ರೈತರ ದೆಹಲಿ ಚಲೋ ದೇಶದಾದ್ಯಂತ ವಿಸ್ತರಿಸುವ ಸಾಧ್ಯತೆ

ರೈತರ ದೆಹಲಿ ಚಲೋ ದೇಶದಾದ್ಯಂತ ವಿಸ್ತರಿಸುವ ಸಾಧ್ಯತೆ

ನವದೆಹಲಿ : ಖಾನೌರಿ ಗಡಿಯಲ್ಲಿ ಯುವ ರೈತ ಶುಭಕರಣ್‌ ಸಿಂಗ್ ಸಾವಿಗೆ ಸಂಬಂಧಿಸಿದಂತೆ ಪೊಲೀಸ್ ಕೇಸ್‌ಗೆ ಒತ್ತಾಯಿಸಿ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ನಿನ್ನೆ “ಬ್ಲಾಕ್‌ ಪ್ರೈ ಡೇ( ಕರಾಳ ಶುಕ್ರವಾರ)”ವನ್ನು ಆಚರಿಸಿದೆ. ಇದಲ್ಲದೆ ರೈತರ ಬೇಡಿಕೆಗಳನ್ನು ಬೆಂಬಲಿಸಿ ಫೆಬ್ರವರಿ 26ರಂದು ದೇಶಾದ್ಯಂತ ಹೆದ್ದಾರಿಗಳಲ್ಲಿ ಟ್ರಾಕ್ಟರ್ ಮೆರವಣಿಗೆ ನಡೆಸಲಾಗುವುದು ಎಂದು ರೈತ ಮುಖಂಡ ರಾಕೇಶ್ ಟಿಕಾಯತ್‌ ಘೋಷಿಸಿದ್ದು, ರೈತರ ದೆಹಲಿ ಚಲೋ ದೇಶದಾದ್ಯಂತ ವಿಸ್ತರಿಸುವ ಸಾಧ್ಯತೆ ಇದೆ.

ಪಂಜಾಬ್ ಮತ್ತು ಹರಿಯಾಣ ಶಂಭು ಮತ್ತು ಖಾನೌರಿ ಗಡಿಯಲ್ಲಿ ರೈತರು ಮತ್ತು ಪೊಲೀಸರ ನಡುವಿನ ಹಿಂಸಾತ್ಮಕ ಘರ್ಷಣೆಗೆ ಸಂಬಂಧಿಸಿದಂತೆ ಎಸ್‌ಕೆಎಂ ರಾಷ್ಟ್ರೀಯ ಸಮನ್ವಯ ಸಮಿತಿ ಸಭೆಯಲ್ಲಿ ಭಾಗವಹಿಸಲು ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ವಿವಿಧ ರಾಜ್ಯಗಳ ಹಲವಾರು ರೈತ ಮುಖಂಡರು ಭಾಗವಹಿಸಿದ್ದರು. ಈ ವೇಳೆ ಪಂಜಾಬ್‌ನ ಸರ್ಕಾರ ಯುವ ರೈತ ಶುಭಕರನ್‌ಗೆ ಹುತಾತ್ಮ ಸ್ಥಾನಮಾನ ನೀಡಬೇಕು ಮತ್ತು ಅವರ ಕುಟುಂಬಕ್ಕೆ 1 ಕೋಟಿ ರೂಪಾಯಿ ಆರ್ಥಿಕ ನೆರವು ನೀಡಬೇಕು ಎಂದು ರೈತ ಮುಖಂಡರು ಒತ್ತಾಯಿಸಿದ್ದಾರೆ. ಇದಲ್ಲದೆ ರೈತ ಸಂಘಗಳು ಮಾರ್ಚ್ 14ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಕಿಸಾನ್ ಮಹಾಪಂಚಾಯತ್‌ನ್ನು ಸಹ ನಡೆಸಲಿವೆ ಎಂದು ರೈತ ಮುಖಂಡರು ತಿಳಿಸಿದ್ದಾರೆ.

ಸಂಯುಕ್ತ ಕಿಸಾನ್‌ ಮೋರ್ಚಾ ನೇತೃತ್ವದಲ್ಲಿ ರೈತರು ಕೇಂದ್ರ ಗೃಹಸಚಿವ ಅಮಿತ್ ಶಾ, ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಮತ್ತು ರಾಜ್ಯ ಗೃಹಸಚಿವ ಅನಿಲ್ ವಿಜ್ ಅವರ ಪ್ರತಿಕೃತಿಗಳನ್ನೂ ಸುಟ್ಟುಹಾಕಿದ್ದಾರೆ. ಪ್ರತಿಭಟನಾನಿರತ ಶುಭಕರಣ್‌ ಸಿಂಗ್ ‘ಹತ್ಯೆ ’ಗಾಗಿ ಹರ್ಯಾಣ ಮುಖ್ಯಮಂತ್ರಿ ಗೃಹಸಚಿವರ ವಿರುದ್ಧ ಪ್ರಕರಣವನ್ನು ದಾಖಲಿಸಬೇಕು ಎಂದು ಎಸ್‌ಕೆಎಂ ಆಗ್ರಹಿಸಿದೆ.

ಈ ಮಧ್ಯೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್‌ ಈಗಾಗಲೇ ಘಟನೆಯನ್ನು ಖಂಡಿಸಿದ್ದಾರೆ ಮತ್ತು ಸಾವಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಮತ್ತು ಮರಣೋತ್ತರ ಪರೀಕ್ಷೆಯ ನಂತರ ಪ್ರಕರಣವನ್ನು ದಾಖಲಿಸಲಾಗುವುದು ಎಂದು ಹೇಳಿದ್ದಾರೆ. ಶುಕ್ರವಾರ ಪಂಜಾಬ್-ಹರಿರ್ಯಾಣ ಗಡಿಯಲ್ಲಿ ‘ದೆಹಲಿ ಚಲೋ’ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಓರ್ವ ರೈತ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ. ಶಂಭು ಮತ್ತು ಖಾನೌರಿಯಲ್ಲಿ ಪೊಲೀಸ್ ಬ್ಯಾರಿಕೇಡ್‌ಗಳನ್ನು ತೆರವುಗೊಳಿಸಲು ಮುಂದಾದ ರೈತರ ಮೇಲೆ ಪೊಲೀಸರು ಅಶ್ರವಾಯು ಸಿಡಿಸಿದ್ದಾರೆ.

ನಾಲ್ಕನೇ ಸುತ್ತಿನ ಮಾತುಕತೆಯಲ್ಲಿ ಸರ್ಕಾರದ ಪ್ರಸ್ತಾವನೆಯನ್ನು ರೈತ ಮುಖಂಡರು ತಿರಸ್ಕರಿಸಿದ ಬಳಿಕ ದೆಹಲಿ ಚಲೋ ಪ್ರತಿಭಟನೆ ಮರು ಪ್ರಾರಂಭವಾಗಿತ್ತು. ಶುಕ್ರವಾರ 62ವರ್ಷದ ರೈತ ದರ್ಶನ್ ಸಿಂಗ್ ಅವರು ಖಾನೌರಿ ಗಡಿಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು. ಇವರು ದೆಹಲಿ ಚಲೋ ಪ್ರತಿಭಟನೆಯಲ್ಲಿ ಮೃತಪಟ್ಟ ಐದನೇ ಪ್ರತಿಭಟನಾಕಾರರಾಗಿದ್ದಾರೆ. ಸಿಂಗ್ ಕುಟುಂಬವು ಸುಮಾರು ಎಂಟು ಎಕರೆ ಜಮೀನಿನ ಜೊತೆಗೆ ಎಂಟು ಲಕ್ಷ ರೂ.ಗಳ ಸಾಲದ ಹೊರೆಯನ್ನೂ ಹೊಂದಿದೆ. ಸಿಂಗ್ ಗುರುವಾರ ರಾತ್ರಿ 11 ಗಂಟೆಯ ಸುಮಾರಿಗೆ ಪ್ರತಿಭಟನಾ ಸ್ಥಳದಲ್ಲಿ ಕುಸಿದು ಬಿದ್ದು ಪ್ರಜ್ಞಾಹೀನರಾಗಿದ್ದರು. ಅವರನ್ನು ತಕ್ಷಣವೇ ಸಮೀಪದ ಪತ್ರನ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಾಗಿಸಲಾಗಿತ್ತು. ಅಲ್ಲಿಯ ವೈದ್ಯರ ಸಲಹೆಯ ಮೇರೆಗೆ ಪಟಿಯಾಲಾದ ಸರಕಾರಿ ರಾಜಿಂದ್ರ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಆ ವೇಳೆಗಾಗಲೇ ಅವರು ಕೊನೆಯುಸಿರೆಳೆದಿದ್ದರು.

ರೈತರು ಮತ್ತು ಪೊಲೀಸರ ನಡುವಿನ​ ಘರ್ಷಣೆಯಲ್ಲಿ ಸುಮಾರು 12 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಕೇಂದ್ರ ಸಚಿವರ 3 ಸದಸ್ಯರ ಸಮಿತಿಯನ್ನು ರಚಿಸಿದೆ ಮತ್ತು ರೈತರೊಂದಿಗೆ ಮಾತುಕತೆ ನಡೆಸುತ್ತಿದೆ. ಕೇಂದ್ರ ಕೃಷಿ ಸಚಿವ ಅರ್ಜುನ್ ಮುಂಡಾ, ರೈತ ಮುಖಂಡರಲ್ಲಿ ಮಾತುಕತೆ ಮೂಲಕ ಸಮಸ್ಯೆ ಈಡೇರಿಕೆಗೆ ಆಗ್ರಹಿಸಿದ್ದಾರೆ. ಇದೇ ವೇಳೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾತನಾಡಿ, ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ.

Previous Post
ಮುಸ್ಲಿಂ ವಿವಾಹ ಮತ್ತು ವಿಚ್ಛೇದನ ನೋಂದಣಿ ಕಾಯ್ದೆ, 1935 ರದ್ದು ಅಸ್ಸಾಂ ಸರ್ಕಾರದಿಂದ ಮಹತ್ವದ ಆದೇಶ
Next Post
ಕಾಂಗ್ರೆಸ್‌ಗೆ ಹಿನ್ನಡೆ; ಪಶ್ಚಿಮ ಬಂಗಾಳದ ಎಲ್ಲಾ 42 ಸ್ಥಾನಗಳಲ್ಲಿ ಸ್ಪರ್ಧೆಗೆ ಟಿಎಂಸಿ ನಿರ್ಧಾರ

Recent News