ಹಿಮಾಚಲ ಪ್ರದೇಶ ಸಚಿವ ವಿಕ್ರಮಾದಿತ್ಯ ಸಿಂಗ್ ರಾಜೀನಾಮೆ

ಹಿಮಾಚಲ ಪ್ರದೇಶ ಸಚಿವ ವಿಕ್ರಮಾದಿತ್ಯ ಸಿಂಗ್ ರಾಜೀನಾಮೆ

ಶಿಮ್ಲಾ: ರಾಜ್ಯಸಭೆ ಚುನಾವಣೆ ಫಲಿತಾಂಶದ ಬಳಿಕ ಕಾಂಗ್ರೆಸ್ ಶಾಸಕ ವಿಕ್ರಮಾದಿತ್ಯ ಸಿಂಗ್ ಅವರು ಬುಧವಾರ ಬೆಳಗ್ಗೆ ಸಚಿವ ಸಂಪುಟ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸುಖವಿಂದರ್ ಸಿಂಗ್ ಸುಖು ಸರ್ಕಾರವು ತನ್ನ ಸ್ವಂತ ಶಾಸಕರನ್ನು ಹಲವಾರು ಬಾರಿ ಅವಮಾನಿಸಿದೆ ಎಂದು ವಿಕ್ರಮಾದಿತ್ಯ ಸಿಂಗ್ ಆರೋಪಿಸಿದ್ದಾರೆ. ಅವಮಾನವನ್ನು ಸಹಿಸಲಾಗುವುದಿಲ್ಲ ಎಂದು ಹೇಳಿದ ವಿಕ್ರಮಾದಿತ್ಯ, ಈಗ ಹಿಮಾಚಲದಲ್ಲಿ ಕಾಂಗ್ರೆಸ್ ಮುಂದಿನ ನಡೆ ಕುರಿತು ಪಕ್ಷದ ಹೈಕಮಾಂಡ್ ನಿರ್ಧರಿಸಬೇಕು ಎಂದು ಹೇಳಿದ್ದಾರೆ.

ವಿಕ್ರಮಾದಿತ್ಯ ಅವರು ಮಾಜಿ ಮುಖ್ಯಮಂತ್ರಿ ವೀರಭದ್ರ ಸಿಂಗ್ ಮತ್ತು ಕಾಂಗ್ರೆಸ್ ಸಂಸದೆ ಪ್ರತಿಭಾ ಸಿಂಗ್ ಅವರ ಪುತ್ರ. ಈಗಾಗಲೇ ರಾಜ್ಯದಲ್ಲಿ ಕಾಂಗ್ರೆಸ್ ಸಂಕಷ್ಟ ಎದುರಿಸುತ್ತಿರುವ ಸಂದರ್ಭದಲ್ಲಿ ಅವರು ರಾಜೀನಾಮೆ ನೀಡಿದ್ದಾರೆ. ಮಂಗಳವಾರ ನಡೆದ ಭಾರಿ ಕುತೂಹಲ ಕೆರಳಿಸಿದ್ದ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಆರು ಶಾಸಕರು ಬಿಜೆಪಿ ಅಭ್ಯರ್ಥಿಗೆ ಮತ ಹಾಕಿದ್ದಾರೆ. ಬಿಜೆಪಿಯ ಹರ್ಷ್ ಮಹಾಜನ್ ಅವರು ಕಾಂಗ್ರೆಸ್‌ನ ಅಭಿಷೇಕ್ ಸಿಂಘ್ವಿ ಅವರನ್ನು ಸೋಲಿಸಿ ಗೆಲುವು ಸಾಧಿಸಿದ್ದಾರೆ.

ಬಿಜೆಪಿಯು ವಿಶ್ವಾಸಮತಕ್ಕೆ ಒತ್ತಾಯಿಸಲಿದೆಯೇ ಎಂಬ ಪ್ರಶ್ನೆ ಉದ್ಭವಿಸಿದ್ದು, ಹಿಮಾಚಲ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಜೈರಾಮ್ ಠಾಕೂರ್ ಅವರು ಇಂದು ಬೆಳಗ್ಗೆ ರಾಜ್ಯಪಾಲರನ್ನು ಭೇಟಿ ಮಾಡಿದ್ದಾರೆ. ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷ ಗೆಲುವು ಸಾಧಿಸಲು ವಿಫಲವಾದ ನಂತರ ಕಾಂಗ್ರೆಸ್ ಜನಾದೇಶವನ್ನು ಕಳೆದುಕೊಂಡಿದೆ ಎಂದು ಠಾಕೂರ್ ಹೇಳಿದ್ದಾರೆ. ಬಿಜೆಪಿಯ ಹೇಳಿಕೆಗಳನ್ನು ಕಾಂಗ್ರೆಸ್‌ ನಿರಾಕರಿಸಿದೆ.

Previous Post
ಲೋಕಸಭೆ ಚುನಾವಣೆಗೂ ಮುನ್ನ ಸಿಎಎ ಜಾರಿ?
Next Post
ಅಖಿಲೇಶ್‌ ಯಾದವ್‌ಗೆ ಸಿಬಿಐ ಸಮನ್ಸ್‌

Recent News