ನವದೆಹಲಿ, ಆ. 30: ಬಾಲಿವುಡ್ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ ತಮ್ಮ ಮುಂಬರುವ ಇಂದಿರಾ ಗಾಂಧಿಯವ ಸರ್ಕಾರದ ಆಡಳಿತವನ್ನು ಕುರಿತ ಚಿತ್ರ ಎಮರ್ಜೆನ್ಸಿ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ. ಈ ವೇಳೆ ಅವರು ನೀಡಿದ ಸಂದರ್ಶನಗಳ ತುಣುಕುಗಳು ಟ್ರೋಲ್ ಆಗುತ್ತಿವೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ಅವರು ಭಾರತದ ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರನ್ನು ರಾಮ್ ಕೋವಿಡ್ ಎಂದು ಕರೆದಿದ್ದಾರೆ. ದಲಿತ ರಾಷ್ಟ್ರಪತಿ ಎನ್ನುವ ಬದಲಾಗಿ ಗಲಿತ್ ರಾಷ್ಟ್ರಪತಿ ಎಂದು ಹೇಳಿ ನಂತರ ತಿದ್ದಿಕೊಂಡಿದ್ದಾರೆ. ಅಲ್ಲದೆ, ರಾಮನಾಥ್ ಕೋವಿಂದ್ (ರಾಮ್ ಕೋವಿಡ್) ಭಾರತದ ಮೊದಲ ದಲಿತ ರಾಷ್ಟ್ರಪತಿ ಎಂದು ತಪ್ಪು ಮಾಹಿತಿಯನ್ನೂ ಹೇಳಿದ್ದಾರೆ.
ಈ ಬಗ್ಗೆ ಆನ್ಲೈನ್ನಲ್ಲಿ ಮೆಮ್ಸ್ ಫೆಸ್ಟ್ ಶುರುವಾಗಿದೆ. ಅಷ್ಟೇ ಅಲ್ಲ, ಕಂಗನಾ ರಣಾವತ್ ಅವರು ರಾಮನಾಥ್ ಕೋವಿಂದ್ ಭಾರತದ ಮೊದಲ ದಲಿತ ರಾಷ್ಟ್ರಪತಿ ಎಂದೂ ಹೇಳಿದ್ದಾರೆ. ಅದನ್ನು ಸರಿಪಡಿಸಿದ ಆ್ಯಂಕರ್ ಭಾರತದ ಮೊದಲ ದಲಿತ ರಾಷ್ಟ್ರಪತಿ ಕೆಆರ್ ನಾರಾಯಣನ್ ಎಂದು ಆಕೆಯನ್ನು ತಿದ್ದಿದಾಗ, “ನನ್ನ ತಪ್ಪು ಮಾಹಿತಿಗಾಗಿ ಕ್ಷಮಿಸಿ” ಎಂದು ತಕ್ಷಣವೇ ಒಪ್ಪಿಕೊಡಿದ್ದಾರೆ.
ಈ 11 ಸೆಕೆಂಡುಗಳ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇಂಟರ್ನೆಟ್ ಮೆಮೆ ಮೇನಿಯಾದಲ್ಲಿ ಸ್ಫೋಟಗೊಂಡಿದೆ. ಕಂಗನಾ ಕುರಿತು ಇನ್ಸ್ಟಾಗ್ರಾಂ, ಎಕ್ಸ್ನಲ್ಲಿ ಮೇಮ್ಗಳು ಮತ್ತು ಜೋಕ್ಗಳ ಮಳೆ ಸುರಿಯುತ್ತಿದೆ. ನಿನ್ನೆಯಿಂದ ಕಂಗನಾ ರಣಾವತ್ ಮೈಕ್ರೋ-ಬ್ಲಾಗಿಂಗ್ ಪ್ಲಾಟ್ಫಾರ್ಮ್ನಲ್ಲಿ ಟ್ರೆಂಡಿಂಗ್ ಆಗಿದ್ದಾರೆ.
“ಇಂತಹ ಅದ್ಭುತ ಸಂಸದರನ್ನು ಕಳುಹಿಸಿದ್ದಕ್ಕಾಗಿ ನಾವು ಹಿಮಾಚಲಕ್ಕೆ ಧನ್ಯವಾದ ಹೇಳಬೇಕು. ಇಲ್ಲದಿದ್ದರೆ ಅಂತಹ ಅಮೂಲ್ಯ ರತ್ನದ ಬಗ್ಗೆ ನಮಗೆ ತಿಳಿಯುತ್ತಿರಲಿಲ್ಲ” ಎಂದು ಎಕ್ಸ್ ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ. ರಾಮ್ ಕೋವಿಡ್ ಎಂದಿರುವುದು “ಕೊವಿಡ್ ಲಸಿಕೆ ಅಡ್ಡ ಪರಿಣಾಮ” ಎಂದು ಕೆಲವರು ಟೀಕಿಸಿದ್ದಾರೆ.