ಹೊಸ ಸರ್ಕಾರದ ಕೆಲಸಕ್ಕೆ ತಯಾರಿ ಆರಂಭಿಸಿದ ಮೋದಿ

ಹೊಸ ಸರ್ಕಾರದ ಕೆಲಸಕ್ಕೆ ತಯಾರಿ ಆರಂಭಿಸಿದ ಮೋದಿ

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಗೆಲುವಿನ ವಿಶ್ವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ದಿನಾಂಕ ಘೋಷಣೆಗೂ ಮುನ್ನ ಮುಂದಿನ ಸರ್ಕಾರದ ಕಾರ್ಯತಂತ್ರದತ್ತ ಗಮನ ಹರಿಸಿದ್ದಾರೆ. ಪಕ್ಷ ಗೆದ್ದರೆ ಮೊದಲ 100 ದಿನಗಳಲ್ಲಿ ಏನು ಮಾಡಬೇಕು ಎಂಬುದಕ್ಕೆ ಈಗಲೇ ಸಿದ್ಧತೆ ಆರಂಭಿಸುವಂತೆ ತಮ್ಮ ಸಹೋದ್ಯೋಗಿಗಳಿಗೆ ಸೂಚಿಸಿದ್ದಾರೆ.

ಮಾರ್ಚ್‌ 3 ರಂದು ಸಂಪುಟ ದರ್ಜೆ, ರಾಜ್ಯ ದರ್ಜೆ ಸಚಿವರನ್ನು ಒಳಗೊಂಡ ಇಡೀ ಮಂತ್ರಿಮಂಡಲ ಸಭೆ ಕರೆದಿರುವ ಮೋದಿ ಗೆದ್ದ ಮೇಲೆ ಮೊದಲ 100 ದಿನ ಏನು ಮಾಡಬೇಕೆಂಬುದರ ಬಗ್ಗೆ ಪ್ಲಾನ್‌ ತನ್ನಿ ಎಂದು ಸಂಪುಟ ಸಹೋದ್ಯೋಗಿಗಳಿಗೆ ಹೇಳಿದ್ದಾರೆ. ಬುಧವಾರ ನಡೆದ ಕ್ಯಾಬಿನೆಟ್‌ ಸಭೆಯಲ್ಲಿ ಮೋದಿ ತಮ್ಮ ಸಚಿವರಿಗೆ ಮುಂದಿನ 100 ದಿನಗಳ ಕ್ರಿಯಾ ಯೋಜನೆ ಮತ್ತು ಮುಂದಿನ ಐದು ವರ್ಷಗಳ ಮಾರ್ಗಸೂಚಿಯನ್ನು ತಜ್ಞರು, ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿ ರೂಪಿಸಬೇಕೆಂದು ತಾಕೀತು ಮಾಡಿದ್ದಾರೆ.

ಚುನಾವಣೆಯ ನಂತರ ಯಾರಿಗೆ ಯಾವ ಸಚಿವ ಸ್ಥಾನಗಳು ಸಿಗುತ್ತವೆ ಎಂಬುದನ್ನು ಪರಿಗಣಿಸದೇ ಈ ಕ್ರಿಯಾ ಯೋಜನೆಗಳನ್ನು ರೂಪಿಸಬೇಕು. ಚುನಾವಣೆ ಘೋಷಣೆಯಾದರೂ ಅಭಿವೃದ್ಧಿ ಕೆಲಸ ಕುಂಠಿತವಾಬಾರದು. ಈಗಲೇ ಕ್ರಿಯಾ ಯೋಜನೆ ಸಿದ್ಧಪಡಿಸಿದರೆ ಮೂರನೇ ಅವಧಿ ಆರಂಭದಲ್ಲೇ ಘೋಷಣೆ ಮಾಡಿ ಜಾರಿಗೊಳಿಸಲು ಸುಲಭವಾಗುತ್ತದೆ ಎಂದು ತಿಳಿಸಿದ್ದಾರೆ.

ದೆಹಲಿಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ್ದ ಮೋದಿ, ಮೂರನೇ ಬಾರಿಗೆ ಅಧಿಕಾರ ನಡೆಸಲು ಉದ್ದೇಶಿಸಿರುವುದು ಅಧಿಕಾರದ ಸುಖಕ್ಕಾಗಿ ಅಲ್ಲ, ದೇಶಕ್ಕೆ ತಮ್ಮ ಸೇವೆಯನ್ನು ಮುಂದುವರಿಸಲು ಪ್ರೇರಣೆ ಎಂದು ಹೇಳಿದ್ದಾರೆ. ಲೋಕಸಭೆ ಚುನಾವಣೆ ದಿನಾಂಕ ಘೋಷಣೆಯಾಗುವ ಮುನ್ನವೇ ಮೋದಿ ನೇತೃತ್ವದಲ್ಲಿ ಸಭೆ ನಡೆಯಲಿದೆ. ಪ್ರಸ್ತುತ ಚುನಾವಣಾ ಪ್ರಕ್ರಿಯೆಗಾಗಿ ವಿವಿಧ ರಾಜ್ಯಗಳ ಸಿದ್ಧತೆಯನ್ನು ಚುನಾವಣಾ ಆಯೋಗ ಪರಿಶೀಲಿಸುತ್ತಿದ್ದು, ಮಾರ್ಚ್‌ನಲ್ಲಿ ಚುನಾವಣಾ ವೇಳಾಪಟ್ಟಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

Previous Post
ದೇಶದ ಅತೀ ಉದ್ದದ ಕೇಬಲ್‌ ಸೇತುವೆ ಉದ್ಘಾಟಿಸಿದ ಪ್ರಧಾನಿ ಮೋದಿ
Next Post
3 ದಿನಕ್ಕೆ 25 ಕೋಟಿ ರೂ. ಗಳಿಸಿದ ‘ಆರ್ಟಿಕಲ್ 370’ ಸಿನಿಮಾ

Recent News