7-8 ಬಾರಿ ಕಪಾಳಮೋಕ್ಷ, ಎದೆ, ಹೊಟ್ಟೆಗೆ ಒದ್ದಿದ್ದಾನೆ: ಸ್ವಾತಿ ಮಲಿವಾಲ್
ನವದೆಹಲಿ, ಮೇ 17: ಆತ 7-8 ಬಾರಿ ಕಪಾಳಮೋಕ್ಷ ಮಾಡಿದ್ದಾನೆ, ನನ್ನನ್ನು ಎಳೆದೊಯ್ದು ಎದೆಗೆ ಒದೆದಿದ್ದಾನೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆಪ್ತ ಬಿಭವ್ ಕುಮಾರ್ ವಿರುದ್ಧ ಎಎಪಿ ನಾಯಕಿ ಸ್ವಾತಿ ಮಲಿವಾಲ್ ಗಂಭೀರ ಆರೋಪ ಮಾಡಿದ್ದಾರೆ. ಸೋಮವಾರ ಬೆಳಗ್ಗೆ ಕೇಜ್ರಿವಾಲ್ ಅವರ ಅಧಿಕೃತ ನಿವಾಸದ ಡ್ರಾಯಿಂಗ್ ರೂಮ್‌ನಲ್ಲಿ ಬಿಭವ್ ಕುಮಾರ್ ತನ್ನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಸ್ವಾತಿ ಮಲಿವಾಲ್ ತಮ್ಮ ದೂರಿನಲ್ಲಿ ಹೇಳಿದ್ದು ಆ ಸಮಯದಲ್ಲಿ ಮುಖ್ಯಮಂತ್ರಿ ಮನೆಯಲ್ಲಿದ್ದರು ಎಂದಿದ್ದಾರೆ.
ಸ್ವಾತಿ ಮಲಿವಾಲ್ ಅವರು ದೆಹಲಿಯ ಸಿವಿಲ್ ಲೈನ್ಸ್, ಫ್ಲಾಗ್ ಸ್ಟಾಫ್ ರಸ್ತೆ, 6 ನಲ್ಲಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸಕ್ಕೆ ಭೇಟಿ ನೀಡಿದ್ದರು. ಅವರು ಕುಮಾರ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದು ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಎಂದಿನಂತೆ ನಿವಾಸಕ್ಕೆ ಪ್ರವೇಶಿಸಿ, ಸಿಬ್ಬಂದಿಗೆ ತನ್ನ ಉಪಸ್ಥಿತಿಯನ್ನು ತಿಳಿಸಿ ಡ್ರಾಯಿಂಗ್ ರೂಮಿನಲ್ಲಿ ಕಾಯುತ್ತಾ ಕುಳಿತೆ. ಹೀಗೆ ಕಾಯುತ್ತಿರುವಾಗ ಕುಮಾರ್ ಕೋಣೆಗೆ ಬಂದು ವಾಚಾಮಗೋಚರ ಬೈದರು. ಕುಮಾರ್ ನನಗೆ ಏಳೆಂಟು ಬಾರಿ ಕಪಾಳಮೋಕ್ಷ ಮಾಡಿದ್ದಾನೆ. ನನ್ನ ಎದೆ, ಹೊಟ್ಟೆ ಮತ್ತು ಸೂಕ್ಷ್ಮ ಭಾಗಗಳಿಗೆ ಹೊಡೆದಿದ್ದಾನೆ ಎಂದು ಮಲಿವಾಲ್ ಆರೋಪಿಸಿರುವುದಾಗಿ ಎಫ್‌ಐಆರ್‌ನಲ್ಲಿ ಇದೆ.
ಬಿಭವ್ ಕುಮಾರ್ ಬಂದು ಬೈದು ಯಾವುದೇ ಪ್ರಚೋದನೆ ಇಲ್ಲದೆ ಕಪಾಳಮೋಕ್ಷ ಮಾಡಿದ್ದಾನೆ ಎಂದು ಮಲಿವಾಲ್ ತನ್ನ ದೂರಿನಲ್ಲಿ ಹೇಳಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ನಾನು ಬೊಬ್ಬೆ ಹಾಕಿ ನನ್ನನ್ನು ಹೋಗಲಿಕ್ಕೆ ಬಿಡಿ ಎಂದು ಕಿರುಚಿದೆ. ಅವನು ನನಗೆ ನಿರಂತರವಾಗಿ ಹೊಡೆಯುತ್ತಿದ್ದು ಹಿಂದಿಯಲ್ಲಿ ಬೈಯುತ್ತಿದ್ದ. ನಾವು ನಿನ್ನನ್ನು ಸುಮ್ಮನೆ ಬಿಡಲ್ಲ ಎಂದು ಬೆದರಿಕೆ ಹಾಕಿದ. ನನಗೆ ಪೀರಿಯಡ್ಸ್ ಆಗಿದೆ, ನನಗೆ ಅಸಾಧ್ಯ ನೋವು ಇದೆ, ನನ್ನನ್ನು ಬಿಟ್ಟು ಬಿಡಿ ಎಂದು ನಾನು ಅಂಗಲಾಚಿದೆ. ನಾನು ಸಂಪೂರ್ಣವಾಗಿ ಆಘಾತಕ್ಕೊಳಗಾಗಿದ್ದೆ. ಸಹಾಯಕ್ಕಾಗಿ ಮತ್ತೆ ಮತ್ತೆ ಕಿರುಚುತ್ತಿದ್ದೆ. ನನ್ನನ್ನು ರಕ್ಷಿಸಿಕೊಳ್ಳುವ ಸಲುವಾಗಿ, ನಾನು ಅವನಿಗೆ ಕಾಲಿನಲ್ಲಿ ತುಳಿದೆ. ಆ ಸಮಯದಲ್ಲಿ ಆತ ನನ್ನ ಮೇಲೆ ಬಿದ್ದು ಅಮಾನುಷವಾಗಿ ಎಳೆದಾಡಿ, ಉದ್ದೇಶಪೂರ್ವಕವಾಗಿ ನನ್ನ ಅಂಗಿಯನ್ನು ಮೇಲಕ್ಕೆ ಎಳೆದ. ಆ ನಂತರ ಬಿಭವ್ ಕುಮಾರ್ ಪಟ್ಟುಬಿಡದೆ ನನ್ನ ಎದೆ, ಹೊಟ್ಟೆ ಮತ್ತು ಸೊಂಟದ ಭಾಗಕ್ಕೆ ಕಾಲಿನಿಂದ ಒದ್ದು ಹಲ್ಲೆ ನಡೆಸಿದ್ದಾನೆ. ಇಷ್ಟೆಲ್ಲ ಹಲ್ಲೆ ನಡೆದ ಮೇಲೆ ನಾನು ಮನೆಯಿಂದ ಓಡಿಹೋಗಿ ಪೊಲೀಸರಿಗೆ ಕರೆ ಮಾಡಿದೆ. ಈ ದಾಳಿಯಿಂದ ನಾನು ತೀವ್ರ ಆಘಾತಕ್ಕೊಳಗಾಗಿದ್ದೇನೆ. 112 ಸಂಖ್ಯೆಗೆ ಕರೆ ಮಾಡಿ ಘಟನೆಯನ್ನು ವರದಿ ಮಾಡಿದೆ” ಎಂದು ಮಲಿವಾಲ್ ಎಫ್‌ಐಆರ್‌ನಲ್ಲಿ ತಿಳಿಸಿದ್ದಾರೆ.
ಭದ್ರತಾ ಸಿಬ್ಬಂದಿ ಆಗಮಿಸಿದಾಗ ನನಗೆ ಸಹಾಯ ಮಾಡುವ ಬದಲು ನನ್ನನ್ನು ಆವರಣದಿಂದ ಹೊರಗಟ್ಟುವಂತೆ ಕುಮಾರ್ ಅವರಿಗೆ ಸೂಚಿಸಿದರು. ನನ್ನನ್ನು ಬಲವಂತವಾಗಿ ಹೊರದಬ್ಬಲಾಯಿತು. ಪೊಲೀಸ್ ಬರುವವರೆಗೆ ನಾನು ಮುಖ್ಯಮಂತ್ರಿಯ ನಿವಾಸದ ಹೊರಗೆ ಕಾದು ಕುಳಿತೆ. “ಬಿಭವ್ ಮುಖ್ಯ ಗೇಟ್‌ನಲ್ಲಿ ಕೆಲಸ ಮಾಡುವ ಭದ್ರತಾ ಸಿಬ್ಬಂದಿಯೊಂದಿಗೆ ಮತ್ತೆ ಬಂದರು. ನನ್ನ ಮೇಲೆ ಕ್ರೂರವಾಗಿ ಹಲ್ಲೆ ನಡೆಸಲಾಗಿದೆ. ಅವರು ನನ್ನ ಸ್ಥಿತಿಯನ್ನು ನೋಡಬೇಕು. ಪೊಲೀಸರು ಬರುವವರೆಗೆ ನಾನು ಇಲ್ಲಿರುತ್ತೇನೆ ಎಂದು ಹೇಳಿದಾಗ, ಅವರು ನನ್ನಲ್ಲಿ ಆವರಣದಿಂದ ಹೊರಹೋಗುವಂತೆ ಕೇಳಿದರು ಎಂದು ಎಂದು ಮಲಿವಾಲ್ ಹೇಳಿದ್ದಾರೆ.
ಕಳೆದ ರಾತ್ರಿ ದೆಹಲಿ ಪೊಲೀಸರು ಮಲಿವಾಲ್ ಅವರನ್ನು ವೈದ್ಯಕೀಯ ತಪಾಸಣೆಗಾಗಿ AIIMS ಟ್ರಾಮಾ ಸೆಂಟರ್‌ಗೆ ಕರೆದೊಯ್ದರು. ದೆಹಲಿಯ ಚಂದ್ರವಾಲ್ ನಗರ ಪ್ರದೇಶದಲ್ಲಿರುವ ಕುಮಾರ್ ಅವರ ನಿವಾಸವನ್ನು ಪೊಲೀಸರು ತಲುಪಿದಾಗ, ಅವರು ಕಾಣೆಯಾಗಿರುವುದು ಕಂಡುಬಂದಿದೆ. ಕ್ರೈಂ ಬ್ರಾಂಚ್ ಮತ್ತು ವಿಶೇಷ ಕೋಶದ ತಂಡಗಳು ಕುಮಾರ್‌ಗಾಗಿ ಸಕ್ರಿಯವಾಗಿ ಶೋಧ ನಡೆಸುತ್ತಿದೆ.
ಮಹಿಳೆಯ ಮೇಲೆ ದೌರ್ಜನ್ಯ ಅಥವಾ ಕ್ರಿಮಿನಲ್ ಬಲ ಪ್ರಯೋಗ, ಆಕೆಯ ಘನತೆಗೆ ದಕ್ಕೆ ತರುವ ಉದ್ದೇಶದಿಂದ, ಕ್ರಿಮಿನಲ್ ಬೆದರಿಕೆ ಹಲ್ಲೆ ಸೇರಿದಂತೆ ದೆಹಲಿ ಪೊಲೀಸರು ಭಾರತೀಯ ದಂಡ ಸಂಹಿತೆಯ ಅನೇಕ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಹೆಚ್ಚುವರಿ ಕಮಿಷನರ್ ಪಿಎಸ್ ಕುಶ್ವಾಹ ನೇತೃತ್ವದ ಪೊಲೀಸ್ ತಂಡವು ಎಂಎಸ್ ಮಲಿವಾಲ್ ಅವರ ಹೇಳಿಕೆಯನ್ನು ದಾಖಲಿಸಿದ ನಂತರ ಎಫ್ಐಆರ್ ದಾಖಲಿಸಲಾಗಿದೆ. ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲ್ಯು) ಕೂಡ ಕುಮಾರ್ ಅವರನ್ನು ಇಂದು (ಶುಕ್ರವಾರ) ವಿಚಾರಣೆಗೆ ಕರೆದಿದೆ.