7 ಮತಗಟ್ಟೆಗಳಲ್ಲಿ ಇವಿಎಂ ಧ್ವಂಸ ಮಾಡಿದ ಶಾಸಕ
ಅಮರಾವತಿ, ಮೇ 22: ಆಂಧ್ರಪ್ರದೇಶದ ಆಡಳಿತಾರೂಢ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಶಾಸಕರೊಬ್ಬರು ಮತಗಟ್ಟೆಯಲ್ಲಿ ವಿವಿಪ್ಯಾಟ್ ಯಂತ್ರವನ್ನು ನೆಲಕ್ಕೆ ಎಸೆದು ಒಡೆದು ಹಾಕಿರುವ ಘಟನೆಯ ವಿಡಿಯೋ ವೈರಲ್ ಆಗಿದೆ. ಇದೇ ರೀತಿ 7 ಮತಗಟ್ಟೆಗಳಲ್ಲಿ ಶಾಸಕ ಇವಿಎಂ ಯಂತ್ರವನ್ನು ಧ್ವಂಸ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಏಳು ಮತಗಟ್ಟೆಗಳಲ್ಲಿ ಮಾಚರ್ಲಾ ಕ್ಷೇತ್ರದ ಹಾಲಿ ಶಾಸಕ, ವೈಎಸ್‌ಆರ್‌ಸಿಪಿ ಮುಖಂಡ ಪಿನ್ನೆಲ್ಲಿ ರಾಮಕೃಷ್ಣ ರೆಡ್ಡಿ ಇವಿಎಂಗಳನ್ನು ಧ್ವಂಸ ಮಾಡಿದ್ದು, ಶಾಸಕರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ಸೂಚಿಸಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಇವಿಎಂ ಧ್ವಂಸ ಪ್ರಕರಣದಲ್ಲಿ ಶಾಸಕರನ್ನು ಆರೋಪಿ ಎಂದು ಹೆಸರಿಸಲಾಗಿದ್ದು, ಸೋಲಿನ ಭೀತಿಯಿಂದ ಶಾಸಕರು ಮತ್ತು ವೈಎಸ್‌ಆರ್‌ಸಿಪಿ ಇಂತಹ ವಿಧ್ವಂಸಕ ಕೃತ್ಯದಲ್ಲಿ ತೊಡಗಿದ್ದಾರೆ ಎಂದು ಪ್ರತಿಪಕ್ಷ ತೆಲುಗು ದೇಶಂ ಪಕ್ಷ ಹೇಳಿಕೊಂಡಿದೆ.
ಮೇ 13ರಂದು ಆಂಧ್ರಪ್ರದೇಶದ ಎಲ್ಲಾ 25 ಲೋಕಸಭಾ ಕ್ಷೇತ್ರಗಳು ಮತ್ತು ಎಲ್ಲಾ 175 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆದಾಗ ಈ ಘಟನೆ ನಡೆದಿದೆ. ಹಲವೆಡೆ ಚುನಾವಣೆಯ ದಿನ ಹಿಂಸಾಚಾರ ನಡೆದಿದ್ದು, ಆ ನಂತರವೂ ಅಲ್ಲಲ್ಲಿ ಹಲವೆಡೆ ಅಹಿತಕರ ಘಟನೆ ನಡೆದಿದೆ.
ವೈರಲ್ ವಿಡಿಯೋದಲ್ಲಿ ಏನದೆ?
ಶಾಸಕ ರಾಮಕೃಷ್ಣ ರೆಡ್ಡಿ ಪಾಲ್ವಾಯಿ ಗೇಟ್ ಮತಗಟ್ಟೆ ಕೇಂದ್ರಕ್ಕೆ ಹೋಗಿದ್ದು, ಅಲ್ಲಿ ಚುನಾವಣಾ ಅಧಿಕಾರಿಯೊಬ್ಬರು ಅವರನ್ನು ಸ್ವಾಗತಿಸಲು ಎದ್ದು ನಿಂತಿದ್ದಾರೆ. ಎಂಎಲ್ಎ ಒಂದು ಮಾತನ್ನೂ ಹೇಳದೆ, ಇವಿಎಂ ಇರಿಸಿರುವ ಸ್ಥಳಕ್ಕೆ ತೆರಳಿದ್ದಾರೆ. ಅಲ್ಲಿದ್ದ ವಿವಿಪ್ಯಾಟ್ ಯಂತ್ರವನ್ನು ಎತ್ತಿಕೊಂಡು ನೆಲಕ್ಕೆ ಎಸೆದಿದ್ದಾರೆ. ಈ ವೇಳೆ ಮತಗಟ್ಟೆಯಲ್ಲಿದ್ದ ಓರ್ವರು ಶಾಸಕರ ಸಹಾಯಕರಿಗೆ ಹಲ್ಲೆ ನಡೆಸಿದ್ದಾರೆ, ಶಾಸಕರ ಮೇಲೂ ಹಲ್ಲೆಗೆ ಮುಂದಾಗುತ್ತಾರೆ, ಈ ವೇಳೆ ಶಾಸಕರು ಆತನಿಗೆ ಕೈಯ್ಯಲ್ಲೇ ಬೆದರಿಕೆ ಹಾಕಿ ಮತಗಟ್ಟೆಯಿಂದ ನಿರ್ಗಮಿಸುತ್ತಾರೆ. ನಂತರ ಚುನಾವಣಾ ಅಧಿಕಾರಿಯೊಬ್ಬರು ನೆಲದ ಮೇಲೆ ಬಿದ್ದಿರುವ ವಿವಿಪ್ಯಾಟ್‌ನ್ನು ರೆಕಾರ್ಡ್ ಮಾಡಿದ್ದಾರೆ.
ಮಾಚರ್ಲ ಪಲ್ನಾಡು ಜಿಲ್ಲೆಯ ವ್ಯಾಪ್ತಿಗೆ ಬರುತ್ತದೆ, ಈ ಕ್ಷೇತ್ರದಲ್ಲಿ ಮತದಾನದ ದಿನ ಮತ್ತು ನಂತರ ಹೆಚ್ಚಾಗಿ ಹಿಂಸಾಚಾರ ನಡೆದಿತ್ತು. ಘಟನೆ ಬಗ್ಗೆ ಟಿಡಿಪಿ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರ ಪುತ್ರ ನಾರಾ ಲೋಕೇಶ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ವೈಎಸ್‌ಆರ್‌ಸಿಪಿ ಶಾಸಕ ಪಿನ್ನೆಲ್ಲಿ ರಾಮಕೃಷ್ಣ ರೆಡ್ಡಿ ಮಾಚರ್ಲಾ ಕ್ಷೇತ್ರದ ಪಾಲ್ವಾಯಿ ಗೇಟ್ ಮತದಾನ ಕೇಂದ್ರದಲ್ಲಿ ಇವಿಎಂನ್ನು ಧ್ವಂಸಗೊಳಿಸಿದ್ದಾರೆ. ಚುನಾವಣಾ ಆಯೋಗವು ರಾಮಕೃಷ್ಣ ರೆಡ್ಡಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ನಾನು ಒತ್ತಾಯಿಸುತ್ತೇನೆ. ಸೋಲಿನ ಭಯದಿಂದ ಇವಿಎಂಗಳನ್ನು ರೆಡ್ಡಿ ಧ್ವಂಸಗೊಳಿಸಿದ್ದಾರೆ. ಜೂನ್ 4ರಂದು ಜನರು ವೈಎಸ್‌ಆರ್‌ಸಿಪಿಯ ಬಣ ರಾಜಕೀಯದ ಬಗ್ಗೆ ನಿಜವಾದ ತೀರ್ಪು ನೀಡಲಿದ್ದಾರೆ ಎಂದು ಹೇಳಿದ್ದಾರೆ. ಮಾಚರ್ಲಾ ಅಸೆಂಬ್ಲಿ ಕ್ಷೇತ್ರದಲ್ಲಿ ಪಿಎಸ್ ಸಂಖ್ಯೆ 202ರ ಜೊತೆಗೆ 7 ಮತಗಟ್ಟೆ ಕೇಂದ್ರಗಳಲ್ಲಿ ರೆಡ್ಡಿ ಇವಿಎಂಗಳನ್ನು ಧ್ವಂಸ ಮಾಡುತ್ತಿರುವುದು ಕ್ಯಾಮರಾದಲ್ಲಿ ದಾಖಲಾಗಿದೆ ಎಂದು ಚುನಾವಣಾ ಆಯೋಗ(ಇಸಿ) ಹೇಳಿಕೆಯಲ್ಲಿ ತಿಳಿಸಿದೆ.
ಘಟನೆಗೆ ಸಂಬಂಧಿಸಿ ತನಿಖೆಗೆ ಪಲ್ನಾಡು ಜಿಲ್ಲಾ ಚುನಾವಣಾಧಿಕಾರಿಗಳು ಎಲ್ಲಾ ಮತಗಟ್ಟೆಗಳ ವಿಡಿಯೋ ದೃಶ್ಯಾವಳಿಗಳನ್ನು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಕೇಂದ್ರ ಚುನಾವಣಾ ಆಯೋಗವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಆಂಧ್ರಪ್ರದೇಶದ ಮುಖ್ಯ ಚುನಾವಣಾಧಿಕಾರಿ ಮುಖೇಶ್ ಕುಮಾರ್ ಅವರಿಗೆ ಕ್ರಮ ತೆಗೆದುಕೊಳ್ಳಲು ನಿರ್ದೇಶನ ನೀಡಲಾಗಿದೆ. ಪೊಲೀಸರು ಶಾಸಕರನ್ನು ಆರೋಪಿ ಎಂದು ಹೆಸರಿಸಿದ್ದು, ಭವಿಷ್ಯದಲ್ಲಿ ಯಾರೂ ಇಂತಹ ದುಷ್ಕೃತ್ಯಗಳನ್ನು ಎಸಗಲು ಧೈರ್ಯ ಮಾಡಬಾರದು ಎಂದು ಚುನಾವಣಾ ಆಯೋಗ ಹೇಳಿದೆ.