8 ಬಾರಿ ವೋಟ್ ಮಾಡಿದ ಬಿಜೆಪಿ ನಾಯಕನ ಪುತ್ರನ ವಿಡಿಯೋ ವೈರಲ್
ಲಕ್ನೋ, ಮೇ 20: ಉತ್ತರಪ್ರದೇಶದ ಇಟಾಹ್ ಜಿಲ್ಲೆಯ ನಯಾ ಗಾಂವ್ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತನೋರ್ವನ ಹದಿಹರೆಯದ ಪುತ್ರನೋರ್ವ 8 ಬಾರಿ ಬಿಜೆಪಿಗೆ ಮತ ಹಾಕಿದ್ದು, ಆತನನ್ನು ವಿಡಿಯೋ ಆಧರಿಸಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಖಿರಿಯಾ ಪಮರನ್ ಗ್ರಾಮದ ಅನಿಲ್ ಸಿಂಗ್ ಎಂಬವರ ಪುತ್ರ ರಾಜನ್ ಸಿಂಗ್ ಎಂದು ಗುರುತಿಸಲಾಗಿದೆ ಎಂದು ಬಂಧನದ ಕುರಿತು ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿ ನವದೀಪ್ ರಿನ್ವಾ ಮಾಹಿತಿ ನೀಡಿದ್ದಾರೆ. ಆರೋಪಿ ಯುವಕನ ತಂದೆ ಅನಿಲ್ ಸಿಂಗ್ ಖಿರಿ ಪಮರನ್ ಗ್ರಾಮ ಪ್ರಧಾನರಾಗಿದ್ದು ಬಿಜೆಪಿಯ ಸಕ್ರಿಯ ಸದಸ್ಯನಾಗಿದ್ದಾನೆ.
ವಿಡಿಯೋ ಆಧಾರದಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮತ್ತು ಇತರ ಅಪರಾಧದ ಆರೋಪದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ವಿಡಿಯೋದಲ್ಲಿ ಹದಿಹರೆಯದ ಯುವಕನೋರ್ವ ಬಿಜೆಪಿಗೆ ಎಂಟು ಬಾರಿ ಮತ ಹಾಕುವುದು ಸೆರೆಯಾಗಿತ್ತು. ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಪಿ ತ್ರಿಪಾಠಿ ನೀಡಿದ ದೂರಿನ ಆಧಾರದ ಮೇಲೆ ಹದಿಹರೆಯದ ಯುವಕನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. ವೀಡಿಯೊದಲ್ಲಿ ಕಂಡುಬರುವ ಅಪ್ರಾಪ್ತ ವಯಸ್ಕನಂತೆ ಕಾಣುವ ವ್ಯಕ್ತಿಯನ್ನು ಪತ್ತೆಹಚ್ಚಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ನಯಾ ಗಾಂವ್ ಎಸ್‌ಎಚ್‌ಒ ರಿತೇಶ್ ಠಾಕೂರ್ ಈ ಮೊದಲು ಹೇಳಿದ್ದರು.
ಒಬ್ಬ ವ್ಯಕ್ತಿ ಬಿಜೆಪಿಗೆ 8 ಬಾರಿ ಮತದಾನ ಮಾಡಿದ್ದಾನೆ ಎನ್ನಲಾದ ವಿಡಿಯೊವನ್ನು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಇದರ ಬೆನ್ನಲ್ಲೇ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ಈ ವಿಡಿಯೊ ನೋಡಿದರೆ ತಮ್ಮ ಸೋಲಿನಿಂದ ತಪ್ಪಿಸಿಕೊಳ್ಳಲು ಬಿಜೆಪಿ, ಜನರ ನಿರ್ಣಯವನ್ನು ಬದಿಗೊತ್ತಿ ಆಡಳಿತ ಯಂತ್ರದ ಮೇಲೆ ಒತ್ತಡ ಹಾಕಿ ಪ್ರಜಾಪ್ರಭುತ್ವದ ಲೂಟಿಗೆ ಮುಂದಾಗಿದೆ ಎಂದು ಹೇಳಿದ್ದರು.
ಆಡಳಿತದಲ್ಲಿರುವವರ ಒತ್ತಡಕ್ಕೆ ಮಣಿಯದೆ ಚುನಾವಣೆ ಸಿಬ್ಬಂದಿ ತಮ್ಮ ಸಾಂವಿಧಾನಿಕ ಕರ್ತವ್ಯ ಅರಿತು ಕೆಲಸ ಮಾಡುತ್ತಾರೆ ಎಂದು ಕಾಂಗ್ರೆಸ್ ನಂಬಿದೆ. ಇಲ್ಲವಾದರೆ, ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದ ಕೂಡಲೇ ಕರ್ತವ್ಯ ಲೋಪ ಎಸಗಿದವವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ. ಸಾಂವಿಧಾನಿಕ ಪ್ರತಿಜ್ಞೆ ಉಲ್ಲಂಘಿಸುವ ಮುನ್ನ 10 ಬಾರಿ ಯೋಚಿಸಿ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಫರೂಕಾಬಾದ್ ಕ್ಷೇತ್ರದಿದ ಬಿಜೆಪಿಯಿಂದ ಮುಕೇಶ್ ರಾಜಪುತ್ ಸ್ಪರ್ಧಿಸುತ್ತಿದ್ದಾರೆ. ಇಲ್ಲಿ ನಾಲ್ಕನೇ ಹಂತದಲ್ಲಿ ಮೇ 13ರಂದು ಮತದಾನ ನಡೆದಿತ್ತು. ಘಟನೆ ಬಯಲಾಗುತ್ತಿದ್ದಂತೆ ಈ ನಿರ್ದಿಷ್ಟ ಮತಗಟ್ಟೆಯಲ್ಲಿದ್ದ ಎಲ್ಲಾ ಅಧಿಕಾರಿಗಳನ್ನು ವಜಾಗೊಳಿಸಲು ಹಾಗೂ ಶಿಸ್ತುಕ್ರಮಕ್ಕೆ ಶಿಫಾರಸು ಮಾಡಲಾಗಿದೆ. ಮತಗಟ್ಟೆಯಲ್ಲಿ ಮರುಮತದಾನಕ್ಕೂ ಶಿಫಾರಸು ಮಾಡಲಾಗಿದೆ ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಹೇಳಿದ್ದಾರೆ.