ಹೊಸ ಪಕ್ಷ ಸ್ಥಾಪನೆಗೆ ಕೇರಳ ಜೆಡಿಎಸ್ ನಿರ್ಧಾರ

ಹೊಸ ಪಕ್ಷ ಸ್ಥಾಪನೆಗೆ ಕೇರಳ ಜೆಡಿಎಸ್ ನಿರ್ಧಾರ

ತಿರುವನಂತಪುರ, ಜೂ. 19: ಜೆಡಿ(ಎಸ್) ರಾಷ್ಟ್ರೀಯ ನಾಯಕರು ಬಿಜೆಪಿ ಜೊತೆ ಕೈ ಜೋಡಿಸಿರುವ ಹಿನ್ನೆಲೆ, ಪಕ್ಷದ ಕೇರಳ ರಾಜ್ಯ ಘಟಕದ ನಾಯಕರು ಹೊಸ ಪಕ್ಷ ಸ್ಥಾಪನೆಗೆ ನಿರ್ಧರಿಸಿದ್ದಾರೆ. ತಿರುವನಂತಪುರದ ಪಕ್ಷದ ರಾಜ್ಯ ಕಚೇರಿಯಲ್ಲಿ ಸಭೆ ಸೇರಿದ ಕೇರಳ ಜೆಡಿಎಸ್ ನಾಯಕರು, ಹೊಸ ಹೆಸರು, ಚಿಹ್ನೆಯೊಂದಿಗೆ ಹೊಸ ಪಕ್ಷ ಕಟ್ಟುವ ನಿರ್ಧಾರ ಕೈಗೊಂಡಿದ್ದಾರೆ. ಲೋಕಸಭೆ ಚುನಾವಣೆಗೂ ಮುನ್ನ ಜೆಡಿ (ಎಸ್‌) ನಾಯಕರು ಏಕಾಏಕಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವ ಘೋಷಣೆ ಮಾಡಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಪಕ್ಷದ ಕೇರಳ ಘಟಕ, “ನಾವು ಕೇರಳದಲ್ಲಿ ಆಡಳಿತರೂಢ ಎಡರಂಗದ ಜೊತೆಯೇ ಇರುತ್ತೇವೆ” ಎಂದು ಹೇಳಿದ್ದರು.
ಆರಂಭದಲ್ಲಿ ಕೇರಳದ ಜೆಡಿಎಸ್‌ ನಾಯಕರ ಮನವೊಲಿಸುವ ಪ್ರಯತ್ನ ನಡೆಸಿದ್ದ ದೇವೇಗೌಡರು ಮತ್ತು ಕುಮಾರಸ್ವಾಮಿ, ಅವರು ಒಪ್ಪದಿದ್ದಾಗ “ಕೇರಳ ಜೆಡಿಎಸ್ ಎಡರಂಗದ ಜೊತೆಯೇ ಮುಂದುವರಿಯಲಿದೆ” ಎಂದಿದ್ದರು. ಆದರೂ, ಕೇರಳದ ನಾಯಕರಿಗೆ ದೇವೇಗೌಡರು ಮತ್ತು ಕುಮಾರಸ್ವಾಮಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವುದು ಸಮಾಧಾನ ನೀಡಿರಲಿಲ್ಲ. ಲೋಕಸಭೆಯ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿರುವ ಕುಮಾರಸ್ವಾಮಿ, ಪ್ರಸ್ತುತ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಬೆಳವಣಿಗೆ ಕೇರಳ ಜೆಡಿಎಸ್‌ ನಾಯಕರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಹೊಸ ಪಕ್ಷದ ಕುರಿತು ಅಂತಿಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಕೇರಳ ಜೆಡಿಎಸ್ ನಾಯಕರು ಸಮಿತಿ ರಚಿಸಿದ್ದಾರೆ.
ಹೊಸ ಪಕ್ಷದ ಹೆಸರು ಶೀಘ್ರದಲ್ಲೇ ನೋಂದಾಯಿಸಲಾಗುವುದು. ಕಾನೂನು ಸಾಧ್ಯತೆಗಳನ್ನು ಪರಿಶೀಲಿಸಿದ ಬಳಿಕ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು. ರಾಷ್ಟ್ರೀಯ ನಾಯಕರು ಬಿಜೆಪಿ ಜೊತೆಗಿನ ಮೈತ್ರಿ ಕಡಿದುಕೊಂಡರೆ ಕೇರಳ ಘಟಕ ಜೆಡಿಎಸ್ ಪಕ್ಷದ ಜೊತೆಯೇ ಇರಲಿದೆ” ಎಂದು ಪಕ್ಷದ ಶಾಸಕ ಮ್ಯಾಥ್ಯೂ ತೋಮಸ್ ತಿಳಿಸಿದ್ದಾರೆ. ಸದ್ಯಕ್ಕೆ ಆರ್‌ಜೆಡಿ ಸೇರಿದಂತೆ ಯಾವುದೇ ಪಕ್ಷದೊಂದಿಗೆ ವಿಲೀನಗೊಳ್ಳದಿರಲು ಜೆಡಿಎಸ್‌ ನಿರ್ಧರಿಸಿದೆ. ಸಮಾಜವಾದಿ ಪಕ್ಷದೊಂದಿಗೆ ವಿಲೀನದ ಬಗ್ಗೆ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮೂಲಗಳು ಹೇಳಿವೆ.
ಆರ್‌ಜೆಡಿ ಜೊತೆ ವಿಲೀನ ಮಾಡದಿರಲು ನಿರ್ಧರಿಸಲಾಗಿದೆ. ಆದರೆ, ಎಸ್ಪಿ ಜೊತೆ ವಿಲೀನದ ಆಯ್ಕೆಯನ್ನು ನಂತರ ನಿರ್ಧರಿಸಲಾಗುವುದು. ಇದು ಹೊಸ ಪಕ್ಷವಾಗಿರುವುದರಿಂದ ಶಾಸಕರು ರಾಜೀನಾಮೆ ನೀಡುವ ಅಗತ್ಯವಿಲ್ಲ ಎಂದು ಹಿರಿಯ ನಾಯಕರೊಬ್ಬರು ಹೇಳಿದ್ದಾರೆ. ಪಕ್ಷದ ಕೇರಳ ಘಟಕವು ಈಗಾಗಲೇ ರಾಷ್ಟ್ರೀಯ ನಾಯಕತ್ವದೊಂದಿಗಿನ ಸಂಬಂಧವನ್ನು ಕಡಿದುಕೊಂಡಿದೆ. ಹಾಗಾಗಿ, ಮತ್ತೊಮ್ಮೆ ರಾಷ್ಟ್ರೀಯ ನಾಯಕತ್ವಕ್ಕೆ ತಿಳಿಸುವ ಅಗತ್ಯವಿಲ್ಲ ಎಂದಿದ್ದಾರೆ.
ಕೇರಳ ಜೆಡಿ (ಎಸ್) ರಾಷ್ಟ್ರೀಯ ನಾಯಕತ್ವದೊಂದಿಗಿನ ಸಂಬಂಧವನ್ನು ಕಡಿದುಕೊಂಡಿರುವುದಾಗಿ ಘೋಷಿಸಿದ್ದರೂ, ತಾಂತ್ರಿಕವಾಗಿ ಅದು ದೇವೇಗೌಡರ ನೇತೃತ್ವದ ಜೆಡಿ(ಎಸ್)ನ ಕೇರಳ ಘಟಕವಾಗಿಯೇ ಉಳಿದಿದೆ. ಸಿ ಕೆ ನಾಣು ಮತ್ತು ನೀಲಲೋಹಿತದಾಸ್ ಅವರಂತಹ ಕೆಲವು ಹಿರಿಯ ನಾಯಕರು ಪಕ್ಷದ ವರಿಷ್ಠರ ನಿರ್ಧಾರದಿಂದ ಅತೃಪ್ತರಾಗಿದ್ದಾರೆ. ಅಧಿಕೃತ ಬಣದಿಂದ ದೂರ ಸರಿಯುವುದರಿಂದ ರಾಜ್ಯದಲ್ಲಿರುವ ಇಬ್ಬರು ಜೆಡಿಎಸ್ ಶಾಸಕರಾದ ಮ್ಯಾಥ್ಯೂ ಥಾಮಸ್ ಮತ್ತು ಕೆ ಕೃಷ್ಣನ್‌ಕುಟ್ಟಿ ಅವರನ್ನು ಅನರ್ಹಗೊಳಿಸಬಹುದು. ಈ ಹಿನ್ನೆಲೆಯಲ್ಲಿ ಮ್ಯಾಥ್ಯೂ ಥಾಮಸ್ ಅವರು ಹೊಸ ಪಕ್ಷ ಕಟ್ಟುವ ನಿರ್ಧಾರ ಪ್ರಕಟಿಸಿದ್ದಾರೆ.

Previous Post
ಮುಂಬೈ ವಾಯವ್ಯ ಫಲಿತಾಂಶ ವಿವಾದ ಕುರಿತು ಕೋರ್ಟ್ ಮೊರೆ: ಆದಿತ್ಯ ಠಾಕ್ರೆ
Next Post
ನೀಟ್ ಮರು ಮೌಲ್ಯಮಾಪನ: ಅಂಕ ಕಳೆದುಕೊಳ್ಳುವ ಟಾಪರ್‌ಗಳು

Recent News