ರಾಜ್ಯಸಭೆಗೆ ಅವಿರೋಧವಾಗಿ ಸೋನಿಯಾ ಗಾಂಧಿ ಆಯ್ಕೆ

ರಾಜ್ಯಸಭೆಗೆ ಅವಿರೋಧವಾಗಿ ಸೋನಿಯಾ ಗಾಂಧಿ ಆಯ್ಕೆ

ಜೈಪುರ, ಫೆಬ್ರವರಿ 20; ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾದರು. ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಿದ ಬಳಿಕ ‘ನನ್ನ ಹೃದಯ ಮತ್ತು ಆತ್ಮ ಯಾವಾಗಲೂ ನಿಮ್ಮೊಂದಿಗೆ’ ಎಂದು ಸೋನಿಯಾ ರಾಯ್ ಬರೇಲಿ ಮತದಾರರಿಗೆ ಭಾವನಾತ್ಮಕ ಪತ್ರ ಬರೆದಿದ್ದರು. ಆರು ಬಾರಿ ಲೋಕಸಭೆ ಸದಸ್ಯರಾಗಿ ಆಯ್ಕೆಯಾಗಿದ್ದ ಸೋನಿಯಾ ಗಾಂಧಿ (77) ಮೊದಲ ಬಾರಿಗೆ ರಾಜ್ಯಸಭೆ ಸದಸ್ಯೆಯಾಗಿ ಆಯ್ಕೆಯಾಗಿದ್ದಾರೆ. ಆರೋಗ್ಯದ ಕಾರಣದಿಂದ ಈ ಬಾರಿಯ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದ ಸೋನಿಯಾ ಗಾಂಧಿ ರಾಜ್ಯಸಭೆ ಪ್ರವೇಶಿಸಿದ್ದಾರೆ.

ರಾಜಸ್ಥಾನ ವಿಧಾನಸಭೆಯಿಂದ ರಾಜ್ಯಸಭೆ ಸದಸ್ಯರನ್ನು ಆಯ್ಕೆ ಮಾಡಲು ನಡೆಯುವ ಚುನಾವಣೆಗೆ ಕಾಂಗ್ರೆಸ್ ಪಕ್ಷ ಸೋನಿಯಾ ಗಾಂಧಿ ಅಭ್ಯರ್ಥಿ ಎಂದು ಕಾಂಗ್ರೆಸ್ ಪಕ್ಷ ಘೋಷಣೆ ಮಾಡಿತ್ತು. ಪುತ್ರ ರಾಹುಲ್ ಗಾಂಧಿ, ಪುತ್ರಿ ಪ್ರಿಯಾಂಕಾ ವಾದ್ರಾ ಜೊತೆ ಆಗಮಿಸಿ ಅವರು ನಾಮಪತ್ರವನ್ನು ಸಲ್ಲಿಕೆ ಮಾಡಿದ್ದರು.

ಉತ್ತರ ಪ್ರದೇಶದ ರಾಯ್ ಬರೇಲಿ ಕ್ಷೇತ್ರದ ಹಾಲಿ ಸಂಸದೆ ಸೋನಿಯಾ ಗಾಂಧಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಆದ್ದರಿಂದ ಈ ಬಾರಿಯ ಲೋಕಸಭೆ ಚುನಾವಣೆಗೆ ರಾಯ್ ಬರೇಲಿ ಕ್ಷೇತ್ರದಿಂದ ಪ್ರಿಯಾಂಕ್ ವಾದ್ರಾ ಕಣಕ್ಕಿಳಿಯುವ ನಿರೀಕ್ಷೆ ಇದೆ.

ಸೋನಿಯಾ ಗಾಂಧಿ ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸುವಾಗಲೇ ರಾಯ್ ಬರೇಲಿ ಕ್ಷೇತ್ರದಿಂದ ತಮ್ಮ ಕುಟುಂಬ ಸದಸ್ಯರೊಬ್ಬರು ಕಣಕ್ಕಿಳಿಯುವ ಕುರಿತು ಸುಳಿವು ನೀಡಿದ್ದಾರೆ. ರಾಹುಲ್ ಗಾಂಧಿ ಕೇರಳದ ವಯನಾಡು ಕ್ಷೇತ್ರದ ಸಂಸದರು. ಆದ್ದರಿಂದ ಪ್ರಿಯಾಂಕ್ ವಾದ್ರಾ ಕಣಕ್ಕಿಳಿಯುವ ಸಾಧ್ಯತೆ ಇದೆ. 2004ರಿಂದ ರಾಯ ಬರೇಲಿ ಕ್ಷೇತ್ರವನ್ನು ಸೋನಿಯಾ ಗಾಂಧಿ ಪ್ರತಿನಿಧಿಸುತ್ತಿದ್ದಾರೆ. 2019ರ ಚುನಾವಣೆಯಲ್ಲಿ ಅವರು 534,918 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಈಗ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದ ಕಾರಣ ಅವರು ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿದೆ. ರಾಯ ಬರೇಲಿ ಕ್ಷೇತ್ರದ ಜನರಿಗೆ ಭಾವನಾತ್ಮಕ ಪತ್ರವನ್ನು ಬರೆದಿದ್ದ ಸೋನಿಯಾ ಗಾಂಧಿ, “ನಾನು ಇಂದು ಏನಾಗಿದ್ದೆನೆಯೋ ಅದಕ್ಕೆ ಹೆಮ್ಮೆ ಇದೆ. ನಿಮ್ಮಿಂದಾಗಿ ನಾನು ಇಂದು ಇಲ್ಲಿ ನಿಂತಿದ್ದೇನೆ. ನಿಮ್ಮ ನಂಬಿಕೆ ಉಳಿಸಿಕೊಳ್ಳಲು ನನ್ನ ಕೈಲಾದಷ್ಟು ಪ್ರಯತ್ನ ನಡೆಸಿದ್ದೇನೆ ಎಂದು ಹೆಮ್ಮೆಯಿಂದ ಹೇಳುತ್ತೇನೆ. ಈಗಿನ ಆರೋಗ್ಯ ಮತ್ತು ವಯಸ್ಸಿನ ಸಮಸ್ಯೆಗಳ ಕಾರಣಕ್ಕೆ ನಾನು ಮುಂದಿನ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ” ಎಂದು ಹೇಳಿದ್ದರು. “ನನ್ನ ಈ ನಿರ್ಧಾರದಿಂದ ನೇರವಾಗಿ ನಾನು ನಿಮ್ಮ ಸೇವೆ ಮಾಡಲು ಅವಕಾಶ ಸಿಗುವುದಿಲ್ಲ. ಆದರೆ ನನ್ನ ಹೃದಯ ಯಾವಾಗಲೂ ನಿಮ್ಮೊಂದಿಗೆ ಇರುತ್ತದೆ. ಎಂದಿನಂತೆ ನೀವು ಭವಿಷ್ಯದಲ್ಲಿ ನನ್ನ ಮತ್ತು ನನ್ನ ಕುಟುಂಬದ ಬೆಂಬಲಕ್ಕೆ ನಿಲ್ಲುತ್ತೀರಿ ಎಂಬ ವಿಶ್ವಾಸವಿದೆ” ಎಂದು ಸೋನಿಯಾ ಗಾಂಧಿ ಪತ್ರದಲ್ಲಿ ತಿಳಿಸಿದ್ದರು. ಉತ್ತರ ಪ್ರದೇಶದ ರಾಯ್ ಬರೇಲಿ ಮತ್ತು ಅಮೇಥಿ ಕಾಂಗ್ರೆಸ್ ಪಕ್ಷದ ಭದ್ರಕೋಟೆ ಎಂದು ಪ್ರಸಿದ್ಧಿ ಪಡೆದಿದ್ದವು. ಆದರೆ 2019ರಲ್ಲಿ ಅಮೇಥಿಯಲ್ಲಿ ರಾಹುಲ್ ಗಾಂಧಿ ಬಿಜೆಪಿಯ ಸ್ಮೃತಿ ಇರಾನಿ ವಿರುದ್ಧ ಸೋಲು ಕಂಡಿದ್ದರು. ಕೇರಳದ ವಯನಾಡು ಕ್ಷೇತ್ರದಲ್ಲಿ ಅವರು ಗೆಲುವು ಸಾಧಿಸಿದ್ದರು.

Previous Post
ನಮ್ಮದು ಗುಡ್ ಎಕನಾಮಿಕ್ಸ್ ಸಿಎಂ ಸಿದ್ದರಾಮಯ್ಯ
Next Post
110 ಹಳ್ಳಿಗಳಿಗೆ ಮೇ ವೇಳೆಗೆ ಕುಡಿಯಲು ಕಾವೇರಿ ನೀರು: ಡಿಸಿಎಂ ಡಿ.ಕೆ.ಶಿವಕುಮಾರ್

Recent News