ಚುನಾವಣಾ ಬಾಂಡ್ ಯೋಜನೆ ರದ್ದುಗೊಳಿಸಿದ ಸುಪ್ರೀಂ ಕೋರ್ಟ್‌

ಚುನಾವಣಾ ಬಾಂಡ್ ಯೋಜನೆ ರದ್ದುಗೊಳಿಸಿದ ಸುಪ್ರೀಂ ಕೋರ್ಟ್‌

ನವದೆಹಲಿ, ಫೆ. 15: ಕೇಂದ್ರ ಸರ್ಕಾರದ ಚುನಾವಣಾ ಬಾಂಡ್‌ ಯೋಜನೆಯನ್ನು ‘ಅಸಂವಿಧಾನಿಕ’ ಎಂದಿರುವ ಸುಪ್ರೀಂ ಕೋರ್ಟ್‌, ಅದನ್ನು ರದ್ದುಗೊಳಿಸಿ ಮಹತ್ವದ ತೀರ್ಪು ಪ್ರಕಟಿಸಿದೆ. ಅನಾಮಧೇಯ ಮೂಲಗಳಿಂದ ನಿಧಿ ಸಂಗ್ರಹಕ್ಕೆ ರಾಜಕೀಯ ಪಕ್ಷಗಳಿಗೆ ಅವಕಾಶ ನೀಡಿದ್ದ ಕೇಂದ್ರ ಸರ್ಕಾರದ ಚುನಾವಣಾ ಬಾಂಡ್ ಯೋಜನೆಯ ಕಾನೂನು ಸಿಂಧುತ್ವವನ್ನು ಪ್ರಶ್ನಿಸಿದ್ದ ಅರ್ಜಿಗಳನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ.
ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ತೀರ್ಪು ಪ್ರಕಟಿಸಿದ್ದು, ಎಲ್ಲಾ ನ್ಯಾಯಮೂರ್ತಿಗಳು ಅದಕ್ಕೆ ಸಹಮತ ಸೂಚಿಸಿದ್ದಾರೆ. ನ್ಯಾಯಮೂರ್ತಿ ಖನ್ನಾ ಅವರು ಸ್ವಲ್ಪ ವಿಭಿನ್ನವಾದ ತರ್ಕದೊಂದಿಗೆ ಸಹಮತದ ಅಭಿಪ್ರಾಯವನ್ನು ಬರೆದಿದ್ದಾರೆ. ಅನಾಮಧೇಯ ಚುನಾವಣಾ ಬಾಂಡ್‌ಗಳು ಸಂವಿಧಾನದ 19(1)(ಎ) ವಿಧಿಯ ಅಡಿಯಲ್ಲಿ ಮಾಹಿತಿಯ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿದೆ. ರಾಜಕೀಯ ಪಕ್ಷಗಳಿಗೆ ಆರ್ಥಿಕ ಬೆಂಬಲ ನೀಡುವುದು ಖ್ವಿಡ್‌ ಪ್ರೊ ಪ್ರೊ ಗೆ (ಅಂದರೆ ಒಂದು ಸಹಾಯ ಮಾಡಿದ್ದಕ್ಕಾಗಿ ಇನ್ನೊಂದು ಪ್ರಯೋಜನ ಪಡೆಯುವುದು) ಕಾರಣವಾಗಬಹುದೆಂದೂ ಸುಪ್ರೀಂ ಕೋರ್ಟ್‌ ಹೇಳಿದೆ.
ಕಾಳಧನ ನಿಯಂತ್ರಣಕ್ಕೆ ಚುನಾವಣಾ ಬಾಂಡ್‌ ಯೋಜನೆ ಒಂದೇ ಆಯ್ಕೆಯಲ್ಲ ಎಂದಿರುವ ಸುಪ್ರೀಂ ಕೋರ್ಟ್‌, ಕಾಳಧನ ನಿಯಂತ್ರಣವೆಂದು ಹೇಳಿಕೊಂಡು ಆರ್‌ಟಿಐ ಉಲ್ಲಂಘನೆಯಾಗಬಾರದು. ಕಾಳಧನ ನಿಯಂತ್ರಣಕ್ಕೆ ಇತರ ಪರ್ಯಾಯಗಳಿವೆ ಎಂದಿದೆ. ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿಆರ್ ಗವಾಯಿ, ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಸಾಂವಿಧಾನಿಕ ಪೀಠವು, 2023ರ ನವೆಂಬರ್‌ನಲ್ಲಿ ಮೂರು ದಿನಗಳ ಕಾಳ ಪ್ರಕರಣದ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿತ್ತು.
ಜನ ಸಾಮಾನ್ಯರು, ಕಾರ್ಪೊರೇಟ್ ಸಂಸ್ಥೆಗಳು ರಾಜಕೀಯ ಪಕ್ಷಗಳಿಗೆ ನೀಡುವ ಒಂದು ವಿಧದ ದೇಣಿಗೆ ಕ್ರಮವಾಗಿದೆ ಚುನಾವಣಾ ಬಾಂಡ್. ಜನರು 1,000 ರೂ, 10,000 ರೂ, 1 ಲಕ್ಷ ರೂ, 10 ಲಕ್ಷ ರೂ, 1 ಕೋಟಿ ರೂ ಇತ್ಯಾದಿ ಮುಖಬೆಲೆಗಳಲ್ಲಿ ಬಾಂಡ್ಗಳನ್ನು ಖರೀದಿಸಬಹುದು. ಈ ಬಾಂಡ್ಗಳು ಅನಾಮಧೇಯವಾಗಿರುತ್ತವೆ. ಅಂದರೆ, ಇದನ್ನು ಖರೀದಿಸಿದ ವ್ಯಕ್ತಿ ಅಥವಾ ಸಂಸ್ಥೆಯ ಹೆಸರು ಬಹಿರಂಗವಾಗುವುದಿಲ್ಲ. ಯಾವ ರಾಜಕೀಯ ಪಕ್ಷಕ್ಕೆ ದೇಣಿಗೆ ಕೊಡಲಾಗಿದೆ ಆ ಪಕ್ಷ ಹೆಸರೂ ಬಹಿರಂಗವಾಗುವುದಿಲ್ಲ.
ಜನವರಿ 2, 2018ರಂದು ಅಂದಿನ ಮೋದಿ ಸರ್ಕಾರವು ಚುನಾವಣಾ ಬಾಂಡ್ ಯೋಜನೆಗೆ ಅಧಿಸೂಚನೆ ಹೊರಡಿಸಿತ್ತು. ಚುನಾವಣಾ ಬಾಂಡ್ಗಳನ್ನು ಹಣಕಾಸು ಕಾಯ್ದೆ 2017ರ ಮೂಲಕ ಜಾರಿಗೆ ತರಲಾಗಿತ್ತು. ಈ ಬಾಂಡ್ಗಳನ್ನು ವರ್ಷಕ್ಕೆ ನಾಲ್ಕು ಬಾರಿ, ಅಂದರೆ ಜನವರಿ, ಏಪ್ರಿಲ್, ಜುಲೈ ಹಾಗೂ ಅಕ್ಟೋಬರ್ನಲ್ಲಿ ನೀಡಲಾಗುತ್ತದೆ. ಜನರು ಬ್ಯಾಂಕ್ ಶಾಖೆಗೆ ಭೇಟಿ ನೀಡುವ ಮೂಲಕ ಅಥವಾ ವೆಬ್ಸೈಟ್ನಲ್ಲಿ ಆನ್ಲೈನ್ನಲ್ಲಿ ಇದನ್ನು ಖರೀದಿಸಬಹುದು.

Previous Post
ರೈತರನ್ನು ಅಪರಾಧಿಗಳಂತೆ ಪರಿಗಣಿಸಬೇಡಿ: ಮಧುರಾ ಸ್ವಾಮಿನಾಥನ್
Next Post
ಅನಾರೋಗ್ಯದ ಕಾರಣಕ್ಕೆ ಲೋಕಸಭೆಗೆ ಸ್ಪರ್ಧಿಸುತ್ತಿಲ್ಲ: ಸೋನಿಯಾ ಗಾಂಧಿ

Recent News