6600 ಕೋಟಿ ಮೌಲ್ಯದ ಬಿಟ್‌ಕಾಯಿನ್ ಹಗರಣ ನಟಿ ಶಿಲ್ಪಾ ಶೆಟ್ಟಿ, ಪತಿ ರಾಜ್ ಕುಂದ್ರಾ 98 ಕೋಟಿ ಆಸ್ತಿ ಜಫ್ತಿ
ನವದೆಹಲಿ : 6600 ಕೋಟಿ ಮೌಲ್ಯದ ಬಿಟ್‌ಕಾಯಿನ್ ಪೊಂಜಿ ಹಗರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ ನಟ-ಉದ್ಯಮಿ ರಾಜ್ ಕುಂದ್ರಾ ಅವರ 98 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಗುರುವಾರ ಜಪ್ತಿ ಮಾಡಿದೆ.
ಇಡಿ ನೀಡಿರುವ ಮಾಹಿತಿ ಪ್ರಕಾರ, ಮುಂಬೈನ ಜುಹುದಲ್ಲಿ ಫ್ಲಾಟ್ ಮತ್ತು ಪುಣೆಯಲ್ಲಿರುವ ಬಂಗಲೆಯನ್ನು ಜಫ್ತಿ ಮಾಡಿದೆ. ಈ ಬಂಗಲೆಗಳು ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ಅವರ ಹೆಸರಿನಲ್ಲಿದೆ. ಇದಲ್ಲದೆ, ವಶಪಡಿಸಿಕೊಂಡ ಆಸ್ತಿಗಳಲ್ಲಿ ಈಕ್ವಿಟಿ ಷೇರುಗಳು ಸೇರಿವೆ. ಸುಮಾರು 97.79 ಕೋಟಿ ಮೌಲ್ಯದ ಈ ಆಸ್ತಿಗಳನ್ನು ವಶಪಡಿಸಿಕೊಳ್ಳಲು ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ)ಯ ನಿಬಂಧನೆಗಳ ಅಡಿಯಲ್ಲಿ ತಾತ್ಕಾಲಿಕ ಅಟ್ಯಾಚ್‌ಮೆಂಟ್ ಆದೇಶವನ್ನು ಹೊರಡಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ.
ವನ್ ವೇರಿಯಬಲ್ ಟೆಕ್ ಪ್ರೈವೇಟ್ ಲಿಮಿಟೆಡ್ ಮತ್ತು ಆರೋಪಿಗಳಾದ ದಿವಂಗತ ಅಮಿತ್ ಭಾರದ್ವಾಜ್, ಅಜಯ್ ಭಾರದ್ವಾಜ್, ವಿವೇಕ್ ಭಾರದ್ವಾಜ್, ಸಿಂಪಿ ಭಾರದ್ವಾಜ್, ಮಹೇಂದ್ರ ಭಾರದ್ವಾಜ್ ಮತ್ತು ಇತರರ ವಿರುದ್ಧ ಮಹಾರಾಷ್ಟ್ರ ಪೊಲೀಸರು ಮತ್ತು ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ ಬಳಿಕ ಇಡಿ ತನಿಖೆಯನ್ನು ಪ್ರಾರಂಭಿಸಿದೆ.
ಆರೋಪಿಗಳು ತಿಂಗಳಿಗೆ 10 ಪ್ರತಿಶತದಷ್ಟು ಆದಾಯವನ್ನು ನೀಡುವ ಸುಳ್ಳು ಭರವಸೆಯೊಂದಿಗೆ ಬಿಟ್‌ಕಾಯಿನ್ ರೂಪದಲ್ಲಿ ಜನರಿಂದ ಭಾರಿ ಮೊತ್ತದ ಹಣವನ್ನು ಸುಲಿಗೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಉದ್ಯಮಿಗಳು ಹೂಡಿಕೆದಾರರನ್ನು ವಂಚಿಸಿದ್ದಾರೆ ಮತ್ತು ಅಕ್ರಮವಾಗಿ ಸಂಪಾದಿಸಿದ ಬಿಟ್‌ಕಾಯಿನ್‌ಗಳನ್ನು ಅಸ್ಪಷ್ಟ ಆನ್‌ಲೈನ್ ವ್ಯಾಲೆಟ್‌ಗಳಲ್ಲಿ ವರ್ಗಾಯಿಸಿದ್ದಾರೆ ಎಂದು ಇಡಿ ಆರೋಪಿಸಿದೆ.