ಭಾರತದಲ್ಲೇ ವಿಶ್ವ ದಾಖಲೆ ನಿರ್ಮಿಸಲಿದ್ದಾರಾ ಅ್ಯಂಡರ್ಸನ್

ಭಾರತದಲ್ಲೇ ವಿಶ್ವ ದಾಖಲೆ ನಿರ್ಮಿಸಲಿದ್ದಾರಾ ಅ್ಯಂಡರ್ಸನ್

ಭಾರತ ಮತ್ತು ಇಂಗ್ಲೆಂಡ್ ನಡುವಣ 5 ಪಂದ್ಯಗಳ ಟೆಸ್ಟ್ ಸರಣಿಯ ಕೊನೆಯ ಮ್ಯಾಚ್ ಮಾರ್ಚ್ 7 ರಿಂದ ಶುರುವಾಗಲಿದೆ. ಧರ್ಮಶಾಲಾದ ಹೆಚ್ಪಿಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದ ಮೂಲಕ ವಿಶ್ವ ದಾಖಲೆ ಬರೆಯುವ ಅವಕಾಶ ಇಂಗ್ಲೆಂಡ್ ವೇಗಿ ಜೇಮ್ಸ್ ಅ್ಯಂಡರ್ಸನ್ ಮುಂದಿದೆ. ಟೆಸ್ಟ್ ಕ್ರಿಕೆಟ್ನಲ್ಲಿ ಈಗಾಗಲೇ 698 ವಿಕೆಟ್ಗಳನ್ನು ಕಬಳಿಸಿರುವ ಅ್ಯಂಡರ್ಸನ್ ಇನ್ನೆರಡು ವಿಕೆಟ್ ಪಡೆದರೆ ಹೊಸ ಇತಿಹಾಸ ನಿರ್ಮಾಣವಾಗಲಿದೆ. ಈ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ 700 ವಿಕೆಟ್ ಕಬಳಿಸಿದ ಮೊದಲ ವೇಗಿ ಎನಿಸಿಕೊಳ್ಳಲಿದ್ದಾರೆ.

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 700+ ವಿಕೆಟ್ ಕಬಳಿಸಿರುವುದು ಕೇವಲ ಇಬ್ಬರು ಬೌಲರ್ಗಳು ಮಾತ್ರ. ಆದರೆ ಈ ಇಬ್ಬರೂ ಕೂಡ ಸ್ಪಿನ್ನರ್ಗಳು ಎಂಬುದು ವಿಶೇಷ. ಶ್ರೀಲಂಕಾದ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಟೆಸ್ಟ್ನಲ್ಲಿ ಅತೀ ಹೆಚ್ಚು ವಿಕೆಟ್ ಕಬಳಿಸಿದ ವಿಶ್ವ ದಾಖಲೆ ಹೊಂದಿದ್ದಾರೆ. 133 ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಮುರಳೀಧರನ್ ಒಟ್ಟು 800 ವಿಕೆಟ್ ಕಬಳಿಸಿ ಈ ದಾಖಲೆ ನಿರ್ಮಿಸಿದ್ದಾರೆ. ಆಸ್ಟ್ರೇಲಿಯಾದ ಸ್ಪಿನ್ ಲೆಜೆಂಡ್ ಶೇನ್ ವಾರ್ನ್ ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ. ಆಸೀಸ್ ಪರ 145 ಟೆಸ್ಟ್ ಪಂದ್ಯಗಳನ್ನಾಡಿರುವ ವಾರ್ನ್ ಒಟ್ಟು 708 ವಿಕೆಟ್ಗಳನ್ನು ಕಬಳಿಸಿದ್ದಾರೆ.

ಇಂಗ್ಲೆಂಡ್ ವೇಗಿ ಜೇಮ್ಸ್ ಅ್ಯಂಡರ್ಸನ್ 186 ಟೆಸ್ಟ್ ಪಂದ್ಯಗಳಿಂದ ಇದುವರೆಗೆ 698 ವಿಕೆಟ್ ಕಬಳಿಸಿದ್ದಾರೆ. ಇನ್ನೆರಡು ವಿಕೆಟ್ ಪಡೆದ ಟೆಸ್ಟ್ ಕ್ರಿಕೆಟ್ನಲ್ಲಿ 700 ವಿಕೆಟ್ ಪಡೆದ ಮೊದಲ ವೇಗಿ ಹಾಗೂ 3ನೇ ಬೌಲರ್ ಎನಿಸಿಕೊಳ್ಳಲಿದ್ದಾರೆ. 41ನೇ ವಯಸ್ಸಿನಲ್ಲೂ ಕರಾರುವಾಕ್ ದಾಳಿ ಸಂಘಟಿಸುತ್ತಿರುವ ಜೇಮ್ಸ್ ಅ್ಯಂಡರ್ಸನ್ ಇನ್ನೊಂದೆರೆಡು ವರ್ಷ ಟೆಸ್ಟ್ ಕ್ರಿಕೆಟ್ನಲ್ಲಿ ಮುಂದುವರೆಯುವ ಸಾಧ್ಯತೆಯಿದೆ.

ಇದರ ನಡುವೆ 11 ವಿಕೆಟ್ ಕಬಳಿಸಿದರೆ ಶೇನ್ ವಾರ್ನ್ (708) ಅವರನ್ನು ಹಿಂದಿಕ್ಕಿ ಟೆಸ್ಟ್ ಕ್ರಿಕೆಟ್ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ವಿಶ್ವ ದಾಖಲೆಯನ್ನು ನಿರ್ಮಿಸಬಹುದು. ಜೇಮ್ಸ್ ಅ್ಯಂಡರ್ಸನ್ಗೆ ಇದು ಭಾರತದಲ್ಲಿನ ಕೊನೆಯ ಟೆಸ್ಟ್ ಎಂದು ವಿಶ್ಲೇಷಿಸಲಾಗುತ್ತಿದೆ. ಏಕೆಂದರೆ ಇಂಗ್ಲೆಂಡ್ ತಂಡ ಭಾರತದಲ್ಲಿ ತನ್ನ ಮುಂದಿನ ಟೆಸ್ಟ್ ಸರಣಿಯನ್ನು 2027-28ರಲ್ಲಿ ಆಡಲಿದೆ. ಈ ವೇಳೆಗೆ ಜೇಮ್ಸ್ ಅ್ಯಂಡರ್ಸನ್ ತಂಡದಲ್ಲಿರುವುದು ಅನುಮಾನ. ಹೀಗಾಗಿಯೇ ಭಾರತದಲ್ಲೇ ವಿಶ್ವ ದಾಖಲೆ ನಿರ್ಮಿಸಲು ಇದು ಜೇಮ್ಸ್ ಅ್ಯಂಡರ್ಸನ್ ಅವರಿಗೆ ಕೊನೆಯ ಅವಕಾಶ. ಅದರಂತೆ ಧರ್ಮಶಾಲಾ ಮೈದಾನದಲ್ಲಿ ನಡೆಯಲಿರುವ ಅಂತಿಮ ಟೆಸ್ಟ್ ಪಂದ್ಯದ ಮೂಲಕ ಅ್ಯಂಡರ್ಸನ್ 700 ವಿಕೆಟ್ಗಳ ಸಾಧನೆ ಮಾಡಲಿದ್ದಾರಾ ಎಂದು ಕಾದು ನೋಡಬೇಕಿದೆ.

Previous Post
ಬಡ ಕುಟುಂಬಗಳಿಗೆ ಮಾಸಿಕ 5 ಸಾವಿರ ರೂಪಾಯಿ : ಹೊಸ ಗ್ಯಾರಂಟಿ ಘೋಷಿಸಿದ ಕಾಂಗ್ರೆಸ್‌
Next Post
ಲೋಕಸಭೆ ಚುನಾವಣೆಗೂ ಮುನ್ನ ಸಿಎಎ ಜಾರಿ?

Recent News