ರಾಜ್ಯಸಭಾ ಚುನಾವಣೆ: ಸೋನಿಯಾ ಗಾಂಧಿ ರಾಜಸ್ಥಾನದಿಂದ ನಾಮಪತ್ರ
ಜೈಪುರ, ಫೆ. 14: ರಾಜ್ಯಸಭಾ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾಗಾಂಧಿ ರಾಜಸ್ಥಾನದಿಂದ ನಾಮಪತ್ರ ಸಲ್ಲಿಸಿದ್ದಾರೆ. ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ಜೈಪುರ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ ಸೋನಿಯಾ ಗಾಂಧಿಯನ್ನು ಕಾಂಗ್ರೆಸ್ನ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸೇರಿದಂತೆ ಇತರರು ಬರಮಾಡಿಕೊಂಡಿದ್ದರು.
ಈ ಮಧ್ಯೆ ಕಾಂಗ್ರೆಸ್ ರಾಜ್ಯಸಭಾ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ರಾಜಸ್ಥಾನದಿಂದ ಸೋನಿಯಾ ಗಾಂಧಿ ಅವರನ್ನು ನಾಮನಿರ್ದೇಶನ ಮಾಡಿದೆ. ಬಿಹಾರದಿಂದ ಕಾಂಗ್ರೆಸ್ನ ಅಖಿಲೇಶ್ ಪ್ರಸಾದ್ ಸಿಂಗ್, ಹಿಮಾಚಲ ಪ್ರದೇಶದಿಂದ ಅಭಿಷೇಕ್ ಮನು ಸಿಂಘ್ವಿ ಮತ್ತು ಮಹಾರಾಷ್ಟ್ರದಿಂದ ಚಂದ್ರಕಾಂತ್ ಹಂದೋರೆ ನಾಮನಿರ್ದೇಶನಗೊಂಡಿದ್ದಾರೆ.
ರಾಜಸ್ಥಾನದಿಂದ ಕಾಂಗ್ರೆಸ್ ಪಕ್ಷವು ಒಂದು ರಾಜ್ಯಸಭಾ ಸ್ಥಾನದಲ್ಲಿ ಗೆಲುವು ಸಾಧಿಸುವುದು ನಿಶ್ಚಿತವಾಗಿದೆ. ಸೋನಿಯಾ ಗಾಂಧಿ ಅವರು ಐದು ಬಾರಿ ಲೋಕಸಭಾ ಸಂಸದರಾಗಿದ್ದಾರೆ. ಇದೇ ಪ್ರಥಮ ಬಾರಿಗೆ ಅವರು ರಾಜ್ಯಸಭೆಯನ್ನು ಪ್ರವೇಶಿಸಲಿದ್ದಾರೆ. ಲೋಕಸಭೆಯಲ್ಲಿ ರಾಯ್ ಬರೇಲಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಸೋನಿಯಾ ಗಾಂಧಿ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ತಿಳಿದು ಬಂದಿದೆ.
15 ರಾಜ್ಯಗಳ ಒಟ್ಟು 56 ರಾಜ್ಯಸಭಾ ಸದಸ್ಯರು ಎಪ್ರಿಲ್ ತಿಂಗಳಲ್ಲಿ ನಿವೃತ್ತರಾಗುತ್ತಿದ್ದು, ತೆರವಾಗುತ್ತಿರುವ ಸ್ಥಾನಗಳಿಗೆ ಫೆಬ್ರವರಿ 27ರಂದು ಚುನಾವಣೆ ನಿಗದಿಯಾಗಿದೆ. ನಾಮಪತ್ರ ಸಲ್ಲಿಸಲು ಫೆಬ್ರವರಿ 15 ಕೊನೆಯ ದಿನಾಂಕವಾಗಿದೆ. ರಾಜಸ್ಥಾನದಿಂದ ನಡೆಯಲಿರುವ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಒಂದು ಸ್ಥಾನದಲ್ಲಿ ಸುಲಭವಾಗಿ ಗೆಲುವು ಸಾಧಿಸಲಿದೆ. ಮಾಜಿ ಪ್ರಧಾನಿ ಮನೋಹನ್ ಸಿಂಗ್ ಅವರ ಆರು ವರ್ಷಗಳ ಅವಧಿಯು ಎಪ್ರಿಲ್ ತಿಂಗಳಲ್ಲಿ ಮುಕ್ತಾಯವಾಗುತ್ತಿರುವುದರಿಂದ ಅವರ ಸ್ಥಾನ ತೆರವಾಗುತ್ತಿದೆ. ಆಗಸ್ಟ್ 1964ರಿಂದ ಫೆಬ್ರವರಿ 1967ರವರೆಗೆ ಇಂದಿರಾ ಗಾಂಧಿ ರಾಜ್ಯಸಭಾ ಸದಸ್ಯರಾಗಿದ್ದ ನಂತರ ಗಾಂಧಿ ಕುಟುಂಬದಿಂದ ರಾಜ್ಯಸಭೆಯನ್ನು ಪ್ರವೇಶಿಸುತ್ತಿರುವ ಎರಡನೆ ಸದಸ್ಯೆ ಸೋನಿಯಾ ಗಾಂಧಿಯಾಗಿದ್ದಾರೆ.
1998 ಮತ್ತು 2022ರ ನಡುವೆ ಸುಮಾರು 22 ವರ್ಷಗಳ ಕಾಲ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಸೋನಿಯಾ ಗಾಂಧಿ ಅವರು ಐದು ಬಾರಿ ಲೋಕಸಭಾ ಸಂಸದರಾಗಿದ್ದಾರೆ. ಅವರು 1999ರಲ್ಲಿ ಉತ್ತರ ಪ್ರದೇಶದ ಅಮೇಥಿ ಮತ್ತು ಕರ್ನಾಟಕದ ಬಳ್ಳಾರಿಯಿಂದ ಆಯ್ಕೆಯಾಗಿದ್ದರು ಮತ್ತು ಅಮೇಥಿಯನ್ನು ಉಳಿಸಿಕೊಂಡಿದ್ದರು. 2004ರಲ್ಲಿ ರಾಹುಲ್ ಗಾಂಧಿಗಾಗಿ ಅಮೇಥಿ ಕ್ಷೇತ್ರವನ್ನು ಬಿಟ್ಟುಕೊಟ್ಟು ರಾಯ್ ಬರೇಲಿಯಿಂದ ಸೋನಿಯಾ ಗಾಂಧಿ ಸ್ಪರ್ಧಿಸಿದ್ದರು.
ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸೋನಿಯಾ ಗಾಂಧಿ ಅವರು ರಾಜ್ಯಸಭೆಯಿಂದ ನಾಮನಿರ್ದೇಶನಗೊಂಡಿರುವುದನ್ನು ಸ್ವಾಗತಿಸಿದ್ದಾರೆ ಮತ್ತು ಸೋನಿಯಾ ಗಾಂಧಿ ನಿರಂತರವಾಗಿ ರಾಜಸ್ಥಾನದೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಹೇಳಿದ್ದಾರೆ. ಪ್ರಧಾನಿ ಹುದ್ದೆಯನ್ನು ತ್ಯಜಿಸಿದ್ದ ಸೋನಿಯಾ ಗಾಂಧಿ ಅವರನ್ನು ರಾಜಸ್ಥಾನದಿಂದ ರಾಜ್ಯಸಭಾ ಅಭ್ಯರ್ಥಿಯನ್ನಾಗಿ ಘೋಷಿಸಿರುವುದನ್ನು ನಾವು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ ಎಂದು ಗೆಹ್ಲೋಟ್ ಅವರು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ, ಸೋನಿಯಾ ಗಾಂಧಿಯವರು ರಾಜ್ಯಕ್ಕೆ ಹಲವು ಬಾರಿ ಭೇಟಿ ಮಾಡಿದ್ದಾರೆ. ಕೆಲವು ಬಾರಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಜೊತೆ ಭೇಟಿ ಮಾಡಿದ್ದರು ಎಂದು ಹೇಳಿದ್ದಾರೆ.