ಹೆಲ್ಮೆಟ್ ಧರಿಸಿಲ್ಲ ಎಂದು ಕಾರಿಗೂ 1 ಸಾವಿರ ದಂಡ ವಿಧಿಸಿದ ಯುಪಿ ಪೊಲೀಸರು
ಲಕ್ನೋ, ಮೇ 16: ಬೈಕ್ ಸವಾರರು ಹೆಲ್ಮೆಟ್ ಧರಿಸದಿದ್ದರೆ ಟ್ರಾಫಿಕ್ ಪೊಲೀಸರು ದಂಡ ವಿಧಿಸುವುದು ಸಾಮಾನ್ಯ. ಆದರೆ ಉತ್ತರ ಪ್ರದೇಶದಲ್ಲಿ ಟ್ರಾಫಿಕ್ ಪೊಲೀಸರು ಕಾರಿಗೂ ದಂಡ ವಿಧಿಸಿದ್ದಾರೆ. ಇದರಿಂದ ಮನನೊಂದ ಕಾರು ಚಾಲಕ ಈಗ ಪ್ರತಿದಿನವೂ ಕಾರು ಓಡಿಸುವಾಗಲೂ ಹೆಲ್ಮೆಟ್ ಧರಿಸುತ್ತಿದ್ದು, ಈತನ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಟ್ರಕ್ಕರ್ ಯೂನಿಯನ್‌ನ ಅಧ್ಯಕ್ಷರಾಗಿರುವ ಪರಿಹಾರ್ ಅವರ ಫೋನ್‌ಗೆ ಮಾರ್ಚ್ ತಿಂಗಳಲ್ಲಿ ಸಂದೇಶವೊಂದು ಬಂದಿದೆ. ಅದರಲ್ಲಿ ಅವರ ಕಾರಿಗೆ ದಂಡ ವಿಧಿಸಲಾಗಿತ್ತು. ಹೀಗಾಗಿ ವೆಬ್‌ಸೈಟ್‌ಗೆ ಹೋಗಿ ಏಕೆ ದಂಡ ವಿಧಿಸಲಾಗಿದೆ ಎಂದು ನೋಡಿದಾಗ, ಹೆಲ್ಮೆಟ್ ಧರಿಸಿಲ್ಲ ಎಂಬ ಕಾರಣಕ್ಕೆ ಅವರಿಗೆ ಚಲನ್ ಕಳುಹಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಝಾನ್ಸಿಯ ನಂದು ಕಾಲೋನಿಯ ನಿವಾಸಿಯಾದ ಪರಿಹಾರ್ ಅವರು ಸೀದಾ ಹೋಗಿ ಟ್ರಾಫಿಕ್ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಆದರೆ ಪೊಲೀಸರು ಈ ವಿಚಾರವನ್ನು ಲೋಕಸಭಾ ಚುನಾವಣೆಯ ನಂತರ ಗಮನಿಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಇನ್ನಷ್ಟು ದಂಡ ಬೀಳದೇ ಇರಲಿ ಎಂಬ ಕಾರಣಕ್ಕೆ ತಾವು ಹೆಲ್ಮೆಟ್ ಧರಿಸುತ್ತಿರುವುದಾಗಿ ಅವರು ಹೇಳಿದ್ದಾರೆ.