ಎಎಪಿಯ ಕುಲದೀಪ್ ಕುಮಾರ್ ಚಂಡೀಗಢ ಮೇಯರ್: ಸುಪ್ರೀಂ ಮಹತ್ವದ ಘೋಷಣೆ

ಎಎಪಿಯ ಕುಲದೀಪ್ ಕುಮಾರ್ ಚಂಡೀಗಢ ಮೇಯರ್: ಸುಪ್ರೀಂ ಮಹತ್ವದ ಘೋಷಣೆ

ನವದೆಹಲಿ, ಫೆ. 20: ಜನವರಿ 30ರಂದು ನಡೆದಿದ್ದ ಚಂಡೀಗಢ ಮುನ್ಸಿಪಲ್ ಕಾರ್ಪೋರೇಷನ್ ಮೇಯರ್ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ)ದ ಕುಲದೀಪ್ ಕುಮಾರ್ ಅವರು ಕಾನೂನುಬದ್ಧ ವಿಜೇತರಾಗಿದ್ದಾರೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಮಹತ್ವದ ಘೋಷಣೆ ಮಾಡಿದೆ. ಈ ಮೂಲಕ ಚುನಾವಣಾಧಿಕಾರಿ ಅನಿಲ್ ಮಾಸಿಹ್ ಅವರು ಎಎಪಿ ಸದಸ್ಯರ ಎಂಟು ಮತಗಳನ್ನು ಉದ್ದೇಶಪೂರ್ವಕವಾಗಿ ಅಮಾನ್ಯಗೊಳಿಸಿದ್ದರಿಂದ ಉಂಟಾಗಿದ್ದ ವಿವಾದಕ್ಕೆ ಅಂತ್ಯ ಹಾಡಿದೆ.

ಚುನಾವಣೆಯಲ್ಲಿ ಅಕ್ರಮ ಎಸಗಿದ ಬಿಜೆಪಿ ಅಲ್ಪಸಂಖ್ಯಾತ ಸೆಲ್‌ನ ಮಾಜಿ ಸದಸ್ಯರಾಗಿರುವ ಚುನಾವಣಾಧಿಕಾರಿ ಅನಿಲ್ ಮಾಸಿಹ್ ವಿರುದ್ದ ಕ್ರಮ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್‌ ಸೂಚಿಸಿದೆ. 8 ಮತಪತ್ರಗಳು ವಿರೂಪಗೊಂಡಿದ್ದರಿಂದ ಅವುಗಳ ಮೇಲೆ ಗುರುತು ಹಾಕಿದೆ ಎಂದು ನ್ಯಾಯಾಲಯಕ್ಕೆ ಸುಳ್ಳು ಹೇಳಿದ್ದ ಅನಿಲ್ ಮಾಸಿಹ್ ವಿರುದ್ದ ಸಿಆರ್‌ಪಿಸಿ ಸೆಕ್ಷನ್ 340 ಅಡಿಯಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಮುಖ್ಯ ನ್ಯಾಯಮೂರ್ತಿ ಆದೇಶಿಸಿದ್ದಾರೆ.

ಸುಪ್ರೀಂ ಕೋರ್ಟ್‌ನ ಮಹತ್ವದ ತೀರ್ಪಿನಿಂದ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಪಣ ತೊಟ್ಟಿರುವ ಇಂಡಿಯಾ ಮೈತ್ರಿಕೂಟಕ್ಕೆ ದೊಡ್ಡ ಮಟ್ಟದ ಗೆಲುವು ಸಿಕ್ಕಿದಂತಾಗಿದೆ. ಏಕೆಂದರೆ, ಚಂಡೀಗಢ ಮೇಯರ್ ಚುನಾವಣೆಯನ್ನು ಇಂಡಿಯಾ ಮೈತ್ರಿಕೂಟದ ಮೊದಲ ಸವಾಲು ಎಂದು ಪರಿಗಣಿಸಲಾಗಿತ್ತು. ಚುನಾವಣಾಧಿಕಾರಿ ಅನಿಲ್ ಮಾಸಿಹ್ ಅವರು ಅಸಿಂಧು ಎಂದು ಘೋಷಿಸಿದ್ದ ಎಎಪಿ ಸದಸ್ಯರ ಎಂಟು ಮತಗಳನ್ನು ಮಾನ್ಯವೆಂದು ಸುಪ್ರೀಂ ಕೋರ್ಟ್‌ ಘೋಷಿಸಿದೆ. ಈ ಮೂಲಕ ಎಎಪಿ-ಕಾಂಗ್ರೆಸ್‌ನ ಮೈತ್ರಿ ಅಭ್ಯರ್ಥಿ ಕುಲದೀಪ್ ಕುಮಾರ್ ಅವರು 20 ಮತಗಳೊಂದಿಗೆ ಚಂಡೀಗಢ ಮುನ್ಸಿಪಲ್ ಕಾರ್ಪೋರೇಷನ್‌ನ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.

Previous Post
ರಾಹುಲ್‌ ಗಾಂಧಿಗೆ ಜಾಮೀನು ಮಂಜೂರು
Next Post
ಕಾಂಗ್ರೆಸ್‌- ಎಎಪಿ ಸೀಟು ಹಂಚಿಕೆ ಯಶಸ್ವಿ

Recent News