3 ದಿನಕ್ಕೆ 25 ಕೋಟಿ ರೂ. ಗಳಿಸಿದ ‘ಆರ್ಟಿಕಲ್ 370’ ಸಿನಿಮಾ

3 ದಿನಕ್ಕೆ 25 ಕೋಟಿ ರೂ. ಗಳಿಸಿದ ‘ಆರ್ಟಿಕಲ್ 370’ ಸಿನಿಮಾ

ಮುಂಬೈ, ಫೆ. 26: ‘ಆರ್ಟಿಕಲ್ 370’ ಸಿನಿಮಾದ ಕಲೆಕ್ಷನ್ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ‘ನಮ್ಮ ಚಿಕ್ಕ ಸಿನಿಮಾಗೆ ದೊಡ್ಡ ಬೆಂಬಲ ನೀಡಿದ್ದಕ್ಕಾಗಿ ಧನ್ಯವಾದಗಳು. ನಾವು ಚಿರಋಣಿ ಆಗಿರುತ್ತೇವೆ’ ಎಂದು ಈ ಚಿತ್ರದ ನಟಿ ಯಾಮಿ ಗೌತಮ್ ಅವರು ಪೋಸ್ಟ್ ಮಾಡಿದ್ದಾರೆ. ಮೂರು ದಿನಕ್ಕೆ 25 ಕೋಟಿ ರೂಪಾಯಿ ದಾಟಿರುವುದು ಅವರಿಗೆ ಖುಷಿ ನೀಡಿದೆ. ಪ್ರಿಯಾಮಣಿ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ.

ದೇಶಭಕ್ತಿ ಸಿನಿಮಾಗಳನ್ನು ಪ್ರೇಕ್ಷಕರು ಮೆಚ್ಚಿಕೊಳ್ಳುತ್ತಾರೆ. ಇತ್ತೀಚೆಗೆ ಬಿಡುಗಡೆ ಆದ ‘ಆರ್ಟಿಕಲ್ 370’ ಸಿನಿಮಾಗೆ ಕೂಡ ಪ್ರೇಕ್ಷಕರಿಂದ ಮತ್ತು ವಿಮರ್ಶಕರಿಗೆ ಪ್ರಶಂಸೆ ವ್ಯಕ್ತವಾಗಿದೆ. ಈ ಸಿನಿಮಾದಲ್ಲಿ ನಟಿ ಯಾಮಿ ಗೌತಮ್ ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ಖ್ಯಾತಿ ನಟಿ ಪ್ರಿಯಾಮಣಿ ಅವರಿಗೂ ಈ ಸಿನಿಮಾದಲ್ಲಿ ಒಂದು ಮುಖ್ಯ ಪಾತ್ರವಿದೆ. ಕಾಶ್ಮೀರದಲ್ಲಿದ್ದ ಆರ್ಟಿಕಲ್ 370 ಅನ್ನು ಕೇಂದ್ರ ಸರ್ಕಾರ ರದ್ದು ಮಾಡಿದ ಘಟನೆಗಳನ್ನು ಆಧರಿಸಿ ಈ ಸಿನಿಮಾ ಮೂಡಿಬಂದಿದೆ. ಬಾಕ್ಸ್ ಆಫೀಸ್ನಲ್ಲಿ ‘ಆರ್ಟಿಕಲ್ 370’ ಸಿನಿಮಾಗೆ ಉತ್ತಮ ಕಲೆಕ್ಷನ್ ಆಗುತ್ತಿದೆ. ಅದಕ್ಕಾಗಿ ನಟಿ ಯಾಮಿ ಗೌತಮೀ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಫೆಬ್ರವರಿ 23ರಂದು ‘ಆರ್ಟಿಕಲ್ 370’ ಸಿನಿಮಾ ಬಿಡುಗಡೆ ಆಯಿತು. ಮೊದಲ ದಿನ ಈ ಚಿತ್ರಕ್ಕೆ 6.12 ಕೋಟಿ ರೂಪಾಯಿ ಕಲೆಕ್ಷನ್ ಆಯಿತು. ನಂತರ ಏನಾಗಬಹುದು ಎಂಬ ಚಿಂತೆ ಚಿತ್ರತಂಡದವರನ್ನು ಕಾಡಿತ್ತು. ಶನಿವಾರ ಮತ್ತು ಭಾನುವಾರ ಈ ಸಿನಿಮಾಗೆ ಉತ್ತಮವಾಗಿ ಕಲೆಕ್ಷನ್ ಆಗಿದೆ. ದಿನದಿಂದ ದಿನಕ್ಕೆ ಗಳಿಕೆಯಲ್ಲಿ ಏರಿಕೆ ಆಗಿರುವುದು ಚಿತ್ರತಂಡದವರಲ್ಲಿ ಆಶಾಭಾವ ಮೂಡಿಸಿದೆ. ಆದಿತ್ಯ ಸುಹಾಸ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ.

ಎರಡನೇ ದಿನವಾದ ಫೆಬ್ರವರಿ 24ರಂದು ‘ಆರ್ಟಿಕಲ್ 370’ ಸಿನಿಮಾಗೆ 9.08 ಕೋಟಿ ರೂಪಾಯಿ ಕಲೆಕ್ಷನ್ ಆಯಿತು. ಮೂರನೇ ದಿನ (ಫೆ.25) ಭಾನುವಾರ ಆದ್ದರಿಂದ ಗಳಿಕೆಯಲ್ಲಿ ಏರಿಕೆ ಕಂಡಿತು. ಫೆ.25ರಂದು ಈ ಸಿನಿಮಾ ಬರೋಬ್ಬರಿ 10.25 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಸೋಮವಾರ ಕೂಡ ಹಲವು ಕಡೆಗಳಲ್ಲಿ ಉತ್ತಮ ಪ್ರದರ್ಶನ ಕಂಡಿದೆ. ಅಂತಿಮವಾಗಿ ಈ ಚಿತ್ರಕ್ಕೆ ಎಷ್ಟು ಕಲೆಕ್ಷನ್ ಆಗಲಿದೆ ಎಂಬುದನ್ನು ಕಾದು ನೋಡಬೇಕು. ಈ ಸಿನಿಮಾದಲ್ಲಿ ನರೇಂದ್ರ ಮೋದಿ ಅವರ ಪಾತ್ರಕ್ಕೆ ಹಿರಿಯ ನಟ ಅರುಣ್ ಗೋವಿಲ್ ಅವರು ಬಣ್ಣ ಹಚ್ಚಿದ್ದಾರೆ. ಅವರ ಲುಕ್ ಗಮನ ಸೆಳೆದಿದೆ. ಚಿತ್ರಕ್ಕೆ ಉತ್ತಮ ಕಲೆಕ್ಷನ್ ಆಗಿದ್ದರ ಬಗ್ಗೆ ನಟಿ ಯಾಮಿ ಗೌತಮ್ ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಮೂರು ದಿನಕ್ಕೆ ವಿದೇಶದ ಗಳಿಕೆಯನ್ನೂ ಸೇರಿಸಿದರೆ 34.71 ಕೋಟಿ ರೂಪಾಯಿ ಆಗಲಿದೆ ಎಂದು ಅವರು ತಿಳಿಸಿದ್ದಾರೆ.

‘ನಾವು ಆರ್ಟಿಕಲ್ 370 ಸಿನಿಮಾದ ಶೂಟಿಂಗ್ ಮಾಡುವಾಗ ಪ್ರೇಕ್ಷಕರಿಗೆ ಈ ಚಿತ್ರ ಹಿಡಿಸುವುದಿಲ್ಲ ಎಂದು ಹಲವರು ಹೇಳಿದ್ದರು. ಟೆಕ್ನಿಕಲ್ ವಿಚಾರಗಳು ಹಾಗೂ ರಾಜಕೀಯದ ಭಾಷೆ ತುಂಬ ಇದೆ ಎಂದು ಹೇಳಿದ್ದರು. ಆದರೆ ನಾವು ಧೈರ್ಯದಿಂದ ಕೆಲಸ ಮುಂದುವರಿಸಿದ್ದೆವು. ಯಾಕೆಂದರೆ, ಇವರೆಲ್ಲ ನಮ್ಮ ಪ್ರೇಕ್ಷಕರ ಸಾಮರ್ಥ್ಯವನ್ನು ಕಡೆಗಣಿಸುತ್ತಿದ್ದಾರೆ ಎಂಬುದು ನಮಗೆ ಗೊತ್ತಿತ್ತು. ಆಡಿಕೊಳ್ಳುವವರನ್ನು ತಪ್ಪು ಎಂದು ಸಾಬೀತು ಮಾಡಿದ ಪ್ರೇಕ್ಷಕರಿಗೆ ಧನ್ಯವಾದಗಳು’ ಎಂದು ಯಾಮಿ ಗೌತಮ್ ಪೋಸ್ಟ್ ಮಾಡಿದ್ದಾರೆ.

Previous Post
ಹೊಸ ಸರ್ಕಾರದ ಕೆಲಸಕ್ಕೆ ತಯಾರಿ ಆರಂಭಿಸಿದ ಮೋದಿ
Next Post
ಅಗ್ನಿಪಥ್ ಯೋಜನೆಯಿಂದ ದೇಶದ ಯುವಕರಿಗೆ ತೀವ್ರ ಅನ್ಯಾಯ: ಖರ್ಗೆ ಪತ್ರ

Recent News