ದೆಹಲಿ ಚಲೋ ಮೆರವಣಿಗೆ: ಪೊಲೀಸರೊಂದಿಗೆ ಘರ್ಷಣೆ ಬಯಸಲ್ಲ ಎಂದ ರೈತರು

ದೆಹಲಿ ಚಲೋ ಮೆರವಣಿಗೆ: ಪೊಲೀಸರೊಂದಿಗೆ ಘರ್ಷಣೆ ಬಯಸಲ್ಲ ಎಂದ ರೈತರು

ನವದೆಹಲಿ, ಫೆ. 14: ಪಂಜಾಬ್-ಹರಿಯಾಣ ಗಡಿಯಲ್ಲಿ ರೈತರ ಚಲೋ ದೆಹಲಿ ಮೆರವಣಿಗೆಗೆ ಪೊಲೀಸರು ಅಡ್ಡಿಪಡಿಸಿದ ಎರಡನೇ ದಿನದಂದು, ‘ನಾವು ಪೊಲೀಸರೊಂದಿಗೆ ಘರ್ಷಣೆ ಬಯಸುವುದಿಲ್ಲ’ ಎಂದು ರೈತ ಮುಖಂಡರು ಹೇಳಿದ್ದಾರೆ. ‘ಸರ್ಕಾರವು ನಮ್ಮ ವಿರುದ್ಧ ಪೊಲೀಸ್ ಶಕ್ತಿ ಬಳಸುತ್ತಿದ್ದು, ರೈತರನ್ನು ಶತ್ರುಗಳಂತೆ ನಡೆಸಿಕೊಳ್ಳುತ್ತಿದೆ’ ಎಂದು ಆರೋಪಿಸಿದ್ದಾರೆ.
ಮತ್ತೊಂದೆಡೆ ಕೇಂದ್ರ ಸರ್ಕಾರವು, ‘ರೈತರೊಂದಿಗೆ ನಾವು ಮಾತನಾಡಲು ಸಿದ್ಧರಿದ್ದು, ಈಗಾಗಲೇ ಅವರ ಅನೇಕ ಬೇಡಿಕೆಗಳನ್ನು ಅಂಗೀಕರಿಸಲಾಗಿದೆ’ ಎಂದು ಸಮರ್ಥಿಸಿಕೊಂಡಿದೆ. ಆದರೆ, ಪಂಜಾಬ್-ಹರಿಯಾಣ ಗಡಿಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಯಾವುದೇ ರೈತರು ರಾಜ್ಯಕ್ಕೆ ಪ್ರವೇಶಿಸಲು ಸಾಧ್ಯವಾಗದಂತೆ ಹರ್ಯಾಣ ಪೊಲೀಸರು ಕಾವಲು ಕಾಯುತ್ತಿದ್ದಾರೆ. ಪಂಜಾಬ್ ಸರ್ಕಾರ ರೈತರನ್ನು ತಡೆದಿಲ್ಲ. ಆದರೆ ಪೊಲೀಸರು ಅಲರ್ಟ್ ಆಗಿದ್ದಾರೆ. ಮಂಗಳವಾರ ರೈತರು ಮತ್ತು ಹರಿಯಾಣ ಪೊಲೀಸರ ನಡುವಿನ ಘರ್ಷಣೆಯ ನಂತರ ಆಸ್ಪತ್ರೆಗಳಿಗೂ ಎಚ್ಚರಿಕೆ ನೀಡಲಾಗಿದೆ.
ರೈತರ ಪ್ರತಿಭಟನೆ 2ನೇ ದಿನದ ಬೆಳವಣಿಗೆಗಳು:
ಪಂಜಾಬ್-ಹರಿಯಾಣ ಶಂಭು ಗಡಿಯಿಂದ ಮೆರವಣಿಗೆ ಪುನರಾರಂಭವಾಗುತ್ತಿದ್ದಂತೆ ಪೊಲೀಸರು ಮತ್ತು ರೈತರ ನಡುವೆ ಹೊಸ ಘರ್ಷಣೆ ಪ್ರಾರಂಭವಾಯಿತು. ಹರಿಯಾಣ ಪೊಲೀಸರು ಹಲವು ಸುತ್ತಿನ ಅಶ್ರುವಾಯು ಶೆಲ್‌ಗಳನ್ನು ಹಾರಿಸಿದ್ದಾರೆ. ಪಂಜಾಬ್ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಅವರು ಪಂಜಾಬ್ ಪ್ರದೇಶದೊಳಗೆ ರೈತರ ಮೇಲೆ ದಾಳಿ ಮಾಡಲು ಹರಿಯಾಣ ಸರ್ಕಾರಕ್ಕೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದ್ದಾರೆ.
ಬುಧವಾರದ ಪ್ರತಿಭಟನೆಯಲ್ಲಿ ಹೆಚ್ಚಿನ ರೈತರು ಸೇರಿಕೊಂಡರು. ಆದರೆ, ಅವರು ಇನ್ನೂ ಹರಿಯಾಣವನ್ನು ಪ್ರವೇಶಿಸಿಲ್ಲ. ಎರಡನೇ ದಿನದಂದು ದೆಹಲಿಯಲ್ಲಿ ಹೆಚ್ಚಿನ ಭದ್ರತಾ ತಪಾಸಣೆಗಳನ್ನು ಮಾಡಲಾಗಿದ್ದು, ದೆಹಲಿಯ ಹಲವಾರು ಪ್ರದೇಶಗಳಲ್ಲಿ ದೀರ್ಘ ಟ್ರಾಫಿಕ್ ಜಾಮ್ ಕಂಡುಬಂದಿದೆ. ಶಂಭು ಗಡಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರೈತ ಮುಖಂಡ ಸರ್ವಾನ್ ಸಿಂಗ್ ಪಂಧೇರ್, ರೈತರ ಪ್ರತಿಭಟನೆ ಶಾಂತಿಯುತ ಮತ್ತು ರಾಜಕೀಯ ರಹಿತವಾಗಿರುವಾಗ ಸರ್ಕಾರ ರೈತರ ಮಾನಹಾನಿ ಮಾಡುತ್ತಿದೆ ಎಂದು ಬೇಸರ ಹೊರಹಾಕಿದ್ದಾರೆ. ರೈತರ ವಿರುದ್ಧ ಅರೆಸೇನಾ ಪಡೆಗಳನ್ನು ನಿಯೋಜಿಸಿರುವುದು ಇದೇ ಮೊದಲು. ನಮಗೆ ನಮ್ಮ ಬೇಡಿಕೆಗಳು ಮಾತ್ರ ಬೇಕು… ಸರ್ಕಾರದೊಂದಿಗೆ ಘರ್ಷಣೆಗೆ ನಾವು ಬಯಸುವುದಿಲ್ಲ’ ಎಂದು ಪಧೇರ್ ಹೇಳಿದರು.
ತಾವು ಅಧಿಕಾರಕ್ಕೆ ಬಂದರೆ ಸ್ವಾಮಿನಾಥನ್ ಆಯೋಗದ ವರದಿಯನ್ನು ಜಾರಿಗೊಳಿಸುತ್ತೇವೆ ಮತ್ತು ಎಂಎಸ್‌ಪಿಗೆ ಕಾನೂನು ಭರವಸೆ ನೀಡುತ್ತೇವೆ ಎಂದು ಕಾಂಗ್ರೆಸ್ ಮಂಗಳವಾರ ಹೇಳಿಕೊಂಡ ನಂತರ ರಾಜಕೀಯ ಗದ್ದಲ ಆರಂಭವಾಯಿತು. ಆದರೆ ಯುಪಿಎ ಸರ್ಕಾರ 2010ರಲ್ಲಿ ಸ್ವಾಮಿನಾಥನ್ ಆಯೋಗದ ಶಿಫಾರಸನ್ನು ತಿರಸ್ಕರಿಸಿತ್ತು.
‘ಈ ಶಿಫಾರಸನ್ನು ನಮ್ಮ ಸರ್ಕಾರವು ಅಂಗೀಕರಿಸಿಲ್ಲ. ಏಕೆಂದರೆ, ಎಂಎಸ್‌ಪಿ ಅನ್ನು ಕೃಷಿ ವೆಚ್ಚಗಳು ಮತ್ತು ಬೆಲೆಗಳ ಆಯೋಗವು ವಸ್ತುನಿಷ್ಠ ಮಾನದಂಡಗಳ ಆಧಾರದ ಮೇಲೆ ಮತ್ತು ವಿವಿಧ ಸಂಬಂಧಿತ ಅಂಶಗಳನ್ನು ಪರಿಗಣಿಸಿ ಶಿಫಾರಸು ಮಾಡಿದೆ. ಆದ್ದರಿಂದ, ವೆಚ್ಚದ ಮೇಲೆ ಕನಿಷ್ಠ 50% ಹೆಚ್ಚಳವನ್ನು ಸೂಚಿಸುವುದು ವಿರೂಪಗೊಳಿಸಬಹುದು’ ಎಂದು 2010ರಲ್ಲಿ ಯುಪಿಎ ಸರ್ಕಾರ ಉತ್ತರಿಸಿತ್ತು.
ಫೆಬ್ರವರಿ 16 ರಂದು ಭಾರತ್ ಬಂದ್‌ಗೆ ಕರೆ ನೀಡಿದ್ದ ರೈತ ಸಂಘಗಳು ಸಭೆಯ ಕುರಿತು ಸರ್ಕಾರದಿಂದ ಸಂದೇಶಗಳನ್ನು ಸ್ವೀಕರಿಸಿದ್ದೇವೆ ರೈತ ಮುಖಂಡರು ಹೇಳಿದರು. ಬಿಕೆಯು (ಏಕ್ತಾ-ಉಘ್ರಹನ್) ಪಂಜಾಬ್‌ನಲ್ಲಿ ಗುರುವಾರ ಮಧ್ಯಾಹ್ನ 12 ರಿಂದ ಸಂಜೆ 4 ರವರೆಗೆ ರೈಲ್ ರೋಕೋವನ್ನು ಘೋಷಿಸಿತು, ಇದು ಪ್ರತಿಭಟನಾ ನಿರತ ರೈತ ಸಂಘಟನೆಗಳಿಗೆ ಬೆಂಬಲದ ಸಂಕೇತವಾಗಿದೆ.
ರೈತರು ಸಾಮಾನ್ಯ ಜನರಿಗೆ ತೊಂದರೆ ಕೊಡಬಾರದು ಎಂದು ಕೇಂದ್ರ ಸಚಿವ ಅರ್ಜುನ್ ಮುಂಡಾ ಹೇಳಿದ್ದಾರೆ. ”ರೈತ ಸಂಘದೊಂದಿಗೆ ಸಕಾರಾತ್ಮಕ ಚರ್ಚೆ ನಡೆಸುವ ನಮ್ಮ ಪ್ರಯತ್ನ ಮುಂದುವರಿಯಲಿದೆ ಎಂದು ಮೊದಲೇ ಹೇಳಿದ್ದೆ.ಜನರು ಯೋಚಿಸದೆ ಪರಿಸ್ಥಿತಿಯನ್ನು ಟೀಕಿಸುವ ರೀತಿಯಲ್ಲಿ ಮಾತನಾಡುವ ಕಾನೂನಿನ ಬಗ್ಗೆ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ ಎಂಬುದನ್ನು ರೈತ ಸಂಘಟನೆಗಳು ಅರ್ಥ ಮಾಡಿಕೊಳ್ಳಬೇಕು. ನಾವು ಅದರ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಚರ್ಚಿಸಲು ಪ್ರಯತ್ನಿಸಬೇಕು’ ಎಂದು ಅವರು ಹೇಳಿದರು.

Previous Post
ರಾಜ್ಯಸಭಾ ಚುನಾವಣೆ: ಸೋನಿಯಾ ಗಾಂಧಿ ರಾಜಸ್ಥಾನದಿಂದ ನಾಮಪತ್ರ
Next Post
ಒಂದು ರಾಷ್ಟ್ರ, ಒಂದು ಚುನಾವಣೆ’ ವಿರುದ್ಧ ನಿರ್ಣಯ ಅಂಗೀಕರಿಸಿದ ತಮಿಳುನಾಡು ಸರಕಾರ

Recent News