1993ರ ಸರಣಿ ಬಾಂಬ್ ಸ್ಫೋಟ ಪ್ರಕರಣ ಪ್ರಮುಖ ಆರೋಪಿ ಅಬ್ದುಲ್ ಕರೀಂ ತುಂಡಾ ಖುಲಾಸೆ

1993ರ ಸರಣಿ ಬಾಂಬ್ ಸ್ಫೋಟ ಪ್ರಕರಣ ಪ್ರಮುಖ ಆರೋಪಿ ಅಬ್ದುಲ್ ಕರೀಂ ತುಂಡಾ ಖುಲಾಸೆ

ಜೈಪುರ: 1993ರ ಸರಣಿ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಅಬ್ದುಲ್ ಕರೀಂ ತುಂಡಾನನ್ನ ರಾಜಸ್ಥಾನ ವಿಶೇಷ ನ್ಯಾಯಾಲಯ ಪ್ರಕರಣದಿಂದ ಖುಲಾಸೆಗೊಳಿಸಿದೆ. ತುಂಡಾ ವಿರುದ್ಧ ಸಾಕ್ಷ್ಯಾಧಾರಗಳ ಕೊರತೆಯಾದ ಕಾರಣ ಉಲ್ಲೇಖಿಸಿ ದೋಷಮುಕ್ತಗೊಳಿಸಿದೆ. ಇದೇ ವೇಳೆ ಮತ್ತಿಬ್ಬರು ಆರೋಪಿಗಳಾದ ಅಮಿನುದ್ದೀನ್ ಮತ್ತು ಇರ್ಫಾನ್ ಇಬ್ಬರನ್ನು ದೋಷಿಗಳೆಂದು ಪರಿಗಣಿಸಿ ಜೀವಾವಧಿ ಶಿಕ್ಷೆ ವಿಧಿಸಿದೆ.

1992ರಲ್ಲಿ ಬಾಬರಿ ಮಸೀದಿಯನ್ನ ಧ್ವಂಸಗೊಳಿಸಲಾಗಿತ್ತು. ಇದರ ವಿಜಯೋತ್ಸವದ ಭಾಗವಾಗಿ ಮೊದಲ ವರ್ಷದ ವಾರ್ಷಿಕೋತ್ಸವ ಆಚರಿಸಲಾಗುತ್ತಿತ್ತು. ಈ ವೇಳೆ ಲಷ್ಕರ್ ಸಂಘಟನೆಯಿಂದ ಬೆಂಬಲ ಪಡೆದಿದ್ದ ಅಬ್ದುಲ್ ಕರೀಂ ರೈಲುಗಳು ಸೇರಿದಂತೆ 40ಕ್ಕೂ ಹೆಚ್ಚು ಕಡೆಗಳಲ್ಲಿ ಸರಣಿ ಬಾಂಬ್ ಸ್ಫೋಟಿಸಿದ್ದ ಆರೋಪ ಕೇಳಿಬಂದಿತ್ತು. ಈ ವೇಳೆ ಇಬ್ಬರು ಸಾವನ್ನಪ್ಪಿದ್ದರು, ನೂರಾರು ಮಂದಿ ಗಾಯಗೊಂಡಿದ್ದರು.

2013ರಲ್ಲಿ ನೇಪಾಳದ ಗಡಿ ಬನ್‌ಬಾಸಾದಲ್ಲಿ ಈತನನ್ನ ಬಂಧಿಸಲಾಗಿತ್ತು. ತುಂಡಾ ಹಲವು ಬಾಂಬ್ ಸ್ಫೋಟ ಪ್ರಕರಣಗಳಲ್ಲಿ ಆರೋಪಿಯಾಗಿದ್ದರೂ 2016ರಲ್ಲಿ ದೆಹಲಿ ನ್ಯಾಯಾಲಯದಿಂದ 4 ಪ್ರಕರಣಗಳಲ್ಲಿ ಕ್ಲೀನ್ ಚಿಟ್ ಪಡೆದಿದ್ದ. ಅಂದು ದೆಹಲಿ ಪೊಲೀಸರು ಮಹತ್ವದ ಸಾಕ್ಷ್ಯಗಳನ್ನು ತರಲು ವಿಫಲರಾಗಿದ್ದರು ಎಂದು ಕಾರಣ ನೀಡಿ, ಕ್ಲೀನ್ ಚಿಟ್ ನೀಡಿತ್ತು. ಲಷ್ಕರ್ ಸಂಘಟನೆಗೆ ಸೇರಿದ್ದ ʻಡಾ.ಬಾಂಬ್ʼ ಖ್ಯಾತಿಯ ತುಂಡಾ, ಹಲವು ಪ್ರಕರಣಗಳ ಆರೋಪ ಹೊತ್ತಿದ್ದ ಹಿನ್ನೆಲೆಯಲ್ಲಿ ಜೈಲಿನಲ್ಲಿಯೇ ಇದ್ದನು. ಆದ್ರೆ 1996ರ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್‌ 2017ರಲ್ಲಿ ಜೀವಾವಧಿ ಶಿಕ್ಷೆ ಮತ್ತು 1 ಲಕ್ಷ ರೂ. ದಂಡ ವಿಧಿಸಿತ್ತು. ಆಗ ತುಂಡಾಗೆ 75 ವರ್ಷ ವಯಸ್ಸಾಗಿತ್ತು. ಅಂದಿನಿಂದ ಈವರೆಗೆ ತುಂಡಾ ಶಿಕ್ಷೆ ಅನುಭವಿಸುತ್ತಿದ್ದ.

ಈ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ವಕೀಲ ಶಫ್ಕತ್ ಸುಲ್ತಾನಿ, ಅಬ್ದುಲ್ ಕರೀಂ ನಿರಪರಾಧಿ ಎಂದು ನ್ಯಾಯಾಲಯ ಈ ತೀರ್ಪು ನೀಡಿದೆ. ಹಾಗಾಗಿ ಅವರನ್ನ ಎಲ್ಲಾ ಸೆಕ್ಷನ್‌ಗಳು ಹಾಗೂ ಕಾಯ್ದೆಗಳಲ್ಲಿ ದೋಷಮುಕ್ತಗೊಳಿಸಲಾಗಿದೆ. ಐಪಿಸಿ ಸೆಕ್ಷನ್, ರೈಲ್ವೆ ಕಾಯ್ದೆಗಳು ಹಾಗೂ ಶಸ್ತ್ರಾಸ್ತ್ರ ಕಾಯಿದೆ, ಭಯೋತ್ಪಾಕ ಮತ್ತು ಸ್ಫೋಟಕ ವಸ್ತುಗಳ ಕಾಯ್ದೆ ಅಡಿಯಲ್ಲಿ ಪೊಲೀಸರು ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲು ಸಾಧ್ಯವಾಗಿಲ್ಲ ಈ ಹಿನ್ನೆಲೆಯಲ್ಲಿ ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಿರುವುದಾಗಿ ಎಂದು ತಿಳಿಸಿದ್ದಾರೆ.

Previous Post
ಸರ್ಕಾರಿ ಉದ್ಯೋಗಕ್ಕೆ 2 ಮಕ್ಕಳ ನಿಯಮ: ರಾಜಸ್ಥಾನ ನಿರ್ಧಾರಕ್ಕೆ ‘ಸುಪ್ರೀಂ’ ಅಸ್ತು
Next Post
ಇಂದು ಬಿಜೆಪಿ ಮೊದಲ ಪಟ್ಟಿ ಬಿಡುಗಡೆ- ಇಲ್ಲಿದೆ 41 ಅಭ್ಯರ್ಥಿಗಳ ಸಂಭಾವ್ಯ ಪಟ್ಟಿ

Recent News