ಹಿಂಡೆನ್‌ಬರ್ಗ್‌ ವರದಿಯಲಿಂದ ಸೆಬಿ ಸಮಗ್ರತೆಗೆ ಧಕ್ಕೆಯಾಗಿದೆ – ರಾಹುಲ್‌ಗಾಂಧಿ

ಹಿಂಡೆನ್‌ಬರ್ಗ್‌ ವರದಿಯಲಿಂದ ಸೆಬಿ ಸಮಗ್ರತೆಗೆ ಧಕ್ಕೆಯಾಗಿದೆ – ರಾಹುಲ್‌ಗಾಂಧಿ

ನವದೆಹಲಿ : ಹಿಂಡೆನ್‌ಬರ್ಗ್‌ ವರದಿಯಲ್ಲಿನ ಆರೋಪದಿಂದ ಭಾರತೀಯ ಷೇರು ಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ಸಮಗ್ರತೆಗೆ ಧಕ್ಕೆಯಾಗಿದೆ, ಜಂಟಿ ಸದನ ಸಮಿತಿ ರಚಿಸಿ ತನಿಖೆ ನಡೆಸಲು ಮೋದಿ ಏಕೆ ಹೆದರುತ್ತಿದ್ದಾರೆ ಎಂಬುವುದು ಸ್ಪಷ್ಟವಾಗಿದೆ ಎಂದು ಎಂದಿರುವ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಅಮೆರಿಕದ ಶಾರ್ಟ್‌ ಶೆಲ್ಲರ್ ಕಂಪನಿ ಹಿಂಡೆನ್‌ಬರ್ಗ್‌, ಅದಾನಿ ಷೇರು ಹಗರಣದಲ್ಲಿ ಸೆಬಿ ಅಧ್ಯಕ್ಷೆ ಮಾಧವಿ ಬುಚ್ ಮತ್ತು ಅವರ ಪತಿ ಧವಲ್‌ ಬುಚ್ ಪಾತ್ರವಿದೆ ಎಂದು ಆರೋಪಿಸಿದ ಹಿನ್ನೆಲೆ ರಾಹುಲ್ ಗಾಂಧಿ ಹೇಳಿಕೆ ನೀಡಿದ್ದಾರೆ

ಈ ಕುರಿತು ಎಕ್ಸ್‌ನಲ್ಲಿ ಬರೆದುಕೊಂಡಿರುವ ರಾಹುಲ್ ಗಾಂಧಿ, ಸಣ್ಣ ಚಿಲ್ಲರೆ ಹೂಡಿಕೆದಾರರ ಸಂಪತ್ತನ್ನು ಸಂರಕ್ಷಿಸುವ ಹೊಣೆ ಹೊತ್ತಿರುವ ಸೆಬಿಯ ಅಧ್ಯಕ್ಷರ ವಿರುದ್ಧ ಆರೋಪ ಕೇಳಿ ಬಂದಿದೆ. ಇದರೊಂದಿಗೆ, ಸೆಬಿಯ ಸಮಗ್ರತೆಯನ್ನು ಗಂಭೀರವಾಗಿ ರಾಜಿ ಮಾಡಿಕೊಳ್ಳಲಾಗಿದೆ. ದೇಶದಾದ್ಯಂತ ಪ್ರಾಮಾಣಿಕ ಹೂಡಿಕೆದಾರರು ಸೆಬಿ ಅಧ್ಯಕ್ಷೆ ಮಾಧವಿ ಬುಚ್ ಇನ್ನೂ ಏಕೆ ರಾಜೀನಾಮೆ ನೀಡಿಲ್ಲ? ಎಂದು ಸರ್ಕಾರವನ್ನು ಕೇಳುತ್ತಿದ್ದಾರೆ. ಹೂಡಿಕೆದಾರರು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಕಳೆದುಕೊಂಡರೆ, ಪ್ರಧಾನಿ ಮೋದಿ, ಸೆಬಿ ಅಧ್ಯಕ್ಷೆ ಅಥವಾ ಗೌತಮ್ ಅದಾನಿ ಯಾರನ್ನು ಹೊಣೆಗಾರರನ್ನಾಗಿ ಮಾಡಬೇಕು? ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

ಹೊಸ ಮತ್ತು ಅತ್ಯಂತ ಗಂಭೀರ ಆರೋಪ ಬೆಳಕಿಗೆ ಬಂದಿದೆ. ಸುಪ್ರೀಂ ಕೋರ್ಟ್ ಈ ವಿಷಯವನ್ನು ಮತ್ತೊಮ್ಮೆ ಸ್ವಯಂ ಪ್ರೇರಿತವಾಗಿ ಪರಿಶೀಲಿಸಲಿದೆಯೇ? ಪ್ರಧಾನಿ ಮೋದಿಯವರು ಜಂಟಿ ಸದನ ಸಮಿತಿ ರಚಿಸಲು ಹೆದರುತ್ತಿರುವುದು ಏಕೆ? ಆ ಸಮಿತಿ ಏನನ್ನು ಬಹಿರಂಗಪಡಿಸಬಹುದು? ಭಾರತೀಯ ಷೇರು ಮಾರುಕಟ್ಟೆಯಲ್ಲಿ ‘ಗಮನಾರ್ಹ ಅಪಾಯ’ ವಿದೆ ಎಂದು ಜನರ ಗಮನಕ್ಕೆ ತರುವುದು ವಿರೋಧ ಪಕ್ಷದ ನಾಯಕನಾಗಿ ನನ್ನ ಕರ್ತವ್ಯ. ಏಕೆಂದರೆ, ಮಾರುಕಟ್ಟೆಯನ್ನು ನಿಯಂತ್ರಿಸುವ ಸಂಸ್ಥೆ ರಾಜಿ ಮಾಡಿಕೊಂಡಿದೆ ಎಂದು ಹೇಳಿದ್ದಾರೆ.

ನೀವು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನು ವೀಕ್ಷಿಸುತ್ತಿರುವಿರಿ ಎಂದು ಊಹಿಸಿಕೊಳ್ಳಿ. ಪಂದ್ಯವನ್ನು ವೀಕ್ಷಿಸುತ್ತಿರುವ ಪ್ರತಿಯೊಬ್ಬ ವ್ಯಕ್ತಿಗೆ ಮತ್ತು ಪಂದ್ಯವನ್ನು ಆಡುವವರಿಗೆ ಅಂಪೈರ್ ರಾಜಿ ಮಾಡಿಕೊಂಡಿದ್ದಾರೆ ಎಂದು ತಿಳಿದಿದೆ. ಹಾಗೇನಾದರು ಆದರೆ, ಪಂದ್ಯದ ನ್ಯಾಯೋಚಿತತೆಗೆ ಏನಾಗಬಹುದು, ಫಲಿತಾಂಶ ಏನಾಗಬಹುದು. ಪಂದ್ಯದಲ್ಲಿ ಭಾಗವಹಿಸುವ ವ್ಯಕ್ತಿಯಾಗಿ ನಿಮಗೆ ಹೇಗೆ ಅನಿಸುತ್ತದೆ? ಅದೇ ಈಗ ಭಾರತದ ಷೇರು ಮಾರುಕಟ್ಟೆಯಲ್ಲಿ ನಡೆಯುತ್ತಿದೆ ಎಂದು ವಿಡಿಯೋದಲ್ಲಿ ರಾಹುಲ್ ಗಾಂಧಿ ಹೇಳಿದ್ದಾರೆ.

Previous Post
ಬಾಂಗ್ಲಾದಲ್ಲಿ ಅಶಾಂತಿ; ಭಾರತಕ್ಕೆ ಭಯೋತ್ಪಾದನೆ ಭೀತಿ
Next Post
ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆ ಖಂಡಿಸಿ ದೇಶದ್ಯಾಂತ ಪ್ರತಿಭಟನೆ

Recent News