಕ್ಷೇತ್ರ ಸೇರಿ ಒಟ್ಟು 57 ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯುತ್ತಿದೆ. ವಿವಿಧ ಪಕ್ಷಗಳ ಅಭ್ಯರ್ಥಿಗಳು ಮತ್ತು ಪಕ್ಷೇತರರು ಸೇರಿ 904 ಮಂದಿ ಕಣದಲ್ಲಿದ್ದಾರೆ. ಪಶ್ಚಿಮ ಬಂಗಾಳದ 9 ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯುತ್ತಿದ್ದು, ಪಶ್ಚಿಮ ಬಂಗಾಳದ ವಿವಿಧ ಪ್ರದೇಶಗಳಲ್ಲಿ ಹಿಂಸಾಚಾರ ಮತ್ತು ಉದ್ವಿಗ್ನತೆ ನಡೆದಿದೆ.
ಕೋಲ್ಕತ್ತಾ ಬಳಿಯ ಜಾದವ್‌ಪುರ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಭಾಂಗಾರ್‌ನ ಸತುಲಿಯಾ ಪ್ರದೇಶದಲ್ಲಿ ಇಂಡಿಯನ್ ಸೆಕ್ಯುಲರ್ ಫ್ರಂಟ್(ಐಎಸ್‌ಎಫ್) ಮತ್ತು ಸಿಪಿಐ(ಎಂ) ಬೆಂಬಲಿಗರ ನಡುವೆ ಘರ್ಷಣೆಗಳು ನಡೆದಿದೆ. ಕಚ್ಚಾ ಬಾಂಬ್‌ ಗಳನ್ನು ಎಸೆದಿರುವ ಪರಿಣಾಮ ಹಲವರು ಗಾಯಗೊಂಡಿದ್ದಾರೆ.

ದಕ್ಷಿಣ 24 ಪರಗಣ ಜಿಲ್ಲೆಯ ಕುಲ್ತಾಲಿಯಲ್ಲಿ, ಆಕ್ರೋಶಿತ ಜನಸಮೂಹವು ಮತಗಟ್ಟೆಗಳಿಗೆ ಬಲವಂತವಾಗಿ ನುಗ್ಗಿ, ಎಲೆಕ್ಟ್ರಾನಿಕ್ ಮತಯಂತ್ರವನ್ನು(ಇವಿಎಂ) ಮತ್ತು ವಿವಿಪ್ಯಾಟ್‌ ಮೆಷಿನ್‌ ತೆಗೆದುಕೊಂಡು ಪಕ್ಕದ ಕೊಳಕ್ಕೆ ಎಸೆದಿದ್ದಾರೆ. ಕೆಲವು ಮತಗಟ್ಟೆ ಏಜೆಂಟರನ್ನು ಬೂತ್‌ಗಳಿಗೆ ಪ್ರವೇಶಿಸದಂತೆ ನಿರ್ಬಂಧಿಸಿದ ನಂತರ ಈ ಘಟನೆ ಸಂಭವಿಸಿದೆ. ಈ ಕುರಿತು ಎಫ್‌ಐಆರ್ ದಾಖಲಿಸಲಾಗಿದೆ ಮತ್ತು ಸೆಕ್ಟರ್‌ನ ಎಲ್ಲಾ ಆರು ಬೂತ್‌ಗಳಲ್ಲಿ ಅಗತ್ಯ ಕ್ರಮವನ್ನು ಕೈಗೊಳ್ಳಲಾಗಿದೆ ಮತ್ತು ಹೊಸ ಇವಿಎಂಗಳನ್ನು ಸೆಕ್ಟರ್ ಅಧಿಕಾರಿಗೆ ಒದಗಿಸಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಶುಕ್ರವಾರ ತಡರಾತ್ರಿ ಬಸಿರ್‌ಹತ್ ಲೋಕಸಭೆ ವ್ಯಾಪ್ತಿಯ ಸಂದೇಶ್‌ಖಾಲಿಯಲ್ಲಿ ಉದ್ವಿಗ್ನತೆ ಉಂಟಾಗಿದೆ. ಸ್ಥಳೀಯ ಮಹಿಳೆಯರು ಬಿದಿರಿನ ಕೋಲುಗಳನ್ನು ಹಿಡಿದುಕೊಂಡು ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಪೊಲೀಸರ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಇಟ್ಖೋಲಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಟಿಎಂಸಿ ಮತ್ತು ಬಿಜೆಪಿ ಬೆಂಬಲಿಗರ ನಡುವೆ ಘರ್ಷಣೆಗಳು ನಡೆದಿದ್ದರಿಂದ, ದಕ್ಷಿಣ 24 ಪರಗಣ ಜಿಲ್ಲೆಯ ಕ್ಯಾನಿಂಗ್‌ನಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಈ ಪ್ರದೇಶದಲ್ಲಿ ಕಲ್ಲು ತೂರಾಟ ನಡೆದಿದ್ದು, ಮಾಧ್ಯಮದ ಸಿಬ್ಬಂದಿಯೊಬ್ಬರು ಗಾಯಗೊಂಡಿದ್ದಾರೆ.

ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಮತ್ತು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಪ್ರತಿಭಟನೆಯ ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತದಾರರನ್ನು ಬೆದರಿಸಲು ಪಕ್ಷದ ಗೂಂಡಾಗಳು ಮತ್ತು ರಾಜ್ಯ ಪೊಲೀಸರನ್ನು ಬಳಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಭಾಂಗಾರ್‌ನಲ್ಲಿ ಟಿಎಂಸಿ ಮತ್ತು ಆಲ್ ಇಂಡಿಯಾ ಸೆಕ್ಯುಲರ್ ಫ್ರಂಟ್ (ಎಐಎಸ್‌ಎಫ್) ಕಾರ್ಯಕರ್ತರ ನಡುವಿನ ಘರ್ಷಣೆ ನಡೆದಿದೆ, ಈ ವೇಳೆ ಎಐಎಸ್‌ಎಫ್ ಮಹಿಳಾ ಕಾರ್ಯಕರ್ತೆ ಗಾಯಗೊಂಡಿದ್ದಾರೆ. ದುಷ್ಕರ್ಮಿಗಳು ಎಐಎಸ್‌ಎಫ್ ಅಭ್ಯರ್ಥಿ ನೂರ್ ಆಲಂ ಖಾನ್ ಅವರ ವಾಹನವನ್ನು ಧ್ವಂಸಗೊಳಿಸಿದ್ದಾರೆ.

ದಮ್‌ದಮ್‌, ಬರಾಸತ್, ಬಸಿರ್ಹತ್, ಜಯನಗರ, ಮಥುರಾಪುರ, ಡೈಮಂದ್ ಹಾರ್ಬರ್, ಜಾದವ್‌ಪುರ, ಕೋಲ್ಕತ್ತಾ ದಕ್ಷಿಣ ಮತ್ತು ಕೋಲ್ಕತ್ತಾ ಉತ್ತರ ಸೇರಿದಂತೆ ಪಶ್ಚಿಮ ಬಂಗಾಳದ ಒಂಬತ್ತು ಲೋಕಸಭಾ ಸ್ಥಾನಗಳಿಗೆ ಕಟ್ಟುನಿಟ್ಟಿನ ಭದ್ರತಾ ಕ್ರಮ ಕೈಗೊಂಡಿದ್ದರೂ ಹಲವೆಡೆ ಹಿಂಸಾಚಾರ ವರದಿಯಾಗಿರುವುದು ವಿಪರ್ಯಾಸವಾಗಿದೆ.

Previous Post
ದಲಿತ ಯುವಕನನ್ನು ಅಪಹರಿಸಿ ಬೆತ್ತಲೆಗೊಳಿಸಿ ಥಳಿತ: ಬಿಜೆಪಿ ಶಾಸಕಿ ಪುತ್ರನ ವಿರುದ್ಧ FIR
Next Post
ಚೆನ್ನೈ-ಮುಂಬೈ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ; ತುರ್ತು ಲ್ಯಾಂಡಿಂಗ್

Recent News