ಹೊಸ ಕ್ರಿಮಿನಲ್ ಕಾನೂನುಗಳ ತಿದ್ದುಪಡಿಗಾಗಿ ಸಮಿತಿ ರಚಿಸಿದ ತಮಿಳುನಾಡು ಸರ್ಕಾರ

ಹೊಸ ಕ್ರಿಮಿನಲ್ ಕಾನೂನುಗಳ ತಿದ್ದುಪಡಿಗಾಗಿ ಸಮಿತಿ ರಚಿಸಿದ ತಮಿಳುನಾಡು ಸರ್ಕಾರ

ಚೆನ್ನೈ, ಜು. 9: ಹೆಸರು ಬದಲಾವಣೆ ಸೇರಿದಂತೆ ಮೂರು ಹೊಸ ಕ್ರಿಮಿನಲ್ ಕಾನೂನುಗಳಿಗೆ ರಾಜ್ಯ ಮಟ್ಟದಲ್ಲಿ ತಿದ್ದುಪಡಿಗಳನ್ನು ಶಿಫಾರಸು ಮಾಡಲು ನಿವೃತ್ತ ನ್ಯಾಯಮೂರ್ತಿ ಎಂ ಸತ್ಯನಾರಾಯಣನ್ ನೇತೃತ್ವದ ಸಮಿತಿಯನ್ನು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಸೋಮವಾರ ರಚಿಸಿದ್ದಾರೆ.
ಮೂರು ಕ್ರಿಮಿನಲ್ ಕಾನೂನುಗಳಾದ ಇಂಡಿಯನ್ ಪೀನಲ್ ಕೋಡ್, ದ ಕೋಡ್ ಆಫ್ ಕ್ರಿಮಿನಲ್ ಪ್ರೊಸೀಜರ್ ಮತ್ತು ಇಂಡಿಯನ್ ಎವಿಡೆನ್ಸ್‌ ಆಕ್ಟ್‌ನ ಹೆಸರನ್ನು ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ ಎಂದು ಬದಲಾಯಿಸಿ ಜುಲೈ 1ರಂದು ಜಾರಿಗೆ ತರಲಾಗಿದೆ. ಸಿಎಂ ಸ್ಟಾಲಿನ್ ರಚಿಸಿರುವ ಸಮಿತಿಯು ಮೂರು ಕಾನೂನುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ಬಾರ್ ಅಸೋಸಿಯೇಶನ್ ಸೇರಿದಂತೆ ವಿವಿಧ ಸಮಿತಿಗಳೊಂದಿಗೆ ಚರ್ಚಿಸಿ ತಿಂಗಳೊಳಗೆ ಸರ್ಕಾರಕ್ಕೆ ಶಿಫಾರಸುಗಳನ್ನು ಮಾಡಲಿದೆ.
ಮೂರು ಕ್ರಿಮಿನಲ್ ಕಾನೂನುಗಳ ಹೆಸರನ್ನು ಬದಲಾಯಿಸಿರುವುದು ಮತ್ತು ಕೆಲವೊಂದು ತಿದ್ದುಪಡಿಗಳನ್ನು ತಂದಿರುವುದು ದೇಶದಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಕಾನೂನುಗಳ ಹೆಸರನ್ನು ಆಂಗ್ಲ ಭಾಷೆಯಿಂದ ಸಂಸ್ಕೃತಕ್ಕೆ ಬದಲಾಯಿಸಲಾಗಿದೆ. ಇದು ಸಂವಿಧಾನ ವಿರೋಧಿ ಎಂದು ಕೆಲವ ವಿಶ್ಲೇಷಕರು ಹೇಳಿದ್ದಾರೆ. ಕಾನೂನುಗಳಿಗೆ ಬದಲಾವಣೆ ತರುವಾಗ ಸಂಸತ್ತು ಸೇರಿದಂತೆ ಎಲ್ಲೂ ಚರ್ಚಿಸದೆ ಕೇಂದ್ರ ಸರ್ಕಾರ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದೆ. ಹೊಸ ಕಾನೂನುಗಳ ತಿದ್ದುಪಡಿ ಮಸೂದೆಗೆ ಅನುಮೋದನೆ ಪಡೆಯುವಾಗ ಸಂಸತ್‌ನಿಂದ 146 ಪ್ರತಿಪಕ್ಷ ಸದಸ್ಯರನ್ನು ಅಮಾನತು ಮಾಡಲಾಗಿತ್ತು.
ಸೋಮವಾರ ಚೆನ್ನೈನ ಸಚಿವಾಲಯದಲ್ಲಿ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸಮಿತಿ ರಚಿಸಿ ಸಿಎಂ ಸ್ಟಾಲಿನ್ ಆದೇಶಿಸಿದ್ದಾರೆ. ಇದಕ್ಕೂ ಮುನ್ನ ಕಾನೂನುಗಳ ಬದಲಾವಣೆ ವಿರೋಧಿಸಿ ಅವರು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಪತ್ರ ಬರೆದಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ಹೊಸ ಕಾನೂನುಗಳ ಕೆಲ ಸೆಕ್ಷನ್‌ಗಳಲ್ಲಿ ತಪ್ಪುಗಳಿವೆ. ಕಾನೂನುಗಳ ಬದಲಾವಣೆ ವೇಳೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳ ಅಭಿಪ್ರಾಯ ಕೇಳಿಲ್ಲ. ಹಾಗಾಗಿ, ರಾಜ್ಯ ಸರ್ಕಾರಗಳ ಅಭಿಪ್ರಾಯ ಪಡೆದು ತಿದ್ದುಪಡಿ ತರಬೇಕು ಎಂದು ಸಿಎಂ ಸ್ಟಾಲಿನ್ ಆಗ್ರಹಿಸಿದ್ದಾರೆ ಎಂದು ಪ್ರಕಟಣೆ ಹೇಳಿದೆ.
ಶಿಫಾರಸು ನೀಡಲು ಸಮಿತಿ ರಚಿಸುವ ಮುನ್ನ ನಡೆದ ಸಭೆಯ ನೇತೃತ್ವನ್ನು ಸಿಎಂ ಸ್ಟಾಲಿನ್ ವಹಿಸಿದ್ದರು. ಜಲ ಸಂಪನ್ಮೂಲ ಸಚಿವ ದುರೈಮುರುಗನ್, ಅಡ್ವೊಕೇಟ್ ಜನರಲ್ ಪಿ.ಎಸ್‌ ರಾಮನ್, ಮುಖ್ಯ ಕಾರ್ಯದರ್ಶಿ ಶಿವ್ ದಾಸ್ ಮೀನಾ, ಗೃಹ ಕಾರ್ಯದರ್ಶಿ ಪಿ ಅಮುಧ, ಡಿಜಿಪಿ ಶಂಕರ್ ಜಿವಾಲ್ ಮತ್ತು ವಕೀಲರು ಮತ್ತು ಸಾರ್ವಜನಿಕರ ಪ್ರತಿನಿಧಿಗಳು ಇದ್ದರು.

Previous Post
15 ನಿಮಿಷದಲ್ಲಿ ಎರಡು ಬಾರಿ ಸಚಿವರಾದ ಶಾಸಕ
Next Post
ಬೀಫ್ ಕಳ್ಳಸಾಗಣೆದಾರರಿಗೆ ಕೇಂದ್ರ ಸಚಿವ ಪಾಸ್: ಸಾಮಾನ್ಯ ಪ್ರಕ್ರಿಯೆ ಎಂದ ಬಿಎಸ್‌ಎಫ್‌

Recent News