ಹೈಕೋರ್ಟ್‍ನ ನ್ಯಾಯಮೂರ್ತಿ ಹುದ್ದೆಗೆ ರಾಜೀನಾಮೆ ಬಿಜೆಪಿ ಸೇರ್ಪಡೆಯಾಗಲಿರುವ ನ್ಯಾ.ಅಭಿಜಿತ್ ಗಂಗೋಪಾಧ್ಯಾಯ

ಹೈಕೋರ್ಟ್‍ನ ನ್ಯಾಯಮೂರ್ತಿ ಹುದ್ದೆಗೆ ರಾಜೀನಾಮೆ ಬಿಜೆಪಿ ಸೇರ್ಪಡೆಯಾಗಲಿರುವ ನ್ಯಾ.ಅಭಿಜಿತ್ ಗಂಗೋಪಾಧ್ಯಾಯ

ಕೋಲ್ಕತ್ತಾ: ಹೈಕೋರ್ಟ್‍ನ ನ್ಯಾಯಮೂರ್ತಿ ಹುದ್ದೆಗೆ ರಾಜೀನಾಮೆ ನೀಡಿದ ನ್ಯಾ.ಅಭಿಜಿತ್ ಗಂಗೋಪಾಧ್ಯಾಯ ಅವರು ಭಾರತೀಯ ಜನತಾ ಪಾರ್ಟಿ ಸೇರುವುದಾಗಿ ಮಾಧ್ಯಮಗಳಿಗೆ ಹೇಳಿಕೆ ಕೊಟ್ಟಿದ್ದಾರೆ. ಅವರು ತಮ್ಮ ಸಾಲ್ಟ್ ಲೇಕ್ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.

ಮಾರ್ಚ್ 7 ರಂದು ಬಿಜೆಪಿ ಸೇರುವ ಸಾಧ್ಯತೆಯಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಬೇಕೇ ಅಥವಾ ಬೇಡವೇ ಎಂಬುದನ್ನು ಪಕ್ಷ ನಿರ್ಧರಿಸುತ್ತದೆ. ತೃಣಮೂಲ ಕಾಂಗ್ರೆಸ್‍ನ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿರುವ ಏಕೈಕ ರಾಷ್ಟ್ರೀಯ ಪಕ್ಷ ಬಿಜೆಪಿಯಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ಆಡಳಿತ ಪಕ್ಷದ ಲೇವಡಿಯಿಂದ ನಾನು ಈ ಕ್ರಮಕ್ಕೆ ಮುಂದಾಗಿದ್ದೇನೆ. ಅವರ ಅಪಹಾಸ್ಯ ಮತ್ತು ಹೇಳಿಕೆಗಳು ನನ್ನನ್ನು ಈ ಹೆಜ್ಜೆ ಇಡಲು ಪ್ರೇರೇಪಿಸಿತು. ಆಡಳಿತ ಪಕ್ಷ ನನ್ನನ್ನು ಹಲವು ಬಾರಿ ಅವಮಾನಿಸಿದೆ. ಅವರ ವಕ್ತಾರರು ನನ್ನ ಮೇಲೆ ಅಸಂಸದೀಯ ಪದಗಳಿಂದ ದಾಳಿ ನಡೆಸಿದ್ದಾರೆ. ಅವರಿಗೆ ಶಿಕ್ಷಣದ ಸಮಸ್ಯೆ ಇದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ. ಆಡಳಿತ ಪಕ್ಷದ ನಾಯಕರು ರಾಜಕೀಯ ಅಖಾಡಕ್ಕೆ ಬಂದು ಹೋರಾಡುವಂತೆ ನನಗೆ ಹಲವಾರು ಬಾರಿ ಸವಾಲು ಹಾಕಿದ್ದಾರೆ. ಹಾಗಾಗಿ ಅವರ ಆಸೆಗಳನ್ನು ಪೂರೈಸಲು ನಾನು ಯೋಚಿಸಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ.

ಅಭಿಜಿತ್ ಗಂಗೋಪಾಧ್ಯಾಯ ಭಾನುವಾರ ನ್ಯಾಯಾಂಗವನ್ನು ತೊರೆಯುತ್ತಿರುವುದಾಗಿ ಹೇಳಿದ್ದರು. ಅವರು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ರಾಜೀನಾಮೆ ಸಲ್ಲಿಸಿದ ಗಂಟೆಗಳ ನಂತರ, ಅದರ ಪ್ರತಿಗಳನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ಕಲ್ಕತ್ತಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಟಿಎಸ್ ಶಿವಜ್ಞಾನಂ ಅವರಿಗೆ ಕಳುಹಿಸಲಾಯಿತು. ಸಂವಿಧಾನದ 217 (1) (ಎ) ವಿಧಿಯ ಅಡಿಯಲ್ಲಿ ತಕ್ಷಣವೇ ರಾಜೀನಾಮೆ ಸ್ವಿಕೃತವಾಯಿತು.

ಆಗಸ್ಟ್‌ನಲ್ಲಿ ನಿವೃತ್ತರಾಗಬೇಕಿದ್ದ ನ್ಯಾಯಾಧೀಶರು ಆಡಳಿತಾರೂಢ ಟಿಎಂಸಿ ಮತ್ತು ಅದರ ನಾಯಕ ಅಭಿಷೇಕ್ ಬ್ಯಾನರ್ಜಿ ವಿರುದ್ಧ ಪದೇ ಪದೇ ಕಟು ಪದಗಳನ್ನು ಬಳಸಿ ಟೀಕಿಸುತ್ತಿದ್ದರು. ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಶಿಕ್ಷಕರ ನೇಮಕಾತಿ ಹಗರಣ ಸಂಬಂಧ ನ್ಯಾ. ಅಭಿಜಿತ್ ಗಂಗೋಪಾಧ್ಯಾಯ ಅವರು ಸಿಬಿಐ ತನಿಖೆಗೆ ಆದೇಶಿಸಿದ್ದರು. ಅಲ್ಲದೇ ಸರ್ಕಾರದ ವಿರುದ್ಧ ಪದೇ ಪದೇ ಚಾಟಿ ಬೀಸುತ್ತಿದ್ದರು. ಹೀಗಾಗಿ ಟಿಎಂಸಿ ವಕ್ತಾರರು ಸಕ್ರಿಯ ರಾಜಕೀಯಕ್ಕೆ ಇಳಿಯುವಂತೆ ಅವರಿಗೆ ಸವಾಲು ಹಾಕಿದ್ದರು

ನ್ಯಾಯಮೂರ್ತಿ ಗಂಗೋಪಾಧ್ಯಾಯ ಅವರು ಮೇ 2018 ರಲ್ಲಿ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕಗೊಳ್ಳುವ ಮೊದಲು ಕೋಲ್ಕತ್ತಾ ಹೈಕೋರ್ಟ್‍ನಲ್ಲಿ ವಕೀಲರಾಗಿದ್ದರು. 2020 ರಲ್ಲಿ ಅವರು ಕೋಲ್ಕತ್ತಾ ಹೈಕೋರ್ಟ್‍ನ ಖಾಯಂ ನ್ಯಾಯಾಧೀಶರಾಗಿ ಬಡ್ತಿ ಪಡೆದರು. ತೃಣಮೂಲ ಸರ್ಕಾರದ ಅಡಿಯಲ್ಲಿ ಪಶ್ಚಿಮ ಬಂಗಾಳವು ಕಳ್ಳರ ಸಾಮ್ರಾಜ್ಯ ಎಂದು ನಾನು ಹೇಳಿದ್ದೇನೆ. ಪಶ್ಚಿಮ ಬಂಗಾಳದ ಘನತೆ ಈಗ ಹಾಳಾಗುತ್ತಿದ್ದು, ಅದನ್ನು ಉಳಿಸಲು ಸಾಧ್ಯವೇ ಎನ್ನುವುದೇ ದೊಡ್ಡ ಪ್ರಶ್ನೆ. ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ನ್ಯಾಯಾಲಯದ ಸಭಾಂಗಣದಿಂದ ಸಾಮಾನ್ಯ ಜನರನ್ನು ತಲುಪಲು ಸಾಧ್ಯವಾಗುತ್ತಿಲ್ಲ. ಬಂಗಾಳಿಯಾಗಿ ನಾನು ಈ ಅನ್ಯಾಯವನ್ನು ಒಪ್ಪಲಾರೆ. ದೊರೆಗಳಾಗಿ ಹೊರಹೊಮ್ಮಿದವರು ರಾಜ್ಯಕ್ಕೆ ಪ್ರಯೋಜನವಾಗುವಂತೆ ತೋರಲಿಲ್ಲ. ಸವಾಲು ಸ್ವೀಕರಿಸಿ ರಾಜೀನಾಮೆ ನೀಡುತ್ತಿದ್ದೇನೆ ಎಂದು ತಿಳಿಸಿದ್ದರು.

Previous Post
ನದಿಯೊಳಗಿನ ಮೆಟ್ರೋ ಸುರಂಗ, ಇಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ
Next Post
ಮಾಜಿ ಕೇಂದ್ರ ಸಚಿವ ಎ ರಾಜಾ ಮತ್ತೊಂದು ವಿವಾದತ್ಮಾಕ ಹೇಳಿಕೆ

Recent News