ಭೂರಹಿತ ದಲಿತ ಕಾರ್ಮಿಕರಿಂದ ಹಕ್ಕಿಗಾಗಿ ಹೋರಾಟ

ಭೂರಹಿತ ದಲಿತ ಕಾರ್ಮಿಕರಿಂದ ಹಕ್ಕಿಗಾಗಿ ಹೋರಾಟ

ಅಮೃತಸರ, ಫೆ.24: ಎಂಎಸ್‌ಪಿ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ‘ದೆಹಲಿ ಚಲೋ’ ಪ್ರತಿಭಟನೆ ನಡೆಯುತ್ತಿದೆ. ಪಂಜಾಬ್ ರೈತರು ದಿಲ್ಲಿ ಚಲೋ ಮೆರವಣಿಗೆಯ ಭಾಗವಾಗಿ ದೆಹಲಿಯತ್ತ ಸಾಗಲು ಹರಿಯಾಣ ಗಡಿಯಲ್ಲಿ ಮೊಕ್ಕಾಂ ಹೂಡಿದ್ದಾರೆ. ಈ ಮಧ್ಯೆ ಪಂಜಾಬ್‌ನ ಭೂರಹಿತ ರೈತರು, ಕೂಲಿ ಕಾರ್ಮಿಕರು ‘ಮಜ್ದೂರ್ ಪೈದಲ್ ಜೋಡೋ ಯಾತ್ರೆ’ ಪ್ರತಿಭಟನೆಯನ್ನು ಪ್ರಾರಂಭಿಸಿದ್ದಾರೆ. ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾಲ್ನಡಿಗೆಯಲ್ಲಿ ಮತ್ತು ಸೈಕಲ್‌ನಲ್ಲಿ ಒಂದು ಗ್ರಾಮದಿಂದ ಮತ್ತೊಂದು ಗ್ರಾಮಕ್ಕೆ ತೆರಳುತ್ತಿದ್ದಾರೆ.

ಮಹಿಳೆಯರು, ಭೂರಹಿತ ರೈತರು ಮತ್ತು ದೈನಂದಿನ ಕೂಲಿ ಕಾರ್ಮಿಕರು ಈ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದಾರೆ. ಪ್ರತಿಭಟನಾಕಾರರಲ್ಲಿ ಹೆಚ್ಚಾಗಿ ದಲಿತ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಭೂ ಮಾಲೀಕತ್ವದ ಹಕ್ಕುಗಳು, ಮನೆ, ಸಾಲ-ಮನ್ನಾ, ಯೋಗ್ಯ ವೇತನ ಮತ್ತು ಜಾತಿ ಆಧಾರಿತ ತಾರತಮ್ಯವನ್ನು ಕೊನೆಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಪ್ರತಿಭಟನಾಕಾರರು ಒತ್ತಾಯಿಸುತ್ತಿದ್ದಾರೆ.

ಪೆಂಡು ಮಜ್ದೂರ್ ಯೂನಿಯನ್, ಪಂಜಾಬ್ ಮತ್ತು ಜಮೀನ್ ಪ್ರಾಪ್ತಿ ಸಂಘರ್ಷ ಸಮಿತಿಯಂತಹ ಒಕ್ಕೂಟಗಳು ಪ್ರತಿಭಟನೆಯಲ್ಲಿ ಭಾಗವಹಿಸಿದೆ. ಈ ಯಾತ್ರೆಯು ಪ್ರಸ್ತುತ ಜಲಂಧರ್, ಹೋಶಿಯಾರ್‌ಪುರ ಮತ್ತು ಮೊಗಾ ಜಿಲ್ಲೆಗಳಲ್ಲಿ ನಡೆಯುತ್ತಿದೆ. ಇದಲ್ಲದೆ ಈ ಸಂಘಟನೆಗಳು ಮಾರ್ಚ್ 11ರಂದು ರಾಜ್ಯಾದ್ಯಂತ ‘ರೈಲ್ ರೋಕೋ’ ಪ್ರತಿಭಟನೆಯನ್ನು ಘೋಷಿಸಿವೆ. ಪೆಂಡು ಮಜ್ದೂರ್ ಯೂನಿಯನ್ ಮಾದ್ಯಮ ಕಾರ್ಯದರ್ಶಿ ಕಾಶ್ಮೀರ್ ಸಿಂಗ್ ಘುಶೋರ್ ಈ ಬಗ್ಗೆ ಮಾತನಾಡಿದ್ದು, ಭೂರಹಿತ ಮತ್ತು ದಲಿತ ಕಾರ್ಮಿಕರು ಮತ್ತು ಇತರ ಸೌಲಭ್ಯ ವಂಚಿತ ವರ್ಗಗಳು ಕಾಲ್ನಡಿಗೆಯಲ್ಲಿ ಮತ್ತು ಸೈಕಲ್‌ಗಳಲ್ಲಿ ಜಾಥಾ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಸತತ ಬೇಡಿಕೆಗಳ ಮಧ್ಯೆಯು ಸರಕಾರವು ಹಲವಾರು ವರ್ಷಗಳಿಂದ ಈಡೇರಿಸದಿರುವ ಬೇಡಿಕೆ ಬಗ್ಗೆ ಧ್ವನಿ ಎತ್ತುವುದಾಗಿ ಹೇಳಿದ್ದಾರೆ.

ನಮ್ಮ ಪ್ರಮುಖ ಬೇಡಿಕೆಗಳಲ್ಲಿ ಭೂಮಿಯ ಹಕ್ಕು ಮತ್ತು ಮನೆ ಮಾಲೀಕತ್ವ ಪ್ರಮುಖವಾದಂತಹ ಬೇಡಿಕೆಯಾಗಿದೆ. ಪಂಜಾಬ್ ಲ್ಯಾಂಡ್ ಸೀಲಿಂಗ್ ಆಕ್ಟ್ ಪ್ರಕಾರ, ಒಂದು ಕುಟುಂಬವು 17.5 ಎಕರೆಗಿಂತ ಹೆಚ್ಚಿನ ಕೃಷಿ ಭೂಮಿಯನ್ನು ಹೊಂದುವಂತಿಲ್ಲ. ಹೀಗಾಗಿ ಹೆಚ್ಚುವರಿ ಭೂಮಿಯನ್ನು ಭೂ ರಹಿತರಿಗೆ ಹಂಚಿಕೆ ಮಾಡಲು ಸರ್ಕಾರಕ್ಕೆ ನೀಡಬೇಕು. ಪಂಜಾಬ್ ಸರ್ಕಾರದ ‘ಮೇರಾ ಘರ್, ಮೇರೆ ನಾಮ್’ ಯೋಜನೆಯಡಿ, ಗ್ರಾಮಗಳ ‘ಲಾಲ್ ದೋರಾ’ ವ್ಯಾಪ್ತಿಯಲ್ಲಿ ವಾಸಿಸುವ ಎಲ್ಲಾ ಎಸ್‌ಸಿ ಕುಟುಂಬಗಳಿಗೆ ಅವರ ಮನೆಗಳ ಮಾಲೀಕತ್ವವನ್ನು ನೀಡಲಾಗುವುದು ಎಂದು ಭರವಸೆ ನೀಡಿತ್ತು, ಆದರೆ ಇಲ್ಲಿಯವರೆಗೆ ನೋಂದಣಿ ಪ್ರಕ್ರಿಯೆ ಮಾಡಲಾಗಿಲ್ಲ. ಶ್ರೀಮಂತರಿಗೆ ಮಾತ್ರವಲ್ಲ, ನಮ್ಮಂತಹ ಬಡವರಿಗೆ ಭೂಮಿ ಮತ್ತು ಮನೆಯ ಮೇಲೆ ಸಮಾನ ಹಕ್ಕುಗಳಿವೆ ಎಂದು ಘುಶೋರ್ ಹೇಳಿದ್ದಾರೆ. 1957ರಲ್ಲಿ ಅಖಿಲ ಭಾರತ ಕಾರ್ಮಿಕ ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯದಂತೆ ತಮ್ಮ ದಿನಗೂಲಿಯಲ್ಲಿ ಕನಿಷ್ಠ 1,000 ರೂ.ಗಳ ಹೆಚ್ಚಳ, ಭಾನುವಾರದಂದು ಪಾವತಿ ವಾರದ ರಜೆಯ ಹಕ್ಕು, ಸರ್ಕಾರ, ಸಹಕಾರಿ ಸಂಸ್ಥೆಗಳ ಸಾಲ ಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದ್ದಾರೆ.

Previous Post
ಕಾಂಗ್ರೆಸ್‌- ಎಎಪಿ ಸೀಟು ಹಂಚಿಕೆ ಯಶಸ್ವಿ
Next Post
ಭಾರತೀಯ ವಿದ್ಯಾರ್ಥಿನಿಯ ಕೊಂದ ಯುಎಸ್ ಅಧಿಕಾರಿ ವಿರುದ್ಧ ಕ್ರಮ ಯಾಕಿಲ್ಲ?

Recent News