‘ಇಂಡಿಯಾ’ ಮೈತ್ರಿಕೂಟದಲ್ಲಿ ಮತ್ತೆ ಮಿಂಚು

‘ಇಂಡಿಯಾ’ ಮೈತ್ರಿಕೂಟದಲ್ಲಿ ಮತ್ತೆ ಮಿಂಚು

ದಿನೇ ದಿನೇ ‘ಇಂಡಿಯಾ’ ಮೈತ್ರಿಕೂಟ ದುರ್ಬಲವಾಗುತ್ತಿದೆ ಎನ್ನುವ ವಾತಾವರಣದ ನಡುವೆ ದಿಢೀರನೆ ಕಾಂಗ್ರೆಸ್ ಪಕ್ಷದ ಪಾಳೆಯದಲ್ಲಿ ಪಾಸಿಟಿವ್ ವೈಬ್ ಕಾಣಿಸಿಕೊಂಡಿದೆ. ಮೊದಲನೆಯದಾಗಿ ರಾಹುಲ್ ಗಾಂಧಿ ಅವರ ನೇತೃತ್ವದ ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ಯ ಮಧ್ಯಪ್ರದೇಶದ ಲೆಗ್‌ನಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಕಮಲ್ ನಾಥ್ ಭಾಗವಹಿಸಲಿದ್ದಾರೆ ಎಂದು ಗೊತ್ತಾಗಿದೆ. ಮಾರ್ಚ್ 2ರಂದು ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ಯ ಮಧ್ಯಪ್ರದೇಶದ ಗ್ವಾಲಿಯರ್ ತಲುಪಲಿದ್ದು ಅಂದಿನಿಂದ ಮಾರ್ಚ್ 6ರವರೆಗೆ ಮಧ್ಯಪ್ರದೇಶದ ಗ್ವಾಲಿಯರ್, ಶಿವಪುರಿ, ಗುನಾ, ರಾಜ್‌ಗಢ, ಶಾಜಾಪುರ, ಉಜ್ಜಯಿನಿ, ಧಾರ್ ಮತ್ತು ರತ್ಲಂಗಳಲ್ಲಿ ಸಂಚರಿಸಲಿದೆ. ಅಷ್ಟೂ ದಿನ ಕಮಲನಾಥ್ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಇತ್ತೀಚೆಗೆ ಕಮಲ್ ನಾಥ್ ಮತ್ತು ಅವರ ಚಿಂದ್ವಾರ ಸಂಸದ ಪುತ್ರ ನಕುಲ್ ನಾಥ್ ಆಡಳಿತಾರೂಢ ಭಾರತೀಯ ಜನತಾ ಪಕ್ಷವನ್ನು ಸೇರಲು ಯೋಜಿಸುತ್ತಿದ್ದಾರೆ ಎಂಬ ಊಹಾಪೋಹಗಳು ಜೋರಾಗಿ ಸದ್ದು ಮಾಡಿದ್ದವು. ಈ ನಡುವೆ ಕಮಲ್ ನಾಥ್ ಅವರ ಭದ್ರಕೋಟೆಯಾದ ಛಿಂದ್ವಾರಾದ ಹಲವಾರು ಕಾಂಗ್ರೆಸ್ ಸದಸ್ಯರು ಬುಧವಾರ ಮುಖ್ಯಮಂತ್ರಿ ಮೋಹನ್ ಯಾದವ್ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ್ದ ಮೋಹನ್ ಯಾದವ್, ಇನ್ನೂ ಅನೇಕರು ಬಿಜೆಪಿ ಸೇರುತ್ತಾರೆ ಎಂದು ಹೇಳಿದ್ದರು. ಆದರೀಗ ಕಮಲನಾಥ್ ಅವರು ರಾಹುಲ್ ಗಾಂಧಿ ಅವರ ನೇತೃತ್ವದ ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ಯಲ್ಲಿ ಪಾಲ್ಗೊಳ್ಳುವ ಮೂಲಕ ಬಿಜೆಪಿ ಸೇರುವ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ.
ಇದಲ್ಲದೆ ಚಂಡೀಗಢ ಮೇಯರ್ ಚುನಾವಣೆಯಲ್ಲಿ ಕಾನೂನು ಸಮರ ನಡೆಸಿ ‘ಇಂಡಿಯಾ’ ಮೈತ್ರಿಕೂಟ ಗೆಲುವು ದಾಖಲಿಸಿರುವುದು ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಶಕ್ತಿ ಬಂದಂತಾಗಿದೆ. ಈ ಗೆಲುವಿನ ನಂತರ ಒಂದರ ಮೇಲೆ ಒಂದು ಧನಾತ್ಮಕ ಬೆಳವಣಿಗೆಗಳು ಘಟಿಸುತ್ತಿವೆ. ಮುಂಬರುವ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಜೊತೆ ಜಂಟಿ ಹೋರಾಟ ನಡೆಸಲು ಆಮ್‌ ಆದ್ಮಿ ಪಕ್ಷ (ಎಎಪಿ) ಒಪ್ಪಿಕೊಂಡಿದೆ. ಮೂರು ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಾಂಗ್ರೆಸ್ ಮತ್ತು ಆಮ್‌ ಆದ್ಮಿ ಪಕ್ಷದ ನಡುವೆ ಸೀಟು ಹಂಚಿಕೆ ಯಶಸ್ವಿಯಾಗಿ ನಡೆದಿದೆ. ಗುಜರಾತ್, ಹರಿಯಾಣ, ಗೋವಾ ರಾಜ್ಯಗಳು ಮತ್ತು ದೆಹಲಿ, ಚಂಡೀಗಢ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸೀಟು ಹಂಚಿಕೆಯಾಗಿದೆ. ಈ ಕುರಿತು ಎರಡು ಪಕ್ಷಗಳು ಈಗಾಗಲೇ ಜಂಟಿ ಘೋಷಣೆಯನ್ನೂ ಮಾಡಿವೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಎಎಪಿ ಮತ್ತು ಕಾಂಗ್ರೆಸ್ 4:3 ಅನುಪಾತದಲ್ಲಿ ಸೀಟು ಹಂಚಿಕೊಂಡಿವೆ. ಒಟ್ಟು ಏಳು ಲೋಕಸಭಾ ಕ್ಷೇತ್ರಗಳ ಪೈಕಿ ಪಶ್ಚಿಮ ದೆಹಲಿ, ದಕ್ಷಿಣ ದೆಹಲಿ, ಪೂರ್ವ ದೆಹಲಿ ಮತ್ತು ನವದೆಹಲಿ ಕ್ಷೇತ್ರಗಳಲ್ಲಿ ಎಎಪಿ ಸ್ಪರ್ಧಿಸಲಿದೆ. ಈಶಾನ್ಯ ದೆಹಲಿ, ವಾಯುವ್ಯ ದೆಹಲಿ ಮತ್ತು ಚಾಂದಿನಿ ಚೌಕ್‌ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ಪರ್ಧಿಸಲಿದೆ. 2019ರ ಚುನಾವಣೆಯಲ್ಲಿ ಬಿಜೆಪಿ ಈ ಎಲ್ಲಾ ಏಳು ಸ್ಥಾನಗಳನ್ನು ಗೆದ್ದಿತ್ತು. ಒಟ್ಟು 26 ಲೋಕಸಭಾ ಕ್ಷೇತ್ರಗಳಿರುವ ಗುಜರಾತ್‌ನಲ್ಲಿ ಭರೂಚ್ ಮತ್ತು ಭಾವನಗರಲ್ಲಿ ಆಮ್‌ ಆದ್ಮಿ ಪಕ್ಷ ಸ್ಪರ್ಧಿಸಲಿದೆ. ಉಳಿದ 24 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಸ್ಪರ್ಧೆ ಮಾಡಲಿದೆ. ಹರಿಯಾಣದ 10 ಕ್ಷೇತ್ರಗಳ ಪೈಕಿ 9ರಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಹಾಕಲಿದೆ. ಕುರುಕ್ಷೇತ್ರ ಸೀಟಿನಲ್ಲಿ ಮಾತ್ರ ಆಮ್‌ ಆದ್ಮಿ ಪಕ್ಷ ಸ್ಪರ್ಧಿಸಲಿದೆ. ಗೋವಾದ ಎರಡು ಕ್ಷೇತ್ರಗಳು ಮತ್ತು ಚಂಡೀಗಢದ ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್ ಮಾತ್ರ ಸ್ಪರ್ಧಿಸಲಿದೆ. ಆಮ್‌ ಆದ್ಮಿ ಪಕ್ಷ ಕಳೆದ ವಾರ ದಕ್ಷಿಣ ಗೋವಾಕ್ಕೆ ಅಭ್ಯರ್ಥಿಯನ್ನು ಘೋಷಿಸಿತ್ತು. ತನ್ನ ಮಿತ್ರಪಕ್ಷ ಕಾಂಗ್ರೆಸ್‌ಗೆ ದಾರಿ ಮಾಡಿಕೊಡಲು ಅದನ್ನು ಹಿಂಪಡೆಯಲಿದೆ.
ಮತ್ತೊಂದು ಮಹತ್ವದ ಬೆಳವಣಿಗೆಯಲ್ಲಿ ಉತ್ತರ ಪ್ರದೇಶದಿಂದಲೂ ಕಾಂಗ್ರೆಸ್ ಪಾಳೆಯಕ್ಕೆ ಶುಭಾಸುದ್ದಿ ಲಭಿಸಿದೆ. ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಮೈತ್ರಿ ಯಶಸ್ವಿಯಾಗಿದೆ. ಆರಂಬದಲ್ಲಿ ಸೀಟು ಹಂಚಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳ ನಡುವೆ ಇದ್ದ ಕೆಲವು ಭಿನ್ನಾಭಿಪ್ರಾಯಗಳು ಈಗ ಬಗೆಹರಿದಿವೆ. ಹಲವು ಸುತ್ತಿನ ಮಾತುಕತೆಯ ನಂತರ ಎರಡು ಪಕ್ಷಗಳ ದೋಸ್ತಿಗೆ ಅಂತಿಮ ಮುದ್ರೆ ಒತ್ತಲಾಗಿದೆ. ಇದನ್ನು ಸಮಾಜವಾದಿ ಪಕ್ಷದ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹಾಗೂ ಕಾಂಗ್ರೆಸ್ ಉತ್ತರ ಪ್ರದೇಶ ಉಸ್ತುವಾರಿ ಅವಿನಾಶ್ ಪಾಂಡೆ ಕಳೆದ ಬುಧವಾರ ಅಧಿಕೃತವಾಗಿಯೇ ಘೋಷಣೆ ಮಾಡಿದ್ದಾರೆ.
80 ಲೋಕಸಭೆ ಕ್ಷೇತ್ರಗಳನ್ನು ಹೊಂದಿರುವ ದೇಶದ ಅತಿದೊಡ್ಡ ರಾಜ್ಯವಾಗಿರುವ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳ ನಡುವೆ ಮೈತ್ರಿ ಯಶಸ್ವಿಯಾಗಿ ಆಗಿರುವುದು ನಿರ್ಣಾಯಕವಾದುದಾಗಿದೆ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ 17 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದು, ಉಳಿದ 63 ಸ್ಥಾನಗಳಲ್ಲಿ ಸಮಾಜವಾದಿ ಮತ್ತಿತರ ಮಿತ್ರಪಕ್ಷಗಳು ಸ್ಪರ್ಧೆ ಮಾಡಲಿವೆ. ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳ ನಡುವೆ ಮೈತ್ರಿ ಸಾಧ್ಯವಾಗಲು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರೊಂದಿಗೆ ಪ್ರಿಯಾಂಕಾ ಗಾಂಧಿ ನೇರವಾಗಿ ಮಾತನಾಡಿ ಸಮಸ್ಯೆ ಬಗೆಹರಿಸಿದ್ದಾರೆ ಎನ್ನಲಾಗಿದೆ. ಈ ಬೆಳವಣಿಗೆಯಿಂದಾಗಿ ‘ಇಂಡಿಯಾ’ ಮೈತ್ರಿಕೂಟಕ್ಕೆ ಇದ್ದ ದೊಡ್ಡ ತಲೆನೋವು ನಿವಾರಣೆಯಾದಂತಾಗಿದೆ.
ಆರಂಭದಲ್ಲಿ ಮಾಯಾವತಿ ನೇತೃತ್ವದ ಬಹುಜನ ಸಮಾಜವಾದಿ ಪಕ್ಷವನ್ನು ‘ಇಂಡಿಯಾ’ ಮೈತ್ರಿಕೂಟಕ್ಕೆ ಸೇರಿಸಿಕೊಳ್ಳಲು ಕಾಂಗ್ರೆಸ್ ಉತ್ಸಾಹಕವಾಗಿತ್ತು. ಕಳೆದವಾರ ಸ್ವತಃ ಮಾಯಾವತಿಯವರೇ ತಮ್ಮ ಬಹುಜನ ಸಮಾಜವಾದಿ ಪಕ್ಷ ಉತ್ತರ ಪ್ರದೇಶದಲ್ಲಿ ಸ್ವತಂತ್ರವಾಗಿ ಸ್ಪರ್ಧೆ ಮಾಡಲಿದೆ. ‘ಇಂಡಿಯಾ’ ಮೈತ್ರಿಕೂಟಕ್ಕೆ ಬಹುಜನ ಸಮಾಜವಾದಿ ಪಕ್ಷ ಬೆಂಬಲ ನೀಡುವುದಿಲ್ಲ ಎಂದು ಘೋಷಿಸಿದರು. ಇದರ ಬೆನ್ನಲ್ಲೇ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಅಖಿಲೇಶ್ ಯಾದವ್ ಅವರನ್ನು ಸಂಪರ್ಕಿಸಿ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳ ನಡುವೆ ಮೈತ್ರಿ ಮಾತುಕತೆ ನಡೆಸಿದ್ದಾರೆ. ಬಹುಜನ ಸಮಾಜವಾದಿ ಪಕ್ಷದ ಬಗ್ಗೆ ಕಾಂಗ್ರೆಸ್ ತನ್ನ ಖಚಿತ ನಿಲುವು ತಿಳಿಸಿದ ಮೇಲೆ ಅಖಿಲೇಶ್ ಯಾದವ್ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳ ನಡುವೆ ಮೈತ್ರಿಗೆ ಹಸಿರು ನಿಶಾನೆ ತೋರಿದ್ದಾರೆ ಎಂದು ತಿಳಿದುಬಂದಿದೆ.

Previous Post
ಬೇಸಿಗೆಯಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ಕ್ರಮ: ಸಚಿವ ಶಿವರಾಜ್ ತಂಗಡಗಿ
Next Post
ಚುನಾವಣಾ ದಿನಾಂಕ ಬಿಡುಗಡೆಗೂ ಮುನ್ನ ಯುಪಿಯಲ್ಲಿ ಬಿಜೆಪಿ ಅಭ್ಯರ್ಥಿಗಳ ಘೋಷಣೆ?

Recent News