INDIA ಜೊತೆಗಿನ ಮೈತ್ರಿ ವದಂತಿ ಅಲ್ಲಗೆಳೆದ ಮಾಯಾವತಿ

INDIA ಜೊತೆಗಿನ ಮೈತ್ರಿ ವದಂತಿ ಅಲ್ಲಗೆಳೆದ ಮಾಯಾವತಿ

ಲಕ್ನೋ, ಫೆ. 19: ಲೋಕಸಭೆ ಚುನಾವಣೆಗೂ ಮುನ್ನ INDIA ಬಣದ ಜೊತೆ ಮೈತ್ರಿ ಮಾಡಿಕೊಳ್ಳುವ ವದಂತಿಗಳನ್ನು ತಳ್ಳಿಹಾಕಿರುವ ಬಿಎಸ್‌ಪಿ ವರಿಷ್ಠೆ ಮಾಯಾವತಿ, ತಮ್ಮ ಪಕ್ಷವು ಸ್ವಂತ ಬಲದಿಂದ ಏಕಾಂಗಿಯಾಗಿ ಚುನಾವಣೆ ಎದುರಿಸಲಿದೆ ಎಂದು ಹೇಳಿದ್ದಾರೆ. ಈ ಕುರಿತು ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ, ಬಿಎಸ್ಪಿ ಕಾರ್ಯಕರ್ತರು ಇಂತಹ ವದಂತಿಗಳ ಬಗ್ಗೆ ಎಚ್ಚರದಿಂದಿರಬೇಕು ಎಂದು ಹೇಳಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಮಾಯಾವತಿ, ಮುಂಬರುವ ಲೋಕಸಭೆ ಚುನಾವಣೆಗೆ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಬಿಎಸ್‌ಪಿ ಪದೇ ಪದೇ ಘೋಷಿಸುತ್ತಿದ್ದರೂ, ಪ್ರತಿದಿನ ಮೈತ್ರಿ ಬಗ್ಗೆ ವದಂತಿಗಳು ಹರಡುತ್ತಿವೆ. ಬಿಎಸ್‌ಪಿ ಇಲ್ಲದೆ ಕೆಲವು ಪಕ್ಷಗಳು ಚೆನ್ನಾಗಿ ನಡೆಯುವುದಿಲ್ಲ ಎಂಬುದನ್ನು ಇದು ಸಾಬೀತುಪಡಿಸುತ್ತದೆ ಎಂದು ಅವರು ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಸಮಾಜದ ಹಿತಾಸಕ್ತಿ ಮತ್ತು ಕಲ್ಯಾಣವನ್ನು ಗಮನದಲ್ಲಿಟ್ಟುಕೊಂಡು, ವಿಶೇಷವಾಗಿ ಬಡವರು, ಶೋಷಿತರು ಮತ್ತು ನಿರ್ಲಕ್ಷ್ಯಕ್ಕೊಳಗಾದವರನ್ನು ಗಮನದಲ್ಲಿಟ್ಟುಕೊಂಡು ತನ್ನ ಜನರ ಬಲದೊಂದಿಗೆ ಲೋಕಸಭೆ ಚುನಾವಣೆಯನ್ನು ಬಿಎಸ್ಪಿಯು ಏಕಾಂಗಿಯಾಗಿ ಎದುರಿಸಲಿದೆ ಎಂದು ಮಾಯಾವತಿ ಹೇಳಿದ್ದಾರೆ. ಬಿಎಸ್‌ಪಿ 2019ರ ಲೋಕಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿತ್ತು. ಈ ಮೊದಲು ಬಿಎಸ್ಪಿ INDIA ಬಣದ ಜೊತೆ ಸೇರಿಕೊಂಡರೆ ಎಸ್ಪಿ ಮೈತ್ರಿಯಿಂದ ಹೊರಗುಳಿಯಲಿದೆ ಎಂಬ ಬಗ್ಗೆ ಕೂಡ ಸುದ್ದಿಯಾಗಿತ್ತು.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಹೋರಾಡಲು ರಚನೆಯಾಗಿರುವ ಐಕ್ಯ ಹೋರಾಟಕ್ಕೆ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಸೇರಬೇಕು, ಅವರಿಗೆ ಇಂಡಿಯಾ ಬಣದ ಬಾಗಿಲು ತೆರೆದಿದೆ ಎಂದು ಉತ್ತರಪ್ರದೇಶ ಕಾಂಗ್ರೆಸ್‌ ಉಸ್ತುವಾರಿ ಅವಿನಾಶ್ ಪಾಂಡೆ ಭಾನುವಾರ ಹೇಳಿದ್ದರು. ಬಿಎಸ್‌ಪಿಯ ಮಾಯಾವತಿ ಏಕಾಂಗಿಯಾಗಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ, ಕಾಂಗ್ರೆಸ್-ಎಸ್‌ಪಿ ಒಕ್ಕೂಟವು ಉತ್ತರ ಪ್ರದೇಶದ ಸಣ್ಣ ಪಕ್ಷಗಳೊಂದಿಗೆ ಇಂಡಿಯಾ ಬ್ಲಾಕ್‌ಗೆ ಸೇರುವ ಕುರಿತು ಮಾತುಕತೆ ನಡೆಸುತ್ತಿದೆ. ಕೆಲವು ಪಕ್ಷಗಳು ಮೈತ್ರಿ ಕೂಟದ ಜೊತೆ ಸೇರುತ್ತಿದೆ ಮತ್ತು ಕೆಲವು ಸೇರುವ ನಿರೀಕ್ಷೆಗಳಿದೆ. ಇದಕ್ಕೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತಿದೆ. ಆದರೆ, ಈ ತಿಂಗಳ ಅಂತ್ಯದ ವೇಳೆಗೆ ಎಲ್ಲವೂ ಬಗೆಹರಿಯಲಿದೆ ಎಂದು ಪಾಂಡೆ ಹೇಳಿದ್ದರು.
ಲೋಕಸಭೆ ಚುನಾವಣೆಗೆ ಸಮೀಪಿಸುತ್ತಿದ್ದಂತೆ ಬಿಎಸ್ಪಿ INDIA ಮೈತ್ರಿ ಕೂಟ ಅಥವಾ ಎನ್‌ಡಿಎ ಮೈತ್ರಿ ಪಕ್ಷಗಳ ಜೊತೆ ಸೇರಿಕೊಂಡಿಲ್ಲ. ಎರಡೂ ಮೈತ್ರಿ ಪಕ್ಷಗಳಿಂದ ದೂರ ಉಳಿದುಕೊಂಡಿದೆ. ಈ ಮೊದಲು ಬಿಜೆಪಿ ಜೊತೆ ಬಿಎಸ್ಪಿ ಮೈತ್ರಿ ಬಗ್ಗೆ ಊಹಾಪೋಹಗಳು ಕೂಡ ಭುಗಿಲೆದ್ದಿದ್ದವು. ಬಳಿಕ INDIA ಮೈತ್ರಿ ಕೂಟದ ಜೊತೆ ಸೇರುವ ಬಗ್ಗೆಯೂ ಸುದ್ದಿಯಾಗಿತ್ತು. ಇದರ ಬೆನ್ನಲ್ಲಿ ಸ್ಪಷ್ಟನೆ ನೀಡಿದ್ದ ಬಿಎಸ್ಪಿ ವರಿಷ್ಠೆ ಮಾಯಾವತಿ 2024ರ ಲೋಕಸಭೆ ಚುನಾವಣೆಯಲ್ಲಿ ಪಕ್ಷವು ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಸ್ಪಷ್ಟಪಡಿಸಿದ್ದರು.

Previous Post
ಕಾನ್ಸಾಸ್ ಸಿಟಿಯಲ್ಲಿ ಗುಂಡಿನ ದಾಳಿ: ಓರ್ವ ಸಾವು- ಮಕ್ಕಳು ಸೇರಿದಂತೆ 22 ಮಂದಿಗೆ ಗಾಯ!
Next Post
ನ್ಯಾಯಾಧೀಶರಿಂದ ಲೈಂಗಿಕ ದೌರ್ಜನ್ಯ ಆರೋಪ: ತನಿಖೆಗೆ ಆದೇಶ

Recent News