10 ವರ್ಷ ಅಧಿಕಾರದಲ್ಲಿದ್ದು ಹಿಂದೂಗಳು ಅಪಾಯದಲ್ಲಿದ್ದಾರೆ ಎನ್ನುತ್ತಿದ್ದಾರೆ ಎಂದರೆ ಅವರು ಮತ್ತೆ ಅಧಿಕಾರಕ್ಕೆ ಬರಬಾರದು: ಕೀರ್ತಿ ಆಝಾದ್

10 ವರ್ಷ ಅಧಿಕಾರದಲ್ಲಿದ್ದು ಹಿಂದೂಗಳು ಅಪಾಯದಲ್ಲಿದ್ದಾರೆ ಎನ್ನುತ್ತಿದ್ದಾರೆ ಎಂದರೆ ಅವರು ಮತ್ತೆ ಅಧಿಕಾರಕ್ಕೆ ಬರಬಾರದು: ಕೀರ್ತಿ ಆಝಾದ್

ಕೋಲ್ಕತ್ತಾ, ಮೇ. 1: 10 ವರ್ಷಗಳ ಕಾಲ ಅಧಿಕಾರದಲ್ಲಿದ್ದರೂ ಕೇಸರಿ ಪಕ್ಷವು ‘ಹಿಂದೂಗಳು ಅಪಾಯದಲ್ಲಿದ್ದಾರೆ’ (ಹಿಂದೂ ಖತ್ರೆ ಮೇ) ಎಂದು ಹೇಳುವುದನ್ನು ಮುಂದುವರಿಸಿದರೆ, ಪಕ್ಷ ಅಧಿಕಾರಕ್ಕೆ ಮರಳುವ ಅಗತ್ಯದ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕುತ್ತದೆ, ಅಂತಹ ಪಕ್ಷ ಅಧಿಕಾರಕ್ಕೆ ಮತ್ತೆ ಬರಬಾರದು ಎಂದು ಟಿಎಂಸಿ ಅಭ್ಯರ್ಥಿ ಮತ್ತು ಭಾರತದ ಮಾಜಿ ಕ್ರಿಕೆಟಿಗ ಕೀರ್ತಿ ಆಝಾದ್ ಹೇಳಿದ್ದಾರೆ.

ಪಶ್ಚಿಮ ಬಂಗಾಳದ ಬರ್ಧಮಾನ್-ದುರ್ಗಾಪುರ ಲೋಕಸಭಾ ಕ್ಷೇತ್ರದ ಟಿಎಂಸಿ ಅಭ್ಯರ್ಥಿ ಆಝಾದ್ ಪಿಟಿಐಗೆ ನೀಡಿದ ಸಂದರ್ಶನದಲ್ಲಿ, ಕೇಸರಿ ಪಾಳಯಕ್ಕೆ ಜನರ ಮುಂದೆ ಪ್ರಸ್ತುತ ಪಡಿಸಲು ಬೇರೆ ಏನೂ ಇಲ್ಲದ ಕಾರಣ ಯುಸಿಸಿಯನ್ನು(ಏಕರೂಪ ನಾಗರಿಕ ಸಂಹಿತೆಯನ್ನು) ತಂದಿದ್ದು, ಇದು ಚುನಾವಣೆಗಳನ್ನು ಕೋಮುವಾದೀಕರಣಗೊಳಿಸುವ ತಂತ್ರ ಎಂದು ಹೇಳಿದ್ದಾರೆ. ಆಝಾದ್ ಅವರು ಭಾರತದ ವೈವಿಧ್ಯತೆಯನ್ನು ಎತ್ತಿ ಹಿಡಿದಿದ್ದು, ಯುಸಿಸಿಯನ್ನು ವೈವಿಧ್ಯಮಯ ಪ್ರದೇಶದಲ್ಲಿ ಅಳವಡಿಸುವುದರ ವಿರುದ್ಧ ವಾಗ್ಧಾಳಿಯನ್ನು ನಡೆಸಿದ್ದಾರೆ.

ಮೊಘಲರ ಆಳ್ವಿಕೆಯಲ್ಲಿ- ಹಿಂದೂಗಳು ಬೆದರಿಕೆಗೆ ಒಳಗಾಗಲಿಲ್ಲ, ಬ್ರಿಟಿಷ್ ಆಳ್ವಿಕೆಯಲ್ಲಿ ಅವರು ಅಪಾಯಕ್ಕೆ ಒಳಗಾಗಲಿಲ್ಲ, ಸ್ವಾತಂತ್ರ್ಯದ ನಂತರದ ಅನೇಕ ಸರ್ಕಾರಗಳ ಅಡಿಯಲ್ಲಿಯೂ ಸಹ ಹಿಂದೂಗಳು ಯಾವುದೇ ಅಪಾಯವನ್ನು ಎದುರಿಸಲಿಲ್ಲ. ಆದರೆ ಕಳೆದ 10 ವರ್ಷಗಳಿಂದ ಹಿಂದೂ ರಾಷ್ಟ್ರೀಯವಾದಿ ಪಕ್ಷವು ಅಧಿಕಾರದಲ್ಲಿದ್ದಾಗ ಹಿಂದೂಗಳು ಇದ್ದಕ್ಕಿದ್ದಂತೆ ಅಪಾಯಕ್ಕೆ ಒಳಗಾಗುವುದು ಹೇಗೆ? ಎಂದು ಪ್ರಶ್ನಿಸಿದ್ದಾರೆ.

ಹಿಂದೂ ಪಕ್ಷವು ಹಿಂದೂಗಳನ್ನು ಉಳಿಸಲು ಸಾಧ್ಯವಾಗದಿದ್ದರೆ, ಅವರನ್ನು ಅಧಿಕಾರದಿಂದ ಕೆಳಗಿಳಿಸಬೇಕು. ಬಿಜೆಪಿಗೆ ತನ್ನ 10 ವರ್ಷಗಳ ಸಾಧನೆಯ ವರದಿ ತೋರಿಸಲು ಏನೂ ಇಲ್ಲ ಎಂಬುವುದು ಸತ್ಯ. ಅದಕ್ಕಾಗಿಯೇ ಅವರು ‘ಹಿಂದೂ ಖತ್ರೇ ಮೇ ಹೈಂ’ (ಹಿಂದೂಗಳು ಅಪಾಯದಲ್ಲಿದ್ದಾರೆ) ಎಂದು ಸಮುದಾಯಗಳ ಬಗ್ಗೆ ಭಯದ ಮನೋವಿಕಾರವನ್ನು ಹುಟ್ಟುಹಾಕಿದರು ಎಂದು ಹೇಳಿದ್ದಾರೆ.

1983ರ ವಿಶ್ವಕಪ್ ವಿಜೇತ ಕ್ರಿಕೆಟ್ ತಂಡದ ಸದಸ್ಯರಾದ ಆಝಾದ್, ನಾವು ಕಪ್ ಗೆದ್ದಾಗ, ನಮ್ಮ ತಂಡದಲ್ಲಿ ಹಿಂದೂ ಆಟಗಾರರು ಇದ್ದರು, ಮುಸ್ಲಿಂ ಸಮುದಾಯದ ಸೈಯದ್ ಕಿರ್ಮಾನಿ, ಸಿಖ್ ಸಮುದಾಯದ ಬಲ್ವಿಂದರ್ ಸಂಧು, ಕ್ರಿಶ್ಚಿಯನ್ ಸಮುದಾಯದ ರೋಜರ್ ಬಿನ್ನಿ ಇದ್ದರು. ನಾವೆಲ್ಲರೂ ಒಟ್ಟಾಗಿ ಹೋರಾಡಿ ಭಾರತಕ್ಕೆ ಮೊದಲ ವಿಶ್ವಕಪ್ ಗೆದ್ದುಕೊಟ್ಟಿದ್ದೇವೆ. ಈ ಎಲ್ಲಾ ಧರ್ಮಗಳು ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಒಟ್ಟಾಗಿ ಹೋರಾಡಿದವು. ಬಿಜೆಪಿ ಈಗ ಹಿಂದೂಗಳು ಅಪಾಯದಲ್ಲಿದ್ದಾರೆ ಎಂದು ಹೇಳುತ್ತಿದೆ ಎಂದು ಹೇಳಿದ್ದಾರೆ.

ಅನೇಕ ಚುನಾವಣಾ ಪ್ರಚಾರಗಳಲ್ಲಿ ನೀಡಿದ ಭರವಸೆಯ ಹೊರತಾಗಿಯೂ ಯುಸಿಸಿಯನ್ನು ತನ್ನ ಅಧಿಕಾರಾವಧಿಯಲ್ಲಿ ಜಾರಿಗೆ ತರುವಲ್ಲಿ ಬಿಜೆಪಿ ವಿಫಲವಾಗಿದೆ. ಯುಸಿಸಿ ತರುತ್ತೇವೆ ಎಂದು ಬಿಜೆಪಿ ಮೊದಲಿನಿಂದಲೂ ಹೇಳುತ್ತಿದೆ. ಅವರು 1998 ಮತ್ತು 1999ರಲ್ಲೂ ಈ ಭರವಸೆಯನ್ನು ನೀಡಿದ್ದರು. 2014 ರಲ್ಲಿಯೂ UCC ಅವರ ಚುನಾವಣಾ ಕಾರ್ಯಸೂಚಿಯಲ್ಲಿತ್ತು. ಕಳೆದ 1 ದಶಕದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಅವರಿಗೆ ಯುಸಿಸಿಯನ್ನು ಜಾರಿಗೆ ತರದಂತೆ ತಡೆದಿದ್ದು ಯಾರು? ಎಂದು ಅವರು ಪ್ರಶ್ನಿಸಿದ್ದಾರೆ.

Previous Post
ಮಣಿಪುರದಲ್ಲಿ 11 ಶಸ್ತ್ರಸಜ್ಜಿತರ ಬಂಧನ, ಮಹಿಳೆಯರ ಪ್ರತಿಭಟನೆ
Next Post
ಪ್ರಜ್ವಲ್ ರೇವಣ್ಣ ದೇಶ ತೊರೆಯುವುದನ್ನು ಮೋದಿ ತಡೆದಿಲ್ಲ: ಪ್ರಿಯಾಂಕಾ ಗಾಂಧಿ

Recent News