30 ಸಾವಿರ ಬಿದಿರು ಸಸಿ ನೆಡುವ ಅಭಿಯಾನಕ್ಕೆ ಈಶ್ವರ ಖಂಡ್ರೆ ಚಾಲನೆ

30 ಸಾವಿರ ಬಿದಿರು ಸಸಿ ನೆಡುವ ಅಭಿಯಾನಕ್ಕೆ ಈಶ್ವರ ಖಂಡ್ರೆ ಚಾಲನೆ

ಬೆಂಗಳೂರು, ಆ.6: ನಗರ ಪ್ರದೇಶದಲ್ಲಿ ವಾಹನಗಳಿಂದ ಹೊರಹೊಮ್ಮುವ ಇಂಗಾಲದಿಂದ ಆಗುವ ದುಷ್ಪರಿಣಾಮ ತಗ್ಗಿಸುವಲ್ಲಿ ಬಿದಿರು ಮಹತ್ವದ ಪಾತ್ರ ವಹಿಸುತ್ತದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ. ವಿಕಾಸಸೌಧದ ತಮ್ಮ ಕಚೇರಿಯಲ್ಲಿ ದಿ ಗ್ರೀನ್ ಸ್ಕೂಲ್ ಬೆಂಗಳೂರು, ಭಾರತೀಯ ಬಿದಿರು ಸಂಸ್ಥೆ ಮತ್ತು ಕರ್ನಾಟಕ ಅರಣ್ಯ ಇಲಾಖೆಯ ಸಹಯೋಗದಲ್ಲಿ ಬೆಂಗಳೂರಿನಲ್ಲಿ 30 ಸಾವಿರ ಬಿದಿರು ಸಸಿ ನೆಡುವ  Bamboo4Bangaluru ಅಭಿಯಾನಕ್ಕೆ ಚಾಲನೆ ನೀಡಿ, ಅಂತರ್ಜಾಲ ತಾಣ ಮತ್ತು ಲಾಂಛನ ಬಿಡುಗಡೆ ಮಾಡಿ ಮಾತನಾಡಿದ ಅವರು, ಹೆಚ್ಚಿನ ಪ್ರಮಾಣದಲ್ಲಿ ಇಂಗಾಲ ಹೀರಿ, ಆಮ್ಲಜನಕವನ್ನು ನೀಡುವ ಬಿದಿರು ನಗರಕ್ಕೂ ಅತ್ಯಾವಶ್ಯಕ ಎಂದರು. ಬಿದಿರು ಹಿಂದಿನಿಂದಲೂ ಮನುಷ್ಯನ ಬದುಕಿನ ಒಂದು ಭಾಗವಾಗಿದೆ. ಬಿದಿರು ಬಹು ಉಪಯೋಗಿ. ಹಿಂದೆಲ್ಲಾ ಮಗು ಹುಟ್ಟಿದಾಗ ಮನೆಯಲ್ಲಿ ಮಕ್ಕಳನ್ನು ಮೊದಲಿಗೆ ಬಿದಿರಿನ ಮೊರದಲ್ಲಿ ಮಲಗಿಸುತ್ತಿದ್ದರು. ನಂತರ ಮಗುವನ್ನು ಬಿದಿರಿನ ತೊಟ್ಟಿಲಲ್ಲಿ ಹಾಕಿ ತೂಗುತ್ತಿದ್ದರು. ಮನೆಗಳಲ್ಲಿ ಮಹಿಳೆಯರು ರಾಗಿ, ಜೋಳ, ಅಕ್ಕಿ ಕೇರಲು ಮೊರ ಬಳಸುತ್ತಾರೆ. ಅಟ್ಟ ಹತ್ತಲು ಬಿದಿರಿನ ಏಣಿ ಸಹಕಾರಿ, ಗೌರಿ ಹಬ್ಬದ ಸಂದರ್ಭದಲ್ಲಿ ಮೊರದ ಬಾಗಿನ ನೀಡುತ್ತಾರೆ. ಕೆರೆ, ಕಟ್ಟೆ, ಜಲಾಶಯ ತುಂಬಿದಾಗ ಮೊರದ ಬಾಗಿನ ಅರ್ಪಿಸುತ್ತಾರೆ ಎಂದರು. ಬಿದಿರು ಅರಣ್ಯದ ಒಂದು ಅಪೂರ್ವ ಸಂಪತ್ತು ಎಂದರೆ ತಪ್ಪಾಗಲಾರದು. ಹುಲ್ಲಿನ ಜಾತಿಗೆ ಸೇರಿದ ಬಿದಿರು, ಆನೆಗಳಿಗೆ ಪ್ರಿಯವಾದ ಆಹಾರವೂ ಆಗಿದೆ ಎಂದ ಅವರು, ಹೀಗೆ ನೆಡಲಾಗುವ ಬಿದಿರು ಸಸಿಗಳನ್ನು ನೀರೆರೆದು ಪೋಷಿಸಬೇಕು. ಬೆಂಗಳೂರಿನ ಶಾಲೆಯ ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿರುವುದು ಸಂತಸದ ಸಂಗತಿ ಎಂದು ಈಶ್ವರ ಖಂಡ್ರೆ ತಿಳಿಸಿದರು.

ಬಿದಿರಿನ ಬಗ್ಗೆ ಮಾಹಿತಿ ನೀಡುವ ಮತ್ತು ಬಿದಿರು ಸಸಿ ನೆಟ್ಟ ಬಳಿಕ ಅದನ್ನು ಆನ್ ಲೈನ್ ನಲ್ಲಿ ದಾಖಲಿಸಲು ಅನುವಾಗುವಂತೆ ರೂಪಿಸಿರುವ ಅಂತರ್ಜಾಲ ತಾಣ  ಇಂದಿನ ಯುಗಮಾನದ ಅಗತ್ಯವೂ ಆಗಿದೆ ಎಂದರು.  ಕಾರ್ಯಕ್ರಮದಲ್ಲಿ ಭಾರತೀಯ ಬಿದಿರು ಸಂಸ್ಥೆಯ ಮುಖ್ಯಸ್ಥ ಪುನಾತಿ ಶ್ರೀಧರ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬ್ರಿಜೇಶ್ ಕುಮಾರ್ ದೀಕ್ಷಿತ್, ದಿ ಗ್ರೀನ್ ಸ್ಕೂಲ್ ಬೆಂಗಳೂರು ನಿರ್ದೇಶಕಿ ಉಷಾ ಅಯ್ಯರ್, ಸ್ಕೀಮ್ ಇಂಡಿಯಾ ಸಂಸ್ಥೆ ನಿರ್ದೇಶಕ ನಿಖಿಲ್ ಗೌಡ ಕೆದಂಬಾಡಿ ಮತ್ತಿತರರು ಪಾಲ್ಗೊಂಡಿದ್ದರು.

Previous Post
ಸ್ಥಾಪಿತ ಸರ್ಕಾರವನ್ನು ಉರುಳಿಸುವ ಹಿಂದೆ ವಿದೇಶಿ ಕೈವಾಡ ಇದಿಯೇ? ಸರ್ವಪಕ್ಷ ಸಭೆಯಲ್ಲಿ ರಾಹುಲ್ ಗಾಂಧಿ ಪ್ರಶ್ನೆ
Next Post
ಬಾಂಗ್ಲಾ ಬಿಕ್ಕಟ್ಟು: ಸರ್ವಪಕ್ಷ ಸಭೆ ನಡೆಸಿದ ಕೇಂದ್ರ ಸರ್ಕಾರ

Recent News