2023ರಲ್ಲಿ ಹೆಚ್ಚಿದ ರೈತರ ಆತ್ಮಹತ್ಯೆ: ವರದಿ

2023ರಲ್ಲಿ ಹೆಚ್ಚಿದ ರೈತರ ಆತ್ಮಹತ್ಯೆ: ವರದಿ

ನವದೆಹಲಿ, ಜ. 23: ಭಾರತ ಕೃಷಿ ಪ್ರಧಾನ ದೇಶ. ರೈತರು ನಮ್ಮ ದೇಶದ ಬೆನ್ನೆಲುಬು. ದೇಶದ ಜನರು ಕೃಷಿಯನ್ನು ಹೆಚ್ಚು ಅವಲಂಬಿತರಾಗಿದ್ದಾರೆ. ದುರದೃಷ್ಟವಶಾತ್ ನಮ್ಮ ದೇಶದಲ್ಲಿ ರೈತರ ಆತ್ಮಹತ್ಯೆ ಕೂಡ ಹೆಚ್ಚಳವಾಗಿದೆ. ಪ್ರತಿ ವರ್ಷ ರೈತರ ಆತ್ಮಹತ್ಯೆ ಸರಣಿ ಮುಂದುವರಿಯುವುದನ್ನು ನಾವು ನೋಡುತ್ತೇವೆ. ಈ ಸಮಸ್ಯೆಯನ್ನು ತಡೆಗಟ್ಟಲು ಭಾರತ ಸರ್ಕಾರವು ವಿಫಲವಾಗಿದೆ ಎನ್ನುವುದನ್ನು ಇತ್ತೀಚಿನ ಆತ್ಮಹತ್ಯೆ ಕುರಿತ ಅಂಕಿ-ಅಂಶಗಳು ಬಹಿರಂಗಪಡಿಸುತ್ತದೆ.

2023ರಲ್ಲಿ ಮಹಾರಾಷ್ಟ್ರದ ಎಂಟು ಜಿಲ್ಲೆಗಳಲ್ಲಿ 1,088 ರೈತರು ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆ ಎಂದು ಮರಾಠವಾಡ ವಿಭಾಗೀಯ ಆಯುಕ್ತರ ಕಚೇರಿಯ ವರದಿಯು ಬಹಿರಂಗಪಡಿಸಿದೆ. ಇದು 2022ರಲ್ಲಿ ವರದಿಯಾಗಿದ್ದ ರೈತರ ಸಾವಿಗಳಿಗಿಂತ ಹೆಚ್ಚಳವಾಗಿದೆ ಎಂದು ಅಂಕಿ-ಅಂಶಗಳು ತಿಳಿಸಿದೆ. 2023ರಲ್ಲಿ ನಡೆದ 1,088 ಆತ್ಮಹತ್ಯೆಗಳಲ್ಲಿ ಮಹರಾಷ್ಟ್ರದ ಬೀಡ್‌ನಲ್ಲಿ 269 ಸಾವುಗಳು, ಛತ್ರಪತಿ ಸಂಭಾಜಿನಗರದಲ್ಲಿ 182, ನಾಂದೇಡ್‌ನಲ್ಲಿ 175, ಧಾರಶಿವ್‌ನಲ್ಲಿ 171 ಮತ್ತು ಪರ್ಭಾನಿಯಲ್ಲಿ 103 ಸಾವುಗಳು ಸಂಭವಿಸಿದೆ ಎಂದು ಅಂಕಿ-ಅಂಶಗಳು ವರದಿ ಮಾಡಿದೆ.

ಮೃತರ ಕುಟುಂಬಕ್ಕೆ ತಲಾ 1 ಲಕ್ಷ ರೂ. ಪರಿಹಾರ ನೀಡುವುದಾಗಿ ಭರವಸೆ ನೀಡಲಾಗಿದೆ. 1,088 ಪ್ರಕರಣಗಳಲ್ಲಿ 151 ಪ್ರಕರಣಗಳು ಪ್ರಸ್ತುತ ವಿಚಾರಣೆಯಲ್ಲಿವೆ ಎಂದು ಪಿಟಿಐ ಹೇಳಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಪ್ರಕಾರ, 2014ರಲ್ಲಿ ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದೇಶಾದ್ಯಂತ ದಿನಕ್ಕೆ ಸರಾಸರಿ 30ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಸಾರ್ವಜನಿಕ ಹೂಡಿಕೆಗಳ ಕಡಿತ, ಪ್ರಮುಖ ಕೈಗಾರಿಕೆಗಳ ಖಾಸಗೀಕರಣ, ಬಾಹ್ಯ ವ್ಯಾಪಾರ, ರಾಜ್ಯಗಳ ಸಬ್ಸಿಡಿಗಳ ಕಡಿತ ಮತ್ತು ಕೃಷಿ ಸಾಲದ ಕಡಿತ ಇವೆಲ್ಲವೂ ರೈತರ ದೀರ್ಘ ಕಾಲದ ಸಂಕಷ್ಟಕ್ಕೆ ಕಾರಣವಾಗಿದೆ.

ವರದಿಯ ಪ್ರಕಾರ ಛತ್ರಪತಿ ಸಂಭಾಜಿನಗರ, ಜಲ್ನಾ, ಬೀಡ್, ಹಿಂಗೋಲಿ, ಧಾರಶಿವ್, ಲಾತೂರ್, ನಾಂದೇಡ್ ಮತ್ತು ಪರ್ಭಾನಿ ಜಿಲ್ಲೆಗಳನ್ನು ಒಳಗೊಂಡಿರುವ ಮರಾಠವಾಡದಲ್ಲಿ 2022ರಲ್ಲಿ 1,023 ರೈತರ ಆತ್ಮಹತ್ಯೆಗಳು ವರದಿಯಾಗಿತ್ತು. ಈ ವರ್ಷ ಈ ಜಿಲ್ಲೆಗಳಲ್ಲಿ ಆತ್ಮಹತ್ಯೆಗಳ ಅಂಕಿ-ಅಂಶಗಳಲ್ಲಿ ಹೆಚ್ಚಳ ಕಂಡು ಬಂದಿದೆ.

ನಮ್ಮ ದೇಶದಲ್ಲಿ ರೈತರ ಆತ್ಮಹತ್ಯೆ ಏಕೆ ನಡೆಯುತ್ತಿದೆ ಎಂಬುದನ್ನು ನೋಡಿದಾಗ ಸಾಕಷ್ಟು ಕಾರಣಗಳು ನಮ್ಮ ಮುಂದೆ ಕಂಡು ಬರುತ್ತದೆ. ಮಳೆಯ ಕೊರತೆಯಿಂದಾಗಿ ಬೆಳೆಗಳ ನಾಶವಾಗುತ್ತದೆ. ರೈತರು ತಾವು ಹೂಡಿಕೆ ಮಾಡಿದ ಹಣ ವ್ಯರ್ಥವಾಗಿ ಸಾಲದ ಸುಳಿಯಲ್ಲಿ ಸಿಲುಕಿ ನಷ್ಟ ಅನುಭವಿಸುತ್ತಾರೆ. ಪದೇ ಪದೇ ಬರಗಾಲಕ್ಕೆ ತುತ್ತಾಗುವ ಪ್ರದೇಶಗಳಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚು ಎಂಬುವುದು ಗಮನಾರ್ಹ. ಅದೇ ರೀತಿ ಪ್ರವಾಹಗಳು ಕೂಡ ಬರಗಾಲದಷ್ಟೇ ಅಪಾಯಕಾರಿ. ರೈತರ ಬೆಳೆಗಳು ಕೊಚ್ಚಿ ಹೋಗುತ್ತವೆ ಮತ್ತು ಆ ಬೆಳೆಗಳಿಂದ ಅವರಿಗೆ ಯಾವುದೇ ಉತ್ಪನ್ನ ಸಿಗುವುದಿಲ್ಲ. ಬೆಳೆ ಬೆಳೆಯಲು ಭಾರೀ ಸಾಲ ಪಡೆದು ನಷ್ಟವುಂಟಾಗಿ ಅದನ್ನು ತೀರಿಸಲು ಹಣವಿಲ್ಲದೆ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಂಡವಾಳೀಕರಣ ಮತ್ತು ಖಾಸಗೀಕರಣವು ಕೂಡ ಆತ್ಮಹತ್ಯೆಗೆ ಕಾರಣವಾಗಿದ್ದು, ಹೆಚ್ಚಿನ ಸಾಲಗಳು ಮತ್ತು ಕುಟುಂಬದ ಒತ್ತಡವೂ ರೈತರನ್ನು ದುಡುಕಿನ ನಿರ್ಧಾರ ತೆಗೆದುಕೊಳ್ಳಲು ಪ್ರೇರೇಪಿಸುತ್ತದೆ. ಸಾಮೂಹಿಕ ಪ್ರಯತ್ನದಿಂದ ರೈತರ ಆತ್ಮಹತ್ಯೆ ತಡೆಯಬಹುದು. ಸರಕಾರ ರೈತರಿಗೆ ಆಧುನಿಕ ತಂತ್ರಜ್ಞಾನ ಕಲಿಸಬೇಕು. ಇದಲ್ಲದೆ ಅವರಿಗೆ ಸರಿಯಾದ ನೀರಾವರಿ ಸೌಲಭ್ಯಗಳನ್ನು ನೀಡಬೇಕು. ರೈತರ ನಷ್ಟವನ್ನು ಸರಿದೂಗಿಸುವ ನಿಜವಾದ ಬೆಳೆ ವಿಮಾ ಪಾಲಿಸಿಗಳನ್ನು ಜಾರಿಗೆ ತರಬೇಕಿದೆ.

Previous Post
ಪ್ರಶ್ನೆಗಾಗಿ ನಗದು ಪ್ರಕರಣ: ವಕೀಲ ಜೈ ಅನಂತ್ ಗೆ ಸಿಬಿಐನಿಂದ ಸಮನ್ಸ್
Next Post
ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ 545 ಪಿಎಸ್‍ಐ ಹುದ್ದೆಗಳ ನೇಮಕಾತಿಗೆ ನಗರದ 117 ಕೇಂದ್ರಗಳಲ್ಲಿ ಮರುಪರೀಕ್ಷೆ ನಡೆದಿದೆ

Recent News