20 ದಿನಗಳಲ್ಲಿ 13 ಮಕ್ಕಳು ಸಾವು ದೆಹಲಿ ಸರ್ಕಾರದ ವಿಶೇಷ ಚೇತನರ ಆಶ್ರಯಧಾಮದಲ್ಲಿ ಆತಂಕ

20 ದಿನಗಳಲ್ಲಿ 13 ಮಕ್ಕಳು ಸಾವು ದೆಹಲಿ ಸರ್ಕಾರದ ವಿಶೇಷ ಚೇತನರ ಆಶ್ರಯಧಾಮದಲ್ಲಿ ಆತಂಕ

ನವದೆಹಲಿ : ದೆಹಲಿ ಸರ್ಕಾರದ ವಿಶೇಷ ಚೇತನರ ಆಶ್ರಯಧಾಮದಲ್ಲಿ ಕಳೆದ 20 ದಿನಗಳಲ್ಲಿ 13 ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ತನಿಖೆಯಿಂದ ತಿಳಿದುಬಂದಿದೆ. ರೋಹಿಣಿಯಲ್ಲಿರುವ ಆಶಾ ಕಿರಣ್ ಆಶ್ರಯಧಾಮದಲ್ಲಿ ಜನವರಿಯಿಂದ 27 ಸಾವುಗಳು ವರದಿಯಾಗಿವೆ.

ಆಶಾಕಿರಣ್ ಆಶ್ರಯಧಾಮದಲ್ಲಿನ ಮಕ್ಕಳ ಸಾವಿಗೆ ನಿಖರವಾದ ಕಾರಣ ಏನು ಎಂದು ಇನ್ನೂ ತಿಳಿದು ಬಂದಿಲ್ಲ. ಆದರೆ ಸಾವಿನ ಸಂಖ್ಯೆ ಕಳೆದ ವರ್ಷಕ್ಕಿಂತ ಹೆಚ್ಚು ಎಂದು ಗಮನಿಸಿದ ಎಸ್‌ಡಿಎಂ, ಮರಣೋತ್ತರ ಪರೀಕ್ಷೆಯ ವರದಿಗಳ ನಂತರ ಸಾವಿನ ನಿಜವಾದ ಕಾರಣ ತಿಳಿಯಲಿದೆ, ಸದ್ಯ ವರದಿಯು ಮಕ್ಕಳಿಗೆ ನೀಡುತ್ತಿರುವ ಕುಡಿಯುವ ನೀರಿನ ಗುಣಮಟ್ಟದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಹೇಳಿದ್ದಾರೆ.

ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ NCW ಅಧ್ಯಕ್ಷೆ ರೇಖಾ ಶರ್ಮಾ, ದೆಹಲಿ ಸರ್ಕಾರವು ನಡೆಸುತ್ತಿರುವ ಆಶಾ ಕಿರಣ್ ಆಶ್ರಯಧಾಮ ಎಲ್ಲಾ ಆಶಾ (ಭರವಸೆ) ಕಳೆದುಕೊಂಡಿದೆ. ಜನರು ಅದರಲ್ಲಿ ನರಳುತ್ತಿದ್ದಾರೆ ಮತ್ತು ಸಾಯುತ್ತಿದ್ದಾರೆ. ದೆಹಲಿ ಸರ್ಕಾರವು ಏನನ್ನೂ ಮಾಡುತ್ತಿಲ್ಲ, ಅರಿವು ತೆಗೆದುಕೊಂಡು ಅದರ ವಿಚಾರಣೆಗೆ ನನ್ನ ತಂಡವನ್ನು ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.

ದೆಹಲಿ ಸಚಿವ ಅತಿಶಿ ಮಾತನಾಡಿದ್ದು ಸಾವಿನ ಸಂಖ್ಯೆಯ ಬಗ್ಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮ್ಯಾಜಿಸ್ಟ್ರೇಟ್ ತನಿಖೆಯನ್ನು ಪ್ರಾರಂಭಿಸಲು ಮತ್ತು 48 ಗಂಟೆಗಳಲ್ಲಿ ವರದಿಯನ್ನು ಸಲ್ಲಿಸುವಂತೆ ಕಂದಾಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದಾರೆ. ಜನವರಿ 2024 ರಿಂದ ಆಶ್ರಯಧಾಮದಲ್ಲಿ 14 ಸಾವುಗಳು ಸಂಭವಿಸಿವೆ ಎಂದು ಹೇಳಿದ್ದಾರೆ

ಇದರ ಜೊತೆಗೆ ನಿರ್ಲಕ್ಷ್ಯದಿಂದ ಸಾವಿಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಲು ಶಿಫಾರಸು ಮಾಡುವಂತೆ ಸಚಿವರು ಅದೇಶಿಸಿದ್ದಾರೆ. ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ. ಮಕ್ಕಳಿಗೆ ಗಲೀಜು ನೀರು ಬರುತ್ತಿದೆ, ಊಟ ಸಿಗುತ್ತಿಲ್ಲ, ಚಿಕಿತ್ಸೆಯೂ ಸಿಗುತ್ತಿಲ್ಲ, ಈ ಬಗ್ಗೆ ತನಿಖೆ ನಡೆಸಿ, ಇದರಲ್ಲಿ ಭಾಗಿಯಾದ ಎಲ್ಲ ಅಧಿಕಾರಿಗಳನ್ನು ಶಿಕ್ಷಿಸಬೇಕು ಎಂದು ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ರೇಖಾ ಗುಪ್ತಾ ಆರೋಪಿಸಿದ್ದಾರೆ.

Previous Post
ಮಧ್ಯಪ್ರಾಚ್ಯ ಉದ್ವಿಗ್ನತೆ ; ವಿಮಾನ ಹಾರಾಟ ಸ್ಥಗಿತಗೊಳಿಸಿದ ಏರ್ ಇಂಡಿಯಾ
Next Post
ವಯನಾಡ್ ನಲ್ಲಿ ಕಾಂಗ್ರೆಸ್‌ನಿಂದ 100 ಮನೆಗಳ ನಿರ್ಮಾಣ: ರಾಹುಲ್ ಗಾಂಧಿ

Recent News